ಉಚಿತ ಆರೋಗ್ಯ ಚಿಕಿತ್ಸಾ ಶಿಬಿರ

Updated on: 

ಕ.ಪ್ರ.ವಾರ್ತೆ  ಹೊಳೆನರಸೀಪುರ ಮಾ. 20
ರಾಜ್ಯ ವಾಸವಿ ಕ್ಲಬ್ ನೂತನವಾಗಿ ಆರಂಭಿಸಿರುವ ಸನಾತನಧರ್ಮ ಯೋಜನೆಯಡಿ ರಾಜ್ಯದ ವಿವಿಧೆಡೆ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಿ ಸಮಾಜದಲ್ಲಿನ ಅತ್ಯಂತ ಕಡುಬಡವರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ ಅವರಿಗೂ ಸಹ ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಸಾಧ್ಯ ಎಂಬ ಆತ್ಮ ವಿಶ್ವಾಸವನ್ನು ಮೂಡಿಸುವುದು ತಮ್ಮ ಕ್ಲಬ್‌ನ ಆಶಯವಾಗಿದೆ ಎಂದು  ಬೆಂಗಳೂರಿನ ವಾಸವಿ ಯೂತ್ ಕ್ಲಬ್‌ನ ಮುಖ್ಯಸ್ಥ ನರೇಶ್‌ಬಾಬು ಹೇಳಿದರು.  
ಪಟ್ಟಣದ ಶ್ರೀವಾಸವಿ ಕ್ಲಬ್ ಹಾಗೂ ಮೈಸೂರಿನ ವಿಕ್ರಮ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಸಮಾಜದಲ್ಲಿ ಹಣ ಬಲ ಇರುವವರೆಲ್ಲ ಸಮಾಜ ಸೇವೆ ಮಾಡಲು ಸಾಧ್ಯವಿಲ್ಲ ಎಂದರು.
ಇತ್ತೀಚಿನ ದಿನಗಳಲ್ಲಿ ಮನುಷ್ಯ ಸಾತ್ವಿಕ ಆಹಾರವನ್ನು ಬಳಸುವುದನ್ನು ಕೈಬಿಟ್ಟು ಮನಬಂದಂತೆ ಆಹಾರವನ್ನು ಬಳಸುತ್ತಿರುವುದರಿಂದ ಇಲ್ಲದ ರೋಗ ರುಜಿನಗಳಿಗೆ ತುತ್ತಾಗುತ್ತಿದ್ಧಾನೆ. ಆದ್ದರಿಂದ ಮನುಷ್ಯ ತನ್ನ ಆರೋಗ್ಯ ಕಾಪಾಡಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕೆಂದು ಮನವಿ ಮಾಡಿದ ಅವರು, ಇಂತಹ ಶಿಬಿರಗಳು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಶ್ರೀಸಾಮಾನ್ಯನ ಆರೋಗ್ಯ ತಪಾಸಣೆ ನಡೆಸುವುದರಿಂದ ಆತನ ಆರೋಗ್ಯ ಕಾಪಾಡಿದ ಸಂತಣಪ್ತಿ ಇರಲಿದೆ ಎಂದು ನುಡಿದರು.
ವಿಕ್ರಂ ಆಸ್ಪತ್ರೆ ವೈದ್ಯ ಚಂದ್ರಶೇಖರ್ ಮಾತನಾಡಿ, ವಿಕ್ರಂ ಆಸ್ಪತ್ರೆಯ ವೈದ್ಯರ ತಂಡ ಇಲ್ಲಿಗೆ ಆಗಮಿಸಿದ್ದ ಮೂಲಭೂತವಾಗಿ ರೋಗಗಳ ತಪಾಸಣೆ ನಡೆಸಿ ಚಿಕಿತ್ಸೆ ಅವಶ್ಯ ಎನಿಸುವ ರೋಗಿಗಳಿಗೆ ತಮ್ಮ ಕೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ರೋಗ ಗುಣಪಡಿಸಲು ಸಹಕಾರಿ ಆಗಲಿದೆ ಎಂದು ಅಭಿಪ್ರಾಯಪಟ್ಟರು.
ಶಿಬಿರದಲ್ಲಿ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ತಪಾಸಣೆಗೆ ಆಗಮಿಸಿದ್ದ 74 ವರ್ಷದ ಅಪ್ಪೇಗೌಡ ಹೃದಯ ಬೇನೆಯಿಂದ ನರಳುತ್ತಿದ್ದು ಅವರಿಗೆ ತ್ವರಿತವಾಗಿ ಚಿಕಿತ್ಸೆ ಕೊಡಿಸದಿದ್ದಲ್ಲಿ ಜೀವಕ್ಕೆ ಕಂಟಕ ಇದೆ ಎಂಬುದನ್ನು ಮನದಟ್ಟು ಮಾಡಲಾಯಿತೆಂದು ತಪಾಸಣೆ ನಡೆಸಿದ ವೈದ್ಯರು ತಿಳಿಸಿದರು.
ಉಳಿದ ಮೂರ್ನಾಕು ಮಂದಿ ಹೃದಯ ಬೇನೆಗೆ ಒಳಗಾಗಿರುವ ರೋಗಿಗಳ ತಪಾಸಣೆ ನಡೆಸಿದ ವೈದ್ಯರ ತಂಡ ಮೈಸೂರಿನ ವಿಕ್ರಂ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆದುಕೊಳ್ಳಲು ಸಲಹೆ ನೀಡಲಾಯಿತೆಂದು ತಂಡದ ಚಂದ್ರಶೇಖರ್ ಹೇಳಿದರು.
ಅಧ್ಯಕ್ಷತೆ  ಕ್ಲಬ್‌ನ ಉಪಾಧ್ಯಕ್ಷ ಎ.ಮಂಜುನಾಥ್ ವಹಿಸಿದ್ದರು. ಎಸ್.ಗೋಕುಲ್ ನಿರೂಪಿಸಿದರು.

ಅಂತಾರಾಜ್ಯ ಚುಟುಕು ಕವಿಗೋಷ್ಠಿ
ಹಾಸನ: ಚುಟುಕು ಸಾಹಿತ್ಯ ಪರಿಷತ್ ಕಾಸರಗೋಡು ಹಾಗೂ ಮಂಗಳೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸಹಕಾರದೊಂದಿಗೆ ಕಾಸರಗೋಡಿನಲ್ಲಿ ಅಂತರ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿಯನ್ನು ಈ ತಿಂಗಳ ಕಡೆ ವಾರದಲ್ಲಿ ಏರ್ಪಡಿಸಲಾಗಿದೆ. ಭಾಗವಹಿಸಲು ಇಚ್ಛಿಸುವವರು 4 ಸಾಲಿನ 3 ಚುಟುಕುಗಳನ್ನು  ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ವಿದ್ಯಾರಣ್ಯಪುರಂ, ಮೈಸೂರು ಇಲ್ಲಿಗೆ ಪರಿಚಯದೊಂದಿಗೆ 5 ರು. ಗಳ 2 ಸ್ಟ್ಯಾಂಪ್‌ಗಳೊಂದಿಗೆ  ಕಳುಹಿಸುವಂತೆ ಕೋರಲಾಗಿದೆ. ಆಯ್ಕೆಯಾದ ಚುಟುಕು ಕವಿಗಳಿಗೆ ಅಂಚೆ ಮುಖಾಂತರ ತಿಳಿಸಲಾಗುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com