ಹಾಸನ: ಬೇಲೂರು ತಾಲೂಕಿನ ಸಾಣೇನ ಹಳ್ಳಿಯ ಕೆರೆ ನಾಲ್ಕು ಎಕರೆ ವಿಸ್ತೀರ್ಣ ಹೊಂದಿದೆ. 2012ರ ಮುಂಗಾರಿನಲ್ಲಿ ಮಳೆಯ ಕೊರತೆಯಿಂದ ನೀರು ಶೇಖರಣೆಯಾಗದೆ ಕೆರೆ ಒಣಗಿದೆ. ಇದರಂತೆ ಈ ಊರಿನ ಕೃಷಿಕರ ಕೊಳವೆ ಬಾವಿಗಳಲ್ಲೂ ನೀರು ಬತ್ತಿಹೋಗಿದೆ.
ನೀರಿನ ಕೊರತೆ ನೀಗಿಸಲು ಕೆರೆಯಂಗಳದಲ್ಲಿ ಅಲ್ಲಲ್ಲಿ ಕೃಷಿ ಹೊಂಡದಂತಹ ರಚನೆ ಏಕೆ ಮಾಡಬಾರದು ಎಂದು ಇಲ್ಲಿನ ಪರಿಸರಪ್ರೇಮಿ ಎಸ್.ಎನ್.ಯೋಗೀಶಪ್ಪ ಯೋಚಿಸಿದರು. ಅವರು ತಮ್ಮ ಸಂಬಂಧಿಕರಾದ ರವಿಶಂಕರವರ ಹಿಟಾಚಿಯನ್ನು ಆರು ಗಂಟೆಗಳ ಕಾಲ ಬಳಸಿಕೊಂಡು ಹೊಂಡ ನಿರ್ಮಿಸಿದರು.
ಕೆರೆಯಂಗಳದ ಬಸಿ ನೀರು ಈ ಹೊಂಡದಲ್ಲಿ ಶೇಖರಣೆ ಆಯಿತು. ಒಂದು ತಿಂಗಳ ಹಿಂದೆ ತೆಗೆದ ಹೊಂಡದಲ್ಲಿ ಜನ ಬಳಸಿಯೂ ಈಗಲೂ ನೀರಿದೆ. ಶುದ್ಧವಾಗಿರುವ ಈ ನೀರನ್ನು ಜನರು ಕುಡಿಯಲು ಬಳಸುತ್ತಿದ್ದಾರೆ. ಜಾನುವಾರು ಗಳಿಗೂ ಬಳಸವಾಗುತ್ತಿದೆ. ಬಟ್ಟೆ ಶುದ್ದಿಗೆ ನೀರನ್ನು ಆಚೆ ತಂದು ಬಳಸುತ್ತಿದ್ದಾರೆ.
ನೀರಿನ ಬವಣೆಯ ಈ ಸಂದರ್ಭದಲ್ಲಿ ಇಂತಹ ಜನಪರ ಕಾಳಜಿ ಮೆಚ್ಚುವಂತದ್ದು. ಜನ ಜಾನುವಾರುಗಳ ನೀರಿನ ದಾಹ ನೀಗಿಸಲು ಇಂತಹ ಆಲೋಚನೆಗಳು ಪ್ರಯೋಜನಕಾರಿ. ಬರುವ ಬೇಸಿಗೆ ದಿನಗಳಲ್ಲಿ ನೀರಿನ ಲಭ್ಯತೆಗೆ ನೆರವಾಗಲು ಜಿಲ್ಲಾಡಳಿತ, ಜನಪ್ರತಿನಿಧಿಗಳು ಇತ್ತ ಗಮನ ಹರಿಸ ಬೇಕಾಗಿದೆ.
ಯುರೋ ಶಾಲೆಯಲ್ಲಿ ಕಲೆ, ವಿಜ್ಞಾನ ಪ್ರದರ್ಶನ
ಹಾಸನ: ನಗರದ ಯುರೋ ಶಾಲೆಯಲ್ಲಿ ಕಲೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಮೇಳ ಶಾಲೆಯ ಆವರಣದಲ್ಲಿ ನಡೆಯಿತು. ಸುಮಾರು 60 ಮಕ್ಕಳು ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ನಮೂನೆಯ ಅನೇಕ ಮಾದರಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದು, ನೋಡುಗರಿಗೆ ಮಾಹಿತಿ ಜೊತೆಗೆ ಸ್ಥಳದಲ್ಲಿಯೇ ಪ್ರಾತ್ಯಕ್ಷಿಕೆ ತೋರಿಸಿದರು. ಭಾರತದ ರೆಂಬ್ರಾಂಟ್ ಎಂಬ ಹೆಸರು ಪಡೆದ ಎಸ್.ಎಂ. ಪಂಡಿತ್ ಹೆಸರಿನ ಗ್ಯಾಲರಿಯಲ್ಲಿ ಮಕ್ಕಳು ರಚಿಸಿದ ಸುಮಾರು 1260 ಪೇಯಿಂಟ್ಸ್ಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಮಕ್ಕಳ ಮನಸ್ಸಿನಿಂದ ಮೂಡಿ ಬಂದ ಅಭಿವ್ಯಕ್ತಿಗಳನ್ನು ತಮ್ಮ ಕಲಾಕೃತಿಗಳಲ್ಲಿ ಮೂಡಿಸಿದ್ದಾರೆ.ಪ್ರಕೃತಿ ದುರಂತ, ಶಾಂತಿ ಮತ್ತು ಯುದ್ಧ, ಪ್ರಕೃತಿ ದೃಶ್ಯಗಳನ್ನು ಮನೋಜ್ಞವಾಗಿ ಚಿತ್ರ್ರಿಸಿದ್ದರು. ಈ ಮೇಳದ ವಿಶೇಷವೆಂದರೆ, ಪ್ಲಾಸ್ಟಿಕ್ನಿಂದ ಆಗುವ ಅನಾಹುತಗಳನ್ನು ಬಿಂಬಿಸುವ ಪ್ರತಿಷ್ಠಾಪನಾ ಕಲೆಯನ್ನು ಮಾಡಲಾ ಯಿತು. ಪ್ರಾಣಿಗಳು ಪ್ಲಾಸ್ಟಿಕ್ ತಿನ್ನುತ್ತವೆ. ಇದರಿಂದ ಭಾರೀ ಅನಾಹುತಗಳಾಗುತ್ತವೆ. ಇವುಗಳನ್ನು ತಡೆಗಟ್ಟಬೇಕು ಎಂದು ಎಲ್ಲಾ ಪೋಷಕರು ತಮ್ಮ ಹಸ್ತ ಬಣ್ಣಗಳಲ್ಲಿ ಅದ್ದಿ ತಮ್ಮ ಹಸ್ತ ಮುದ್ರೆಗಳನ್ನು ಚಿತ್ರಗಳ ಮೇಲೆ ಮೂಡಿಸಿದ್ದರು.