ಸಕಲೇಶಪುರ: ಸಕಲೇಶಪುರ ತಾಲೂಕು ವ್ಯಾಪ್ತಿಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಶನಿವಾರ ಎಡಕುಮರಿ ಎಂಬ ಬಳಿ ಪಶ್ಚಿಮಘಟ್ಟದ ಮಣ್ಣು ರೈಲ್ವೆ ಹಳಿ ಮೇಲೆ ಕುಸಿದಿದೆ. ಇದರಿಂದ ಮಂಗಳೂರು- ಬೆಂಗಳೂರು ನಡುವಿನ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮಧ್ಯಾಹ್ನ ಶಿರವಾಗಿಲು ಮತ್ತು ಅರೆಬೆಟ್ಟ ಮಧ್ಯದಲ್ಲಿ 72-100 ಮೈಲಿಗಲ್ಲಿನಲ್ಲಿ ಬೃಹತ್ ಗುಡ್ಡವೊಂದು ರೈಲ್ವೆ ಹಳಿ ಮೇಲೆ ಕುಸಿದು ಬಿದ್ದಿರುವುದರಿಂದ ರೈಲ್ವೆ ಸಂಚಾರವನ್ನು ನಿಲ್ಲಿಸಲಾಗಿದೆ. ವಿಷಯ ತಿಳಿದ ನಂತರ ರೈಲುಗಳು ಈ ಮಾರ್ಗವಾಗಿ ಸಂಚಾರವನ್ನು ನಡೆಸಿಲ್ಲ. ಇದರಿಂದ ಮಂಗಳೂರು-ಬೆಂಗಳೂರು ನಡುವಿನ ರೈಲು ತಾತ್ಕಾಲಿಕವಾಗಿ ಸಂಚಾರ ಸ್ಥಗಿತಗೊಂಡಿದೆ.
ಚುನಾವಣೆ ಮುಂದಕ್ಕೆ
ಬೇಲೂರು: ತಾಲೂಕಿನ ಸನ್ಯಾಸಿ ಹಳ್ಳಿ ಗ್ರಾಮ ಪಂಚಾಯ್ತಿ ಇತ್ತೀಚೆಗೆ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಸದಸ್ಯರ ಕೋರಂ ಕೊರತೆಯ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ತಾಲೂಕು ಪಂಚಾಯ್ತಿ ಇಓ ಬಸವರಾಜು ಚುನಾವಣೆಯನ್ನು ಮುಂದೂಡಲಾಯಿತು. ಸನ್ಯಾಸಿಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನವು ಬಿಸಿಎಂಬಿ ಮಹಿಳೆಗೆ ಮೀಸಲಾಗಿದ್ದ ಕಾರಣ ಕಳೆದ ಚುನಾವಣೆಯಲ್ಲಿ ಲತಾಮೋಹನ್ ಒಬ್ಬರೇ ಬಿಸಿಎಂಬಿ ಮಹಿಳೆಗೆ ಸೇರಿದ ಕಾರಣ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಈ ಸ್ಥಾನಕ್ಕೆ ಬುದವಾರ ಚುನಾವಣೆ ನಿಗದಿಯಾಗಿತ್ತು. ಆದರೆ ಸದಸ್ಯರ ಕೋರಂ ಕೊರತೆಯಿಂದಾಗಿ ಚುನಾವಣೆಯನ್ನು ಮುಂದೂಡಲಾಯಿತು.
ತಾಳೆಗೆ ಬೆಂಬಲ ಬೆಲೆ ಘೋಷಿಸಿ: ಎಂ.ಸಿ. ರಂಗಸ್ವಾಮಿ
ರಾಮನಾಥಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರತಿ ಕೆ.ಜಿ. ತಾಳೆಗೆ 16 ಬೆಂಬಲ ಬೆಲೆ ಘೋಷಿಸಿ, ಬೆಳೆಗಾರರ ಹಿತ ಕಾಯಬೇಕು ಎಂದು ಜಿಲ್ಲಾ ತಾಳೆ ಬೆಳೆಗಾರರ ಸಂಘ ಅಧ್ಯಕ್ಷ ಎಂ.ಸಿ. ರಂಗಸ್ವಾಮಿ ಆಗ್ರಹಿಸಿದ್ದಾರೆ. ತಾಲೂಕಿನ ರಾಮನಾಥಪುರದಲ್ಲಿ ದಕ್ಷಿಣ ತಾಳೆ ಬೆಳೆಗಾರರ ಸಂಘದ ಕಚೇರಿಯಲ್ಲಿ ಏರ್ಪಡಿಸಿದ್ದ ತಾಳೆ ಬೆಳೆಗಾರರ ಸಭೆಯಲ್ಲಿ ಮಾತನಾಡಿ, ಸರ್ಕಾರ ತಾಳೆ ಬೆಳೆಗಾರರನ್ನು ನಿರ್ಲಕ್ಷಿಸದೇ ಬೆಂಬಲ ಬೆಲೆ ನೀಡಿ ರೈತರ ಬೆಂಬಲಕ್ಕೆ ನಿಲ್ಲಬೇಕು ಎಂದರು. ವಿಶ್ವ ಮಾರುಕಟ್ಟೆಯಲ್ಲಿ ತಾಳೆ ಬೆಳೆ ಎಣ್ಣೆಯ ಬೆಲೆ ಇಳಿಕೆಯಿಂದ ಪ್ರತಿ ಟನ್ಗೆ ರು. 6000 ಸಾವಿರ ಸಿಗುತ್ತದೆ. ಆದರೆ ತಾಳೆ ಬೆಳೆ ಸಂಶೋಧನಾ ಕೇಂದ್ರವು ಪ್ರತಿ ಟನ್ಗೆ ಬೇಸಾಯದ ಖರ್ಚು ರು. 900 ಅಗುತ್ತಿದೆ ಎಂದು 2009-10ನೇ ಸಾಲಿನಲ್ಲಿ ತಾಳೆ ಬೆಳೆ ವೆಚ್ಚದ ಕುರಿತು ವರದಿ ನೀಡಿದೆ. 2014 -15ನೇ ಸಾಲಿನಲ್ಲಿ 1 ಟನ್ ತಾಳೆ ಹಣ್ಣು ಇಳುವರಿ ಪಡೆಯಲು ರು. 12ರಿಂದ 14 ಸಾವಿರ ಖರ್ಚು ಮಾಡಬೇಕಾಗುತ್ತದೆ. ಅದ್ದರಿಂದ ರಾಜ್ಯ ಸರ್ಕಾರವು ಪ್ರತಿ ಟನ್ಗೆ ರು. 16 ಸಾವಿರ ಬೆಂಬಲ ಬೆಲೆ ನೀಡಬೇಕು ಎಂದರು. ಸಂಘದ ಉಪಾಧ್ಯಕ್ಷ ಹಸಿರುತೋಟ ಕುಮಾರಸ್ವಾಮಿ, ಕಾರ್ಯದರ್ಶಿ ಎನ್.ಟಿ. ತಿಮ್ಮಯ್ಯ, ಅಂಕನಹಳ್ಳಿ ನಂಜುಂಡ ಪ್ರಭು, ಕೇಶವಮೂರ್ತಿ, ಕೆ.ಟಿ. ರಂಗಸ್ವಾಮಿ, ರಾಯರಕೊಪ್ಪಲು ಹರ್ಷ, ಸಂತೆ ಮರೂರು ಶ್ರೀಧರ್ ಅರಸ್, ಸತ್ಯ ಪ್ರಕಾಶ್ ಅರಸ್, ಮಗ್ಗೆ ರಂಗನಾಥ್, ಜಿಲ್ಲಾ ಸಂಚಾಲಕ ಎಂ.ಎಲ್. ಗೋವಿಂದ ರಾಜು ಇತರರು ಇದ್ದರು.