ಹೊಸ ಮುಖಗಳಿಗೆ ಜೆಡಿಎಸ್ ಮಣೆ

Updated on: 

-ಎಚ್.ವಿ.ರಾಘವೇಂದ್ರ
ಆಲೂರು: ಜೆಡಿಎಸ್ ಕಳೆದ ಸಾಲಿನಲ್ಲಿ ಆಡಳಿತ ನಡೆಸಿದ ಮೂವರು ಮಾಜಿ ಅಧ್ಯಕ್ಷರು ಹಾಗೂ ಇಬ್ಬರು ಉಪಾಧ್ಯಕ್ಷರು ಸೇರಿದಂತೆ ಎಲ್ಲ ಹಾಲಿ ಸದಸ್ಯರಿಗೆ ಟಿಕೆಟ್ ನೀಡದೇ ಈ ಬಾರಿ ಹೊಸ ಮುಖಗಳಿಗೆ ಆದ್ಯತೆ ನೀಡಿದೆ. ಅದರಲ್ಲಿ ಈ ಬಾರಿ ಸ್ಪರ್ಧಿಸಲು ಇಚ್ಛಿಸಿದ್ದ ಮಾಜಿ ಅಧ್ಯಕ್ಷರು ಬಂಡೆದ್ದು ಸ್ವತಂತ್ರ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದಾರೆ.
ಕಾಂಗ್ರೆಸ್ ಭಾಗಶ: ಹಿಂದಿನ ಸಾಲಿನಲ್ಲಿ ನಿಲ್ಲಿಸಿದ್ದ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದರೆ, ಕೆಜೆಪಿ, ಜೆಡಿಎಸ್‌ನಿಂದ  ಟಿಕೆಟ್ ವಂಚಿತರಾದ ಕೆಲವರು ಸೇರಿದಂತೆ ಹೊಸ ಮುಖಗಳನ್ನು ಹುಡುಕಿ ನಿಲ್ಲಿಸಿದೆ. ಬಿಜೆಪಿಯ ಮೂರು  ಸ್ಥಾನಗಳಿಗೆ ಯಾವುದೇ ಸಮಸ್ಯೆ ಇಲ್ಲದಂತೆ ಅಭ್ಯರ್ಥಿಗಳನ್ನು ನಿಲ್ಲಿಸಿದೆ.
ಖಾತೆ ತೆರೆದ ಜೆಡಿಎಸ್: ಎಲ್ಲ ಕ್ಷೇತ್ರಗಳಲ್ಲೂ ಇತರೆ ಪಕ್ಷದವರು ಅಭ್ಯರ್ಥಿಗಳನ್ನು ನಿಲ್ಲಿಸದರ ಪರಿಣಾಮ ಜೆಡಿಎಸ್ ಎರಡನೇ  ವಾರ್ಡ್ ಮರಸುಕೊಪ್ಪಲಿನಲ್ಲಿ ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿದ್ದ ಕ್ಷೇತ್ರದಲ್ಲಿ ಅನಾಯಾಸವಾಗಿ ಒಂದು ಸ್ಥಾನ ಪಡೆದು ಜಿಲ್ಲೆಯಲ್ಲಿ ಪ್ರಥಮವಾಗಿ ಖಾತೆ ತೆರೆದಿದೆ.
ಇನ್ನುಳಿದಂತೆ ಜೆಡಿಎಸ್‌ಗೆ ಕಾಂಗ್ರೆಸ್, ಕೆಜೆಪಿ, ಬಿಜೆಪಿ ತೀವ್ರ ಸ್ಪರ್ಧೆಯನ್ನು ಒಡ್ಡುವಂತಹ ಅಭ್ಯರ್ಥಿಗಳನ್ನೇ ನಿಲ್ಲಿಸಿವೆ. ಈ ಬಾರಿ ಯಾರಿಗೂ ಸ್ಪಷ್ಟ ಬಹುಮತ ದೊರೆಯುವ ಲಕ್ಷಣಗಳು ಕಾಣದಂತಾಗಿವೆ. ಪಪಂ  ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಸ್ವತಂತ್ರ ಅಭ್ಯರ್ಥಿಗಳ ಪಾತ್ರ ವಹಿಸುವ ಸಾಧ್ಯತೆಗಳಿವೆ.
ಒಟ್ಟಾರೆ ಈ  ಚುನಾವಣೆ ಮುಂಬರುವ ವಿಧಾನಸಭಾ ಚುನಾವಣೆಗೆ ಪರಿಣಾಮ ಬೀರುವ ಯಾವುದೇ ಸಾಧ್ಯತೆ ಇಲ್ಲ. ಏಕೆಂದರೆ ಇಲ್ಲಿ ಯಾವಾಗಲೂ ಪಟ್ಟಣ ಪಂಚಾಯ್ತಿ ಚುನಾವಣಾ ಫಲಿತಾಂಶದಿಂದ ಯಾವುದೇ ಪಕ್ಷದವರು ತಲೆ ಕೆಡೆಸಿಕೊಳ್ಳುವುದಿಲ್ಲ. ಕಾರಣ ಇದು ತಾಲೂಕು ಕೇಂದ್ರ ಮಾತ್ರ. ವಿಧಾನಸಭಾ ಕ್ಷೇತ್ರ  ಸಕಲೇಶಪುರವಾಗಿದೆ. ಇಲ್ಲಿ 2065 ಪುರುಷರು, 2044 ಮಹಿಳೆಯರು ಸೇರಿದಂತೆ ಒಟ್ಟು 4,109 ಮತದಾರರು ಇದ್ದಾರೆ. ಹೊಸದಾಗಿ 10-20 ಮತದಾರರು ಸೇರ್ಪಡೆಗೊಳ್ಳುವುದನ್ನು ಹೊರತುಪಡಿಸಿದರೆ 5 ಸಾವಿರಕ್ಕಿಂತಲೂ ಕಡಿಮೆ ಮತದಾರರು ಇರುವ ಆಲೂರು ಪಟ್ಟಣ ಪಂಚಾಯ್ತಿ ಫಲಿತಾಂಶ, ಆಲೂರು - ಸಕಲೇಶಪುರ ಎರಡೂ ತಾಲೂಕುಗಳೂ ಸೇರಿದಂತೆ ಹಾಸನದ ಕಟ್ಟಾಯ ಹೋಬಳಿ ಸೇರಿರುವ ದೊಡ್ಡಕ್ಷೇತ್ರದ ಅಭ್ಯರ್ಥಿಗಳು ವಿಧಾನಸಭೆ ಚುನಾವಣಾ ಅಭ್ಯರ್ಥಿಗಳು ಹಾಗೂ ಪಕ್ಷದವರು ಈ  ಫಲಿತಾಂಶದ  ಬಗ್ಗೆ ತಲೆ ಕೆಡೆಸಿಕೊಳ್ಳುವುದು ಅಸಾಧ್ಯ.
2011ರ ಜನಗಣಪತಿಯಂತೆ ಮತದಾರರ ಪಟ್ಟಿ  ಸಿದ್ಧವಾಗಿದ್ದರೆ, ಪಟ್ಟಣ ಪಂಚಾಯ್ತಿಯಲ್ಲಿ ಹೆಚ್ಚಿನ ಮತದಾರರ ಸಂಖ್ಯೆ ಹೆಚ್ಚಾಗುತ್ತಿದ್ದು, ವಾರ್ಡ್‌ಗಳ ಸಂಖ್ಯೆಯೂ ಹೆಚ್ಚಾಗಿ ಸ್ವಲ್ಪ ಮಟ್ಟಿನ ಬಿಸಿ ವಿಧಾನಸಭಾ ಚುನಾವಣೆಯ ಮೇಲೆ  ಬೀರಲಿದೆ.
ಈ ಬಾರಿಯ ಹೊಸ ಮೀಸಲಾತಿ ಪಟ್ಟಿಯಂತೆ ಚುನಾವಣೆ ನಡೆದಿದ್ದರೆ ಎಲ್ಲ ವರ್ಗದವರಿಗೂ ಸಮಾನ ನ್ಯಾಯ ದೊರೆಯುವ ಸಾಧ್ಯತೆಗಳಿತ್ತು. ಆದರೆ ಸರ್ಕಾರದ ಮಂದಗತಿ ಧೋರಣೆಯಿಂದಾಗಿ 2007ರ ಮೀಸಲಾತಿಯಂತೆ ಚುನಾವಣೆ ನಡೆದು, ಹಿಂದೆ ಗೆದ್ದಿದವರೇ ಅದೇ ಸ್ಥಾನಗಳಲ್ಲಿ ಗೆಲ್ಲಲ್ಲು ಅವಕಾಶ ಮಾಡಿಕೊಟ್ಟಂತಾಯಿತು.
60 ನಾಮಪತ್ರ:  ಜಿಲ್ಲೆಯಲ್ಲೇ ಅತಿ ಕಡಿಮೆ ವಾರ್ಡ್‌ಗಳೆಂದು ಹಾಗೂ ಹಾಸನ ನಗರಸಭೆಯ 4ನೇ ವಾರ್ಡ್‌ಗಿಂತ ದೊಡ್ಡ ವಾರ್ಡ್ ಆಗಿದ್ದು, ಕಡಿಮೆ ಮತದಾರರನ್ನು ಹೊಂದಿರುವ ಆಲೂರು ಪಟ್ಟಣ ಪಂಚಾಯ್ತಿಯ ಒಟ್ಟು 11 ಸ್ಥಾನಗಳಿಗೆ ಈಗಾಗಲೇ 13 ಮಂದಿ  ಸ್ವತಂತ್ರ ಅಭ್ಯರ್ಥಿಗಳು  ಸೇರಿದಂತೆ  60 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಈಗಾಗಲೇ  ಭರದಿಂದ  ಪ್ರಚಾರ  ಮಾಡುತ್ತಿದ್ದಾರೆ.
ಕಳೆದ 18 ರಿಂದ 21ರವರೆಗೂ ಕೇವಲ ಇಬ್ಬರು ನಾಮಪತ್ರ ಸಲ್ಲಿಸಿದ್ದರೆ  ಫೆ. 22 ರಂದು 31 ಮಂದಿ, 23 ರಂದು 14 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.  ಕಳೆದ ಬಾರಿ  ಪಟ್ಟಣ ಪಂಚಾಯ್ತಿಯ  ಆಡಳಿತ ಚುಕ್ಕಾಣಿ ಹಿಡಿದಿದ್ದ ಜೆಡಿಎಸ್‌ನಿಂದ ಸ್ಪರ್ಧಿಸಲು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿತ್ತು.
ಆದರೆ  ಬಿಜೆಪಿ, ಕೆಜೆಪಿ, ಕಾಂಗ್ರೆಸ್‌ನವರು ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿದ್ದರು. ಜೆಡಿಎಸ್ ಎಲ್ಲ  ವಾರ್ಡ್‌ಗಳಲ್ಲೂ ತಮ್ಮ  ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಕಾಂಗ್ರೆಸ್ 9,  ಕೆಜೆಪಿ - 9  ಸ್ಥಾನಗಳಿಗೆ  ಅಭ್ಯರ್ಥಿಗಳನ್ನು ನಿಲ್ಲಿಸಿದರೆ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ  ಕೇವಲ  3  ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸುವಲ್ಲಿ ಶಕ್ತವಾಯಿತು. ಇನ್ನುಳಿದಂತೆ ಬಿಎಸ್‌ಆರ್ ಕಾಂಗ್ರೆಸ್ -2, ಸ್ವತಂತ್ರ ಅಭ್ಯರ್ಥಿಗಳು 13 ಮಂದಿ ಕಣದಲ್ಲಿದ್ದಾರೆ.  ನಾಮಪತ್ರ ಪರಿಶೀಲನೆಯಲ್ಲಿ ತಿರಸ್ಕೃತಗೊಂಡ,ನಾಮಪತ್ರ ವಾಪಸ್ ಪಡೆದ ನಂತರ ಕಣದಲ್ಲಿ ಎಷ್ಟು ಮಂದಿ ಉಳಿಯುತ್ತಾರೆ ಎಂಬುದನ್ನು ನೋಡಬೇಕಿದೆ.  
ವಾರ್ಡ್‌ವಾರು ಮತದಾರರು:   ಇಲ್ಲಿರುವ 11 ವಾರ್ಡ್‌ಗಳಲ್ಲಿ  1ನೇ ವಾರ್ಡ್ ಮರಸು ಕಾಲೋನಿ ಬಡಾವಣೆಯಲ್ಲಿ 223 ಪುರುಷರು, 143 ಮಹಿಳೆಯರು, ಒಟ್ಟು  437 ಮತದಾರರಿದ್ದಾರೆ.  2ನೇ ವಾರ್ಡ್ ಮರಸು ಕೊಪ್ಪಲು ಬಡಾವಣೆಯಲ್ಲಿ 173ಪುರುಷರು, 168 ಮಹಿಳೆಯರು, ಒಟ್ಟು  341 ಮತದಾರರಿದ್ದಾರೆ. 3ನೇ ವಾರ್ಡ್ ಹೌಸಿಂಗ್ ಬೋರ್ಡ್  ಬಡಾವಣೆಯಲ್ಲಿ 181ಪುರುಷರು, 171 ಮಹಿಳೆಯರು, ಒಟ್ಟು  352 ಮತದಾರರಿದ್ದಾರೆ. 4ನೇ ವಾರ್ಡ್ ಸುಣ್ಣದ ಬೀದಿ ಬಡಾವಣೆಯಲ್ಲಿ 1873 ಪುರುಷರು, 166 ಮಹಿಳೆಯರು, ಒಟ್ಟು  353 ಮತದಾರರಿದ್ದಾರೆ.
5ನೇ ವಾರ್ಡ್ ದೊಡ್ಡಬೀದಿ ಬಡಾವಣೆಯಲ್ಲಿ 230 ಪುರುಷರು, 231 ಮಹಿಳೆಯರು, ಒಟ್ಟು  461 ಮತದಾರರಿದ್ದಾರೆ. 6ನೇ ವಾರ್ಡ್ ಹಳೇ ಆಲೂರು ಬಡಾವಣೆಯಲ್ಲಿ 136  ಪುರುಷರು, 195 ಮಹಿಳೆಯರು, ಒಟ್ಟು  388 ಮತದಾರರಿದ್ದಾರೆ. 7ನೇ ವಾರ್ಡ್ ಬಿಎಂ ರಸ್ತೆಯ ಬಡಾವಣೆಯಲ್ಲಿ  142 ಪುರುಷರು, 141  ಮಹಿಳೆಯರು, ಒಟ್ಟು  243 ಮತದಾರರಿದ್ದಾರೆ. 8ನೇ ವಾರ್ಡ್ ಖಾಜಿ ಮೊಹಲ್ಲಾ ಬಡಾವಣೆಯಲ್ಲಿ 150 ಪುರುಷರು, 186  ಮಹಿಳೆಯರು, ಒಟ್ಟು  336 ಮತದಾರರಿದ್ದಾರೆ.  9ನೇ ವಾರ್ಡ್ ಹಳೆ ಸಂತೇಬೀದಿ  ಬಡಾವಣೆಯಲ್ಲಿ  120ಪುರುಷರು, 114 ಮಹಿಳೆಯರು, ಒಟ್ಟು  234 ಮತದಾರರಿದ್ದಾರೆ. 10ನೇ ವಾರ್ಡ್ ಅಂಬೇಡ್ಗರ್ ನಗರ ಬಡಾವಣೆಯಲ್ಲಿ 232ಪುರುಷರು, 243 ಮಹಿಳೆಯರು, ಒಟ್ಟು 475 ಮತದಾರರಿದ್ದಾರೆ. 11ನೇ ವಾರ್ಡ್ ಆಶಾ ಬಡಾವಣೆಯಲ್ಲಿ 234 ಪುರುಷರು, 215 ಮಹಿಳೆಯರು, ಒಟ್ಟು  449 ಮತದಾರರಿದ್ದಾರೆ.

ಜೆಡಿಎಸ್ ಕಳೆದ ಸಾಲಿನಲ್ಲಿ ಆಡಳಿತ ನಡೆಸಿದ ಮೂವರು ಮಾಜಿ ಅಧ್ಯಕ್ಷರು ಹಾಗೂ ಇಬ್ಬರು ಉಪಾಧ್ಯಕ್ಷರು ಸೇರಿದಂತೆ ಎಲ್ಲ ಹಾಲಿ ಸದಸ್ಯರಿಗೆ ಟಿಕೆಟ್ ನೀಡದೇ ಈ ಬಾರಿ ಹೊಸ ಮುಖಗಳಿಗೆ ಆದ್ಯತೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com