ಹಾಸನ: ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ ಕಿರಿಯ ಸಂಶೋಧನಾ ಶಿಷ್ಯವೇತನ (J.R.F.) ಮತ್ತು ಉಪನ್ಯಾಸಕರ ಹುದ್ದೆಗಳ ಅರ್ಹತೆಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (N.E.T.) ನಡೆಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.ಯಾವುದೇ ಸ್ನಾತಕೋತ್ತರ ಪದವಿಯಲ್ಲಿ ಶೇ.55 ಅಂಕ ಗಳಿಸಿ ಉತ್ತೀರ್ಣರಾಗಿರಬೇಕು. (ಎಸ್.ಸಿ,ಎಸ್.ಟಿ ವಿದ್ಯಾರ್ಥಿಗಳಿಗೆ ಶೇಕಡ 50) ಅಂತಿಮ ವರ್ಷದಲ್ಲಿ ಎಂ.ಎಸ್ಸಿ,ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಬಹುದು. ಜೆ.ಅರ್.ಎಫ್ಗೆ 19 ವರ್ಷ ಮೇಲ್ಪಟ್ಟಿದ್ದು 28 ವರ್ಷಗಳೊಳಗಿರಬೇಕು. (1-1-2013ಕ್ಕೆ) (ಎಸ್.ಸಿ, ಎಸ್.ಟಿ, ಒಬಿಸಿಪಿಜಿ ವಿದ್ಯಾರ್ಥಿಗಳಿಗೆ 5 ವರ್ಷ ಸಡಿಲಿಕೆಯುಂಟು). ಪರೀಕ್ಷಾ ಶುಲ್ಕ-ಎಸ್.ಸಿ.,ಎಸ್.ಟಿ ಅಭ್ಯರ್ಥಿಗಳಿಗೆ 100 ರು, ಓಬಿಸಿ (ಕೇಂದ್ರ) ಅಭ್ಯರ್ಥಿಗಳಿಗೆ 200 ರು, ಇತರರಿಗೆ 400 ರು.ಆಗಿದೆ.
ಆನ್ಲ್ನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ಮಾರ್ಚ್ 2 ಕಡೇ ದಿನ. ಹೆಚ್ಚಿನ ಮಾಹಿತಿ ಮತ್ತು ಮಾರ್ಗದರ್ಶನಕ್ಕೆ ಉಪ ಮುಖ್ಯಸ್ಥರು, ವಿಶ್ವವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ ಮೈಸೂರು-6 ದೂರವಾಣಿ. 0821-2516844 ಅಥವಾ 88920-19297 ಇಲ್ಲಿಗೆ ಸಂಪರ್ಕಿಸಬಹುದು.
ಇಂದು ಟಿಪ್ಪು ವಿವಿ ಜಾಗೃತಿ ಬೈಕ್ ರ್ಯಾಲಿ
ಸಕಲೇಶಪುರ: ಮಂಜ್ರಾಬಾದ್ ಕೋಟೆಯಿಂದ ಶ್ರೀರಂಗಪಟ್ಟಣದ ದರಿಯ ದೌಲತ್ ವರೆಗೆ ಟಿಪ್ಪು ಸುಲ್ತಾನ್ ಜಾಗೃತಿ ಬೈಕ್ರ್ಯಾಲಿಯನ್ನು ಮಾ.3ರಂದು ಹಮ್ಮಿಕೊಳ್ಳಲಾಗಿದೆ ಎಂದು ವೀರ ಕನ್ನಡಿಗ ಟಿಪ್ಪು ಸೇನೆ ರಾಜ್ಯ ಸಂಘಟನ ಕಾರ್ಯದರ್ಶಿ ಮಲ್ನಾಡ್ ಹೇಳಿದರು.
ಈ ಸಂಬಂಧ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರ್ಯಾಲಿಯಲ್ಲಿ ಒಂದು ಸಾವಿರ ಬೈಕ್ಳೊಂದಿಗೆ ಟಿಪ್ಪು ಸುಲ್ತಾನ್ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು. ರ್ಯಾಲಿಯ ಉದ್ದೇಶ ಜನರಲ್ಲಿ ಟಿಪ್ಪು ಸುಲ್ತಾನ್ ಇರುವ ತಪ್ಪು ಕಲ್ಪನೆ ದೂರು ಮಾಡುವುದು. ಟಿಪ್ಪು ವಿಶ್ವವಿದ್ಯಾನಿಲಯ ಮುಸ್ಲಿಂ ವಿಶ್ವವಿದ್ಯಾನಿಲಯವಲ್ಲ. ಅದು ಅಲ್ಪಸಂಖ್ಯಾತರ ವಿಶ್ವವಿದ್ಯಾನಿಲಯವಾಗಿದೆ ಹಾಗೂ ಇದಕ್ಕೆ ಟಿಪ್ಪು ಹೆಸರಿಡುವುದೂ ಸೂಕ್ತವಾಗಿದೆ ಎಂದು ಆಗ್ರಹಿಸುವುದು. ಟಿಪ್ಪು ಸುಲ್ತಾನ್ ವಿರುದ್ದ ಸುಳ್ಳು ಹೇಳುತ್ತಾ ಅದನ್ನೇ ಇತಿಹಾಸ ಎನ್ನುವವರ ಮೇಲೆ ನ್ಯಾಯಾಲಯ ಸ್ವಯಂ ಪ್ರೇರಿತವಾಗಿ ಂೊಕದ್ದಮೆ ದಾಖಲು ಮಾಡಬೇಕು ಎಂದು ಆಗ್ರಹಿಸಲಾಗುವುದು ಎಂದರು.
3ರಂದು ಬೆಳಗ್ಗೆ 9 ಕ್ಕೆ ಹೊರಡುವ ರ್ಯಾಲಿ ಆಲೂರು ಮೂಲಕ ಬೆಳಗ್ಗೆ 10ಕ್ಕೆ ಹಾಸನ, 11ಕ್ಕೆ ಚನ್ನರಾಯಪಟ್ಟಣ ತಲುಪಲಿದೆ. ಶ್ರೀರಂಗಪಟ್ಟಣದ ದರಿಯ ದೌಲತ್ನಲ್ಲಿ ನಡೆಯುವ ಮುಕ್ತಾಯ ಸಮಾರಂಭದಲ್ಲಿ ಚಿಂತಕರಾದ ಅಗ್ನಿ ಶ್ರೀಧರ್, ತಲಕಾಡು ಚಿಕ್ಕರಂಗೇಗೌಡ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.ವೀರ ಕನ್ನಡಿಗ ಟಿಪ್ಪು ಸೇನೆ ತಾಲೂಕು ಅಧ್ಯಕ್ಷ ಝಕೀರ್ ಶಾಮಿಯಾನ, ಟಿಪ್ಪು ಸುಲ್ತಾನ್ ಯುವಕ ಸಂಘದ ಅಧ್ಯಕ್ಷ ಜುಭೇರ, ಕಾರ್ಯದರ್ಶಿ ಮಹಮ್ಮದ್ ಶಫಿ, ಟಿಪ್ಪು ಯುವಕ ಸಂಘದ ಅಧ್ಯಕ್ಷ ಹಮೀದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಯುವ ವಿಜ್ಞಾನಿ ಪ್ರಶಸ್ತಿಗೆ ಅರ್ಜಿ
ಹಾಸನ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು 2012-13ನೇ ಸಾಲಿನ ಯುವ ವಿಜ್ಞಾನಿ ಪ್ರಶಸ್ತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.ಅರ್ಹ ವಿದ್ಯಾರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ವಿವರ ಭರ್ತಿಗೊಳಿಸಿ,ತಮ್ಮ ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆಗಳನ್ನು, ನಾಮ-ನಿರ್ದೇಶನಗಳನ್ನು ಜಿಲ್ಲಾ ಹಂತದಲ್ಲಿ, ನಂತರ ರಾಜ್ಯ ಮಟ್ಟದಲ್ಲಿ ಪರಿಶೀಲಿಸಿ ಅತ್ಯುತ್ತಮ ಎಂದು ಪರಿಗಣಿಸಲ್ಪಟ್ಟ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಯುವ ವಿಜ್ಞಾನಿಯಾಗಿ ಆಯ್ಕೆಯಾಗುತ್ತಾರೆ.ಮಾ.10 ರೊಳಗಾಗಿ ಸಲ್ಲಿಸಬೇಕು. ಮಾಹಿತಿಗೆ ಕಾರ್ಯದರ್ಶಿ, ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಭವನ, ನಂ 24, 21ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ, ಬೆಂ-70, 080-26718939, 080-26718959 ಸಂಪರ್ಕಿಸಬಹುದು.
ಪ್ರೀತಿ ವಂಚಕನಿಗೆ 2 ವರ್ಷ ಜೈಲು
ಆಲೂರು: ಯುವತಿಯೊಬ್ಬಳನ್ನು ಪ್ರೀತಿಸಿ ಮೋಸ ಮಾಡಿದ ವಂಚಕನೊಬ್ಬನಿಗೆ ಇಲ್ಲಿನ ನ್ಯಾಯಾಲಯ ಶಿಕ್ಷೆ ವಿಧಿಸಿದೆ ಏ.19, 2002 ರಲ್ಲಿ ತಾರೇಶ್ ಎಂಬಾತ ಆಲೂರು ತಾಲೂಕಿನ ಕುಂಬಾರಹಳ್ಳಿ ಗ್ರಾಮದ ಪ್ರಭುಸ್ವಾಮಿ ಎಂಬುವರ ಪುತ್ರಿ ಜಲಜಾಕ್ಷಿಯನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಆಕೆಯೊಡನೆ ದೈಹಿಕ ಸಂಬಂಧ ಹೊಂದಿದ್ದನು.
ಗರ್ಭವತಿಯಾದ ಜಲಜಾಕ್ಷಿ ಮದುವೆ ಆಗಬೇಕೆಂದು ಕೇಳಿದಾಗ ಕೊಲೆ ಬೆದರಿಕೆ ಹಾಕಿ ಮದುವೆಯಾಗದೇ ಮೋಸ ಮಾಡಿದ್ದ. ಈ ಬಗ್ಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಧೀಶ ವಿ.ಹನುಮಂತಪ್ಪ ಆರೋಪಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಯು.ವಿನಯರಾಣಿ ವಾದಿಸಿದ್ದರು.
ಇಂದಿನಿಂದ ಯುವ ಶಿಬಿರ
ಜಾವಗಲ್: ಜಾವಗಲ್ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಆರೋಗ್ಯಕರ ಭಾರತಕ್ಕೆ ಆರೋಗ್ಯಕರ ಯುವಜನತೆ ಶಿಬಿರವನ್ನು ಮಾ.3 ರಿಂದ ಮಾ. 9 ರವರೆಗೆ ಜಾವಗಲ್ ಹೋಬಳಿ ನೇರ್ಲಿಗೆ ಗ್ರಾಪಂ ವ್ಯಾಪ್ತಿಯ ತಿಮ್ಮನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಶಿಬಿರದಲ್ಲಿ ನೈರ್ಮಲೀಕರಣ, ರಸ್ತೆ ದುರಸ್ತಿ, ಸಾರ್ವಜನಿಕ ಸ್ಥಳ ಮತ್ತು ಶಾಲಾ ಆವರಣ ಸ್ವಚ್ಛತೆ, ನೇತ್ರ ತಪಾಸಣೆ ಜಾನುವಾರು ತಪಾಸಣೆ, ಉಪನ್ಯಾಸ ಕಾರ್ಯಕ್ರಮ ಮಾರಕ ರೋಗಗಳ ಬಗ್ಗೆ ಜಾಗೃತಿ ಹಾಗೂ ಸಾಮಾಜಿಕ ಸೌಹಾರ್ದತೆ ಮತ್ತು ಭಾವೈಕ್ಯತೆ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಿಬಿರಾಧಿಕಾರಿ ಬಿ.ಶಿವಕುಮಾರ್ ತಿಳಿಸಿದ್ದಾರೆ. ಮಾ.3 ರಂದು ಬೆಳಗ್ಗೆ 11ಕ್ಕೆ ಉದ್ಘಾಟನೆಗೊಳ್ಳಲಿದ್ದು, ಜಿಲ್ಲಾ ಪಂಚಾಯ್ತಿ ಸದಸ್ಯ ಲಕ್ಷ್ಮಣ್ ಉದ್ಘಾಟನೆ ನೆರವೇರಿಸಲಿದ್ದಾರೆ. ಪ್ರಾಂಶುಪಾಲ ರೂಪ್ರಾಜ್ ಚಂದನ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಪಂ ಮಾಜಿ ಸದಸ್ಯ ರಾಜಶೇಖರ್, ತಾಪಂ ಸದಸ್ಯೆ ರಾಜೇಶ್ವರಿ, ಎಪಿಎಂಸಿ ನಿರ್ದೇಶಕ ಕೆ.ಸಿ.ನಾಗರಾಜು, ನೇರ್ಲಿಗೆ ಗ್ರಾಪಂ ಅಧ್ಯಕ್ಷ ಬಸವರಾಜು, ಉಪಾಧ್ಯಕ್ಷೆ ದೇವೀರಮ್ಮ ಭಾಗವಹಿಸಲಿದ್ದಾರೆ.
ಅಂಗವಿಕಲರ ಪಾಸ್ ವಿಸ್ತರಣೆ
ಹಾಸನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಅಂಗವಿಕಲರಿಗೆ ರಿಯಾಯ್ತಿ ದರದ ಬಸ್ ಪಾಸ್ ನೀಡಿದ್ದು, ಪಾಸುಗಳ ಅವಧಿ ಫೆ.28ಕ್ಕೆ ಅಂತ್ಯಗೊಂಡಿರುತ್ತದೆ. ಆದರೆ, ಆಡಳಿತಾತ್ಮಕ ಕಾರಣಗಳಿಂದ ಸದರಿ ಪಾಸುಗಳ ಅವಧಿಯನ್ನು ಮಾ. 31ರವರೆಗೆ ವಿಸ್ತರಿಸಲಾಗಿದೆ ಎಂದು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.