ಕನ್ನಡಪ್ರಭ ವಾರ್ತೆ ಬೇಲೂರು ಜು 14
ಹಳೇಬೀಡು ಹಾಗೂ ಮಾಧಿಹಳ್ಳಿ ಹೊಬಳಿಗಳ ರೈತರು ಮತ್ತು ತಾಲೂಕು ರೈತ ಸಂಘದ 30 ವರ್ಷಗಳ ಏತ ನೀರಾವರಿ ಹೊರಾಟಕ್ಕೆ ಇಂದು ನ್ಯಾಯ ದೊರಕಿದಂತಾಗಿದೆ ಎಂದು ಶಿವಪುರ ಮಹಾಮನೆಯ ಶ್ರೀಬಸವಾನಂದ ಸ್ವಾಮಿ ಹೇಳಿದರು.
ಬೇಲೂರಿನ ಯಗಚಿ ಅಣೇಕಟ್ಟೆಯಿಂದ ಹಳೇಬೀಡು ಹಾಗೂ ಮಾಧಿಹಳ್ಳಿ ಹೊಬಳಿಗಳ ಕೆರೆಗಳಿಗೆ ಏತ ನೀರಾವರಿ ಮೂಲಕ ರಾಮಚಂದ್ರಪುರ ಸಮೀಪದ ನೀರು ಹರಿಯುತ್ತಿರುವ ನಾಲೆಯಲ್ಲಿ ಗಂಗಾ ಪೂಜೆ ಸೋಮವಾರ ನೆರವೇರಿಸಿ, ಈಗ ಏತ ನೀರಾವರಿ ಮೂಲಕ ಹಳೇಬೀಡು ಮತ್ತು ಮಾಧಿಹಳ್ಳಿ ಹೋಬಳಿಗಳ ಕೆರೆಗಳಿಗೆ ನೀರು ತುಂಬಿಸುವಂತಾಗುತ್ತಿರುವುದು ತುಂಬ ಸಂತೋಷದ ವಿಷಯ. ಈ ಭಾಗದ ರೈತರು ಮತ್ತು ಹಳೇಬೀಡು ಕೆರೆ ತುಂಬಿದರೆ ಸುತ್ತಮುತ್ತಲಿನ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಿ, ರೈತರ ಬದುಕು ಉತ್ತಮಗೊಳ್ಳಲಿ ಎಂದರಲ್ಲದೆ ಈ ಹೊರಾಟದಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆ ತಿಳಿಸಿದರು. ಮುಂದಿನ ದಿನಗಳಲ್ಲಿ ಅಡಗೂರು ಕೆರೆ ನೀರು ತುಂಬಿಸುವ ಕಾಮಗಾರಿಯೂ ಶೀಘ್ರವಾಗಿ ಮುಗಿಯುವಂತಾಗಲಿ ಎಂದರು.
ಒತ್ತಾಯ: ನಂತರ ಮಾತನಾಡಿದ ಜಾವಗಲ್ ಕುಳಗುಂದ ಮಠದ ಶ್ರೀಜಯಚಂದ್ರ ಶೇಖರ ಸ್ವಾಮೀಜಿ, ಹಳೇಬೀಡು ಮಾಧಿಹಳ್ಳಿ ಹೊಬಳಿಗಳ ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ಹರಿಸುವಂತೆ ಒತ್ತಾಯಿಸಿ ಹೊರಾಟ ಮಾಡಿದ ಪರಿಣಮ ಇಂದು ನೀರು ಹರಿಸುವುದಕ್ಕೆ ಕರಣವಾಗಿದೆ ಎಂದರು.
ನಂತರ ಮಾತನಾಡಿದ ರೈತ ಸಂಘದ ಕಾರ್ಯದರ್ಶಿ ಸ್ವಾಮಿಗೌಡ, ಹಳೇಬೀಡು ಹಾಗೂ ಮಾಧಿಹಳ್ಳಿಗಳು ಬರಪೀಡಿತ ಪ್ರದೇಶವಾದ್ದವು. ಈ ಹೊಬಳಿಗಳ ಕೆರೆಗಳಿಗೆ ಬೇಲೂರಿನ ಯಗಚಿ ಅಣೇಕಟ್ಟೆಯಿಂದ ಏತ ನೀರಾವರಿ ಮೂಲಕ ನೀರು ಹರಿಸಬೇಕೆಂದು ಸಾಕಷ್ಟು ಹೊರಾಟಗಳು ಪಾದಯಾತ್ರೆಗಳು ನಡೆಸಿದ ಪರಿಣಾಮ ಏತ ನೀರಾವರಿ ಯೋಜನೆಯನ್ನು ಅಂದಿನ ಸರ್ಕಾರ ಜಾರಿಗೆ ತಂದು ಏತ ನೀರಾವರಿ ಕಾಮಗಾರಿಗೆ ಚಾಲನೆ ನೀಡಲಾಯಿತು ಎಂದರು.
ಗಂಗಾ ಪೂಜೆ ನೆರವೇರಿಸುವ ಕಾರ್ಯಕ್ರಮದ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಪದ್ಮಪ್ರಭು, ತಾಲೂಕು ರೈತ ಸಂಘದ ಭೋಗಮಲ್ಲೇಶ್, ಕೆ. ಸುದರ್ಶನ್, ಕೆ.ಪಿ. ಕುಮಾರ್, ಬಸವೇಗೌಡ, ಚನ್ನೇಗೌಡ, ಗಡಿ ಮಲ್ಲಿಕಾರ್ಜುನ್, ಶಿವಪ್ಪ, ಸಂಗಮ್, ಮುಖಂಡರಾದ ಕೊರಟಿಕೆರೆ ಪ್ರಕಾಶ್, ತಾಪಂ ಅಧ್ಯಕ್ಷ ಪರ್ವತಯ್ಯ, ಸದಸ್ಯ ರವಿಕುಮಾರ್, ನಳಿನಾ ಶಿವಕುಮಾರ್, ಬಸವರಾಜು ಹಾಗೂ ಮಹಿಳೆಯರು ಉಪಸ್ಥಿತರಿದ್ದರು. ವೀರಶೈವ ಯುವ ವೇದಿಕೆಯಿಂದ ಹತ್ತು ಸಾವಿರ ರುಪಾಯಿಗಳನ್ನು ದೇಣಿಗೆಯಾಗಿ ಅಧ್ಯಕ್ಷ ಉಮಾಶಂಕರ್ ವಿತರಿಸಿದರು.