ಸೋ.ಪೇಟೆ: ವಿಶೇಷ ದಾಖಲಾತಿ ಆಂದೋಲನ

Updated on: 

ಸೋಮವಾರಪೇಟೆ:  ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿದ್ಯಾರ್ಥಿಗಳು ವಿಶೇಷ ದಾಖಲಾತಿ ಆಂದೋಲನದ ಅಂಗವಾಗಿ ನಗರದಲ್ಲಿ ಮೆರವಣಿಗೆ ನಡೆಸಿ, ಜನರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ವಿದ್ಯಾರ್ಥಿಗಳು ಮತ್ತೆ ಶಾಲೆಗೆ ದಾಖಲಾಗುವಂತೆ ಪ್ರೇರಣೆ ನೀಡಿದರು. ಶಾಲಾ ಆವರಣದಿಂದ ಹೊರಟ ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳಲ್ಲಿ ಸಾಗುತ್ತಾ, ಘೋಷಣೆಗಳನ್ನು ಕೂಗಿ ಸಾರ್ವಜನಿಕರನ್ನು ಆಕರ್ಷಿತರಾಗುವಂತೆ ಮಾಡಿದರು. ಈ ಸಂದರ್ಭ ಮೆರವಣಿಗೆ ನೇತೃತ್ವವನ್ನು ಶಾಲಾ ಶಿಕ್ಷಕರಾದ ಚಿನ್ನಪ್ಪ ಹಾಗೂ ಶ್ರೀಹರ್ಷ ವಹಿಸಿದ್ದರು.

ಕುಟ್ಟ ಕೊಡವ ಸಮಾಜದಲ್ಲಿ 'ಕಕ್ಕಡ ನಮ್ಮೆ' ನಾಳೆ
ಗೋಣಿಕೊಪ್ಪಲು: ಕೊಡಗಿನಲ್ಲಿ ಕಕ್ಕಡ ಮಾಸಕ್ಕೆ ತನ್ನದೇ ಆದ ವಿಶೇಷತೆ ಇದ್ದು, ಕಕ್ಕಡ ನಮ್ಮೆಯನ್ನು ವಿಭಿನ್ನವಾಗಿ ಆಚರಿಸುವ ನಿಟ್ಟಿನಲ್ಲಿ ವಿರಾಜಪೇಟೆ ತಾಲೂಕಿನ ಗಡಿಭಾಗ ಕುಟ್ಟ ಕೊಡವ ಸಮಾಜ ದ್ವಿತೀಯ ವರ್ಷದ ಅದ್ಧೂರಿ ಕಕ್ಕಡ ನಮ್ಮೆ ಆಚರಣೆಗೆ ಸಿದ್ಧತೆ ನಡೆದಿದೆ. ಭಾನುವಾರ ಅಲ್ಲಿನ ಕೊಡವ ಸಮಾಜ ಆವರಣದಲ್ಲಿ  'ಕಕ್ಕಡ ನಮ್ಮೆ' ಕಾರ್ಯಕ್ರಮ ಭಾನುವಾರ ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ನಡೆಯಲಿದೆ ಎಂದು ಸಮಾಜದ ಅಧ್ಯಕ್ಷ ಕಲ್ಲಿಚಂಡ ವಿಷ್ಣುಕಾರ್ಯಪ್ಪ ತಿಳಿಸಿದ್ದಾರೆ. ವಿವಿಧ ಸಂಸ್ಥೆಗಳ ನೂತನ ವಾಹನಗಳ ಪ್ರದರ್ಶನವಲ್ಲದೆ, ಸೀರೆ, ಅಲಂಕಾರಿಕ ಸಾಧನಗಳು, ಮಹಿಳೆಯರ ಆಭರಣ, ಸೋಲಾರ್, ಸಿ.ಸಿ. ಟಿವಿ, ಕಂಪ್ಯೂಟರ್, ಅಧುನಿಕ ಮೊಬೈಲ್, ಮಣ್ಣಿನ ಗೊಂಬೆಗಳ ಮಾರಾಟ, ಪ್ರದರ್ಶನ ಒಳಗೊಂಡಂತೆ ಸುಮಾರು 20 ವಿಭಿನ್ನ ಮಳಿಗೆಗಳು ಕಕ್ಕಡ ನಮ್ಮೆಯ ಪ್ರಮುಖ ಆಕರ್ಷಣೆ ಎನ್ನಲಾಗಿದೆ. ತಿಂಡಿ ಮಾರಾಟ: ಎರಡು ದೊಡ್ಡ ಹೊಟೇಲ್‌ಗಳು ಕೊಡಗಿನ ಸಾಂಪ್ರದಾಯಿಕ ತಿಂಡಿ-ತಿನಿಸುಗಳ ಮಾರಾಟ ನಡೆಸಲಿವೆ. ಕೊಡಗಿನ ವೈನ್, ಕಾಚಂಪುಳಿ, ಪುನರ್ಪುಳಿ, ಜೇನು, ಬರ್ಗರ್, ಬ್ರೆಡ್ ಮತ್ತು ಬನ್, ಕೊಡಗಿನ ರುಚಿಕರ ಕಾಫಿ ಸ್ಟಾಲ್‌ಗಳು ಗಮನ ಸೆಳೆಯಲಿವೆ.  ಸನ್ಮಾನ: ಜಿ.ಪಂ. ನೂತನ ಅಧ್ಯಕ್ಷೆ ಶರೀನ್ ಸುಬ್ಬಯ್ಯ ಹಾಗೂ ಸಮಾಜದ ಮಾಜಿ ನಿರ್ದೇಶಕ ಸೂರತ್ ಸುಬ್ಬಯ್ಯ ಅವರನ್ನು ಪೂರ್ವಾಹ್ನ 11 ಗಂಟೆಗೆ ಸನ್ಮಾನಿಸಲಾಗುವುದು ಎಂದು ವಿಷ್ಣು ಕಾರ್ಯಪ್ಪ ತಿಳಿಸಿದ್ದಾರೆ. ಎರಡು ಅಂಗವಿಕಲರ ಶಾಲೆಗಳ ಮಕ್ಕಳು ತಯಾರಿಸಿದ ವಸ್ತುಗಳ ಮಾರಾಟ ಮಳಿಗೆಗೂ ಉಚಿತ ಅವಕಾಶ ನೀಡಲಾಗಿದೆ ಎಂದು ಕೊಡವ ಸಮಾಜ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾಹಿತಿ ನೀಡಿದ್ದಾರೆ.

ಪ್ರೆಸ್‌ಕ್ಲಬ್ ಸದಸ್ಯರಿಗೆ ಸ್ವಸಹಾಯ ಗುಂಪು
ಗೋಣಿಕೊಪ್ಪಲು: ಸದಸ್ಯರ ಆರ್ಥಿಕ ಸುಧಾರಣೆಗಾಗಿ ಸ್ವಸಹಾಯ ಗುಂಪು ತೆರೆಯುವಂತೆ ಗೋಣಿಕೊಪ್ಪಲು ಪ್ರೆಸ್ ಕ್ಲಬ್ ಸಭೆಯಲ್ಲಿ ನಿರ್ಧರಿಸಲಾಯಿತು. ಪಟ್ಟಣದ ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಅಧ್ಯಕ್ಷತೆಯಲ್ಲಿ ನಡೆದ ಗೋಣಿಕೊಪ್ಪಲು ಪ್ರೆಸ್‌ಕ್ಲಬ್ ಸಭೆಯಲ್ಲಿ ಸದಸ್ಯರು ಈ ಬಗ್ಗೆ ಪ್ರಸ್ತಾಪಿಸಿ, ಸಮಾಜ ಸುಧಾರಣೆಯಲ್ಲಿ ತೊಡಗಿರುವ ಪತ್ರಕರ್ತರು ಆರ್ಥಿಕವಾಗಿ ಹಿಂದುಳಿದಿದ್ದೇವೆ. ಇದರಿಂದಾಗಿ ಸ್ವ-ಸಹಾಯ ಸಂಘ ಸ್ಥಾಪಿಸುವ ಮೂಲಕ ನಮ್ಮಲ್ಲಿ ಆರ್ಥಿಕ ಸುಧಾರಣೆಗೆ ಸಹಕಾರಿಯಾಗಲಿದೆ ಎಂದು ನಿರ್ಧರಿಸಲಾಯಿತು.  ಉಪಾಧ್ಯಕ್ಷ ಕೋಳೆರ ಸನ್ನು ಕಾವೇರಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ಕೆ ಜಗದೀಶ್, ಖಜಾಂಚಿ ವಿ.ವಿ. ಅರುಣ್ ಕುಮಾರ್, ನಿರ್ದೇಶಕರಾದ ಕುಪ್ಪಂಡ ದತ್ತಾತ್ರಿ, ಟಿ.ಎನ್.ಗೋವಿಂದಪ್ಪ, ಜಗದೀಶ್ ಜೋಡುಬೀಟಿ ಹಾಗೂ ಪುತ್ತಂ ಪ್ರದೀಪ್ ಇದ್ದರು.

ಇಗ್ಗುತ್ತಪ್ಪ ಕೊಡವ ಸಂಘ ಅಧ್ಯಕ್ಷ ರಜನ್ ತಿಮ್ಮಯ್ಯ
ಗೋಣಿಕೊಪ್ಪಲು: ಇಲ್ಲಿನಶ್ರೀ ಇಗ್ಗುತ್ತಪ್ಪ ಕೊಡವ ಸಂಘ (ರಿ) ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ವಕೀಲ ಸಣ್ಣುವಂಡ ರಜನ್ ತಿಮ್ಮಯ್ಯ ಆಯ್ಕೆಯಾಗಿದ್ದಾರೆ.  ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಡಾ. ತೀತಿರ ರೇಖಾ ವಸಂತ್ ಕಾರ್ಯದರ್ಶಿಯಾಗಿ, ಚೆರಿಯಪಂಡ ಪೂಣಚ್ಚ ಖಜಾಂಚಿಯಾಗಿ, ಉಪಾಧ್ಯರಾಗಿ  ಚೊಟ್ಟೆಯಂಡಮಾಡ ಮಾದಪ್ಪ, ಪೊನ್ನಿಮಾಡ ಸುರೇಶ್ ಆಯ್ಕೆಯಾದರು.  ನಿರ್ದೇಶಕರಾಗಿ ಕುಪ್ಪಂಡ ದತ್ತಾತ್ರಿ, ಕಲ್ಯಾಟಂಡ ನಂಜಪ್ಪ, ಹೊಟ್ಟೇಂಗಡ ಹೇಮಂತ್, ಮಚ್ಚಮಾಡ ಸೂರಜ್, ಮುರುವಂಡ ಜಯ, ಬಿಟ್ಟಿಯಂಡ ಚಂಗಪ್ಪ, ಚೆಂಬಾಂಡ ಮೀನ, ಚೇಂದಂಡ ಸುಮಿ ಸುಬ್ಬಯ್ಯ, ನಾಮೇರ ರೇಖಾ ಸೋಮಯ್ಯ, ಶಾಂತೆಯಂಡ ಮಧು, ಮಲಚೀರ ಮುತ್ತಪ್ಪ, ಚೆಂಬಾಂಡ ದೇವಯ್ಯ ಆಯ್ಕೆ ಆಗಿರುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com