ಕಾಡಾನೆ ನಿಯಂತ್ರಣಕ್ಕೆ ವ್ಯಾಪಕ ಒತ್ತಡ

Updated on: 

ಮಡಿಕೇರಿ: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮೀಣ ಭಾಗದಲ್ಲಿ ವಾಸ ಮಾಡುವುದೇ ಕಷ್ಟವಾಗಿದೆ. ಕಾಡಾನೆ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.
ನಗರದ ಕೋಟೆ ಹಳೆ ವಿಧಾನ ಸಭಾಂಗಣದಲ್ಲಿ ಗುರುವಾರ ಸಂಜೆಯವರೆಗೂ ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸಿದ ಬಾಂಡ್ ಗಣಪತಿ ಮತ್ತು ಎಂ.ಎಸ್. ವೆಂಕಟೇಶ್,  ಗಾಳಿಬೀಡು, ಮಾಲ್ದಾರೆ, ತಿತಿಮತಿ ಮತ್ತಿತರ ಕಡೆಯಲ್ಲಿ ಜನರು ಜೀವ ಭಯದಿಂದ ಓಡಾಡುವಂತಾಗಲಿದೆ. ಇನ್ನು ಮಕ್ಕಳು ಶಾಲೆಗೆ ಹೋಗುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಕಾಡಾನೆ ಹಾವಳಿ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಸ್ಪಂದನೆ ನೀಡುತ್ತಿಲ್ಲ ಎಂಬ ದೂರು ಸಾರ್ವಜನಿಕರಿಂದ ಕೇಳಿಬರುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಕ್ರಮವಹಿಸಬೇಕಿದೆ ಎಂದರು.
ತಂಡ ರಚನೆ: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶರಣ ಬಸಪ್ಪ ಮಾತನಾಡಿ, ಕಾಡಂಚಿನ ಭಾಗದಲ್ಲಿ ರ್ಯಾಪಿಡ್ ರೆಸ್ಪಾನ್ಸ್ ತಂಡವನ್ನು ರಚಿಸಲಾಗಿದ್ದು, ಸ್ಥಳೀಯರು ಕಾಡಾನೆ ಹಾವಳಿ ಬಗ್ಗೆ ದೂರವಾಣಿ ಮೂಲಕ ಮಾಹಿತಿ ನೀಡಿದರೆ ತಕ್ಷಣವೇ ತಂಡವು ಸ್ಥಳಕ್ಕೆ ತೆರಳಿ ಕಾಡಾನೆಯನ್ನು ಓಡಿಸಲಿದೆ. ಆನೆ- ಮಾನವ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮರಳು ದೊರೆಯುತ್ತಿಲ್ಲ: ಜಿಲ್ಲೆಯಲ್ಲಿ ವಸತಿ ಯೋಜನೆಗಳು ಹಾಗೂ ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಸಮರ್ಪಕವಾಗಿ ಮರಳು ದೊರೆಯುತ್ತಿಲ್ಲ. ಸಾರ್ವಜನಿಕರಿಗೆ ಸುಲಭವಾಗಿ ಮರಳು ದೊರೆಯುವಂತಾಗಬೇಕು ಎಂಬ ಬಗ್ಗೆ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು.   
ಹೊಸ ಮರಳು ನೀತಿಯಿಂದ ಬಡವರೂ ಸಹ ಹಣ ನೀಡಿ ಮರಳನ್ನು ಪಡೆಯುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಬಸವ, ಅಂಬೇಡ್ಕರ್, ಇಂದಿರಾ ಅವಾಸ್ ವಸತಿ ಯೋಜನೆಗಳ ಮನೆ ನಿರ್ಮಾಣಕ್ಕೆ ತೊಂದರೆಯಾಗಿದೆ. ಆದ್ದರಿಂದ ಸಂಬಂಧಿಸಿದವರು ಇತ್ತ ಗಮನಹರಿಸಬೇಕು ಎಂದು ಸದಸ್ಯ ಬಾಂಡ್ ಗಣಪತಿ ಒತ್ತಾಯಿಸಿದರು.
ಸ್ಟಾಕ್ ಯಾರ್ಡ್‌ನಿಂದ ವಿತರಣೆ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹ್ಯಾರಿ ಮಾತನಾಡಿ, ಜಿಲ್ಲೆಯ ಸ್ಟಾಕ್ ಯಾರ್ಡ್‌ನಿಂದ ಮರಳು ಬ್ಲಾಕ್ ಮಾಡಿ ವಿತರಣೆ ಮಾಡಲಾಗುತ್ತದೆ. ಅಕ್ರಮ ಮರಳು ಸಾಗಾಣಿಕೆ ತಡೆಯುವ ದಿಸೆಯಲ್ಲಿ ಈ ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿ.ಪಂ. ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ ಮಾತನಾಡಿ, ಜಿಲ್ಲೆಯ ಸಾರ್ವಜನಿಕರಿಗೆ ಸುಲಭವಾಗಿ ಮರಳು ದೊರೆಯುವಂತಾಗಬೇಕು. ಆ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಲಾಗುವುದು ಎಂದರು.    
ಸಾಮಾಜಿಕ ಅರಣ್ಯ ಇಲಾಖೆಯಿಂದ ಸಿಲ್ವರ್ ಗಿಡಗಳನ್ನು ಒಂದು ಗಿಡಕ್ಕೆ ಒಂದು ರು. ನಂತೆ ಕಳೆದ ಬಾರಿ ವಿತರಣೆ ಮಾಡಲಾಗಿದೆ. ಆದರೆ, ಈ ಹಣ ಎಲ್ಲಿ ಜಮೆಯಾಗಿದೆ ಎಂಬ ಮಾಹಿತಿ ಒದಗಿಸುವಂತೆ ಟಿ.ಪಿ. ಸಂದೇಶ್ ಪಟ್ಟುಹಿಡಿದರು.
ಇದಕ್ಕೆ ಮಾಹಿತಿ ನೀಡಿದ ಸಾಮಾಜಿಕ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ,  ಸಿಲ್ವರ್ ಗಿಡಗಳು ಸಂಪೂರ್ಣವಾಗಿ ವಿತರಣೆಯಾದ ನಂತರ ಸರ್ಕಾರಕ್ಕೆ ಹಣ ಜಮೆ ಮಾಡಲಾಗುವುದು ಎಂದು  ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಟಿ.ಪಿ. ಸಂದೇಶ್, ಈಗ ವಿತರಣೆ ಮಾಡಲಾಗಿರುವ ಗಿಡಗಳಿಗೆ ಹಣ ವಸೂಲಿ ಮಾಡಲಾಗಿದೆ. ಆ ಹಣ ಯಾರ ಬಳಿ ಇದೆ ಎಂಬುದನ್ನು ಮಾಹಿತಿ ಒದಗಿಸಬೇಕು ಎಂದರು.   
ಎಚ್ಚರಿಕೆ: ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸರಾವ್ ಮಾತನಾಡಿ, ಕಾಲ ಕಾಲಕ್ಕೆ ಹಣ ಜಮೆ ಮಾಡಬೇಕು. ಇಲ್ಲದಿದ್ದಲ್ಲಿ ಬಡ್ಡಿ ಸಮೇತ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತೋಟಗಾರಿಕೆ ಇಲಾಖೆ ಮೂಲಕ ರೈತರಿಗೆ ಸಕಾಲದಲ್ಲಿ ಕಾಳು ಮೆಣಸು ಗಿಡಗಳನ್ನು ವಿತರಣೆ ಮಾಡಬೇಕು ಎಂದು ಎಂ.ಎಸ್. ಕುಶಾಲಪ್ಪ, ಸರಿತಾ ಪೂಣಚ್ಚ, ಬಾನಂಡ ಪ್ರಥ್ಯು, ಶಕುಂತಲ ರವೀಂದ್ರ ಮತ್ತಿತರರು ಒತ್ತಾಯಿಸಿದರು.
ಜಿ.ಪಂ. ಸದಸ್ಯರಾದ ಬಿ. ಶಿವಪ್ಪ, ಶಾಂತೆಯಂಡ ರವಿಕುಶಾಲಪ್ಪ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎನ್. ರಾಜಾರಾವ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.
ಪಡಿತರ ಆಹಾರ ವಿತರಣೆಯಲ್ಲಿ ಸಾಕಷ್ಟು ಲೋಪಗಳಿದ್ದು, ಇದನ್ನು ಸರಿಪಡಿಸಬೇಕಿದೆ ಎಂದು ಎಂ.ಎಸ್. ವೆಂಕಟೇಶ್ ಒತ್ತಾಯಿಸಿದರು.  ಮಾಯಾಮುಡಿಯಲ್ಲಿ ಅಕ್ರಮ ಮದ್ಯ-ಸಾರಾಯಿ ಮಾರಾಟವಾಗುತ್ತಿದ್ದು, ಇದನ್ನು ನಿಯಂತ್ರಣ ಮಾಡಬೇಕಿದೆ ಎಂದು ಬಾನಂಡ ಎನ್.ಪ್ರಥ್ಯು ತಿಳಿಸಿದರು.

ಹೆದ್ದಾರಿ ನಿರ್ಮಾಣ ಪ್ರಸ್ತಾಪಕ್ಕೆ ವಿರೋಧ
ಕೇರಳದಿಂದ ತಲಕಾವೇರಿ ವನ್ಯಧಾಮ ಮೂಲಕ ಬೆಂಗಳೂರಿಗೆ ಅಂತಾರಾಜ್ಯ ಹೆದ್ದಾರಿ ನಿರ್ಮಾಣದ ಪ್ರಸ್ತಾಪವನ್ನು ಪ್ರತಿಭಟನಾಕಾರರು ತೀವ್ರವಾಗಿ ವಿರೋಧಿಸಿದರು. ಪರಿಸರ ಅಸಮತೋಲನಕ್ಕೆ ಕಾರಣವಾಗಲಿರುವ ಈ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಅರಣ್ಯ ಕಾಯ್ದೆಗೆ ವಿರುದ್ಧವಾಗಿರುವ ಕೇರಳ ಸರ್ಕಾರದ ಈ ಪ್ರಸ್ತಾಪವನ್ನು ಕರ್ನಾಟಕ ತಿರಸ್ಕರಿಸಬೇಕೆಂದು ಒತ್ತಾಯಿಸಿದರು.

ಕಾಡಾನೆ ಹಾವಳಿಯೇ, ಎಸ್‌ಎಂಎಸ್ ಮಾಡಿ!
ಕಾಡಾನೆಗಳು ಗ್ರಾಮಕ್ಕೆ ಲಗ್ಗೆ ಇಟ್ಟರೆ ತಕ್ಷಣ ಎಫ್.ಎಂ. (ಆಕಾಶವಾಣಿ)ಗೆ ಎಸ್‌ಎಂಎಸ್ ಮಾಡಿ... ಇದು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗನ್ ಮೋಹನ್ ಶರ್ಮ ಪ್ರತಿಭಟನಾಕಾರರಿಗೆ ನೀಡಿದ ಉಚಿತ ಸಲಹೆ.  ಪ್ರತಿಭಟನೆ ನಡೆಯುತ್ತಿದ್ದಾಗ ಸ್ಥಳಕ್ಕೆ ಆಗಮಿಸಿದ ಅಧಿಕಾರಿ, ಕೊಡಗಿನಲ್ಲಿ ಆಕಾಶವಾಣಿ ಅತ್ಯಂತ ಪ್ರಬಲ ಮಾಧ್ಯಮವಾಗಿದ್ದು, ಕಾಡಾನೆ ಹಾವಳಿ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ದೊರೆಯಲು ಎಫ್‌ಎಂಗೆ ಎಸ್‌ಎಂಎಸ್ ಮಾಡುವಂತೆ ಈಗಾಗಲೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.  ಮಾಹಿತಿ ದೊರೆತ ತಕ್ಷಣ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸುತ್ತಾರೆ ಎಂದು ಸಮಜಾಯಿಷಿ ನೀಡಿದರು. ಪ್ರತಿಭಟನಾ ನಿರತರು ಪ್ರತ್ಯುತ್ತರ ನೀಡಿ, ವಿದ್ಯುತ್ ಕಡಿತದಿಂದಾಗಿ ಬೆಳೆಗಾರರಿಗೆ ರೇಡಿಯೊ ಕೇಳಲು ಸಾಧ್ಯವಾಗುತ್ತಿಲ್ಲವೆಂದು ತಿಳಿಸಿದರಲ್ಲದೆ. ಅರಣ್ಯ ಸಿಬ್ಬಂದಿ ಕರ್ತವ್ಯ ಲೋಪದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬೆಳಗ್ಗೆ ಕಾಣಿಸಿಕೊಳ್ಳುವ ಕಾಡಾನೆ ಓಡಿಸಲು ಅರಣ್ಯ ಸಿಬ್ಬಂದಿ ಸಂಜೆ 6ರ ನಂತರ ಆಗಮಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಆನೆಗಳಿಗೆ ಅಗತ್ಯವಿರುವ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು.
ಅಸಹಾಯಕತೆ: ಕಾಡಾನೆಗಳನ್ನು  ನಾಯಿಗಳಂತೆ  ನಿಯಂತ್ರಿಸಲು ಸಾಧ್ಯವಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದ ಶರ್ಮ, ಆನೆ ಕಂದಕ ಮತ್ತು ಸೌರಬೇಲಿ ನಿರ್ಮಾಣದ ಯೋಜನೆ ಪ್ರಗತಿಯಲ್ಲಿದ್ದು, ಇವುಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ರು. 1.24 ಕೋಟಿಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾಡಾನೆಗಳ ನಿಯಂತ್ರಣಕ್ಕೆ  ಶಾಶ್ವತ ಪರಿಹಾರಕ್ಕಾಗಿ ಸಮಗ್ರ ವರದಿ ತಯಾರಿಸಲಾಗುತ್ತಿದ್ದು, ಸರ್ಕಾರಕ್ಕೆ ಸದ್ಯದಲ್ಲಿಯೇ ನೀಡಲಾಗುತ್ತದೆ ಎಂದರು.
ವನ್ಯ ಮೃಗಗಳಿಂದ ಅಸುನೀಗುವ ಜಾನುವಾರುಗಳಿಗೆ ನೀಡಲಾಗುವ ಪರಿಹಾರದ ಮೊತ್ತವನ್ನು ರು. 3 ಸಾವಿರದಿಂದ 25 ಸಾವಿರಕ್ಕೆ ಏರಿಕೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡಿರುವುದಾಗಿ ತಿಳಿಸಿದರು.

ಕಾವೇರಿಸೇನೆ ತೀವ್ರ ಪ್ರತಿಭಟನೆ
ಮಡಿಕೇರಿ: ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಹೆಚ್ಚಾಗಿರುವ ಕಾಡಾನೆ ಹಾವಳಿ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಕಾವೇರಿಸೇನೆ ನೇತೃತ್ವದಲ್ಲಿ ಗ್ರಾಮಸ್ಥರು ಹಾಗೂ ಬೆಳೆಗಾರರು ನಗರದ ಅರಣ್ಯ ಭವನದ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು. ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ಕೃಷಿಕರು ಕಾಡಾನೆಗಳ ಹಾವಳಿಯಿಂದ ಬೇಸತ್ತಿದ್ದು, ಸಾಕಷ್ಟು ಹಾನಿಯಾಗಿದೆ, ಇನ್ನು ತಾಳ್ಮೆಯಿಂದ ಇರುವುದು ಅಸಾಧ್ಯ ಎಂದು ಅರಣ್ಯಾಧಿಕಾರಿಗಳನ್ನು ಎಚ್ಚರಿಸಿದರು.
ಫಸಲು ಹಾನಿ: ಜಿಲ್ಲೆಯಲ್ಲಿ 10 ವರ್ಷಗಳಿಂದ ಕಾಡಾನೆಗಳ ನಿರಂತರ ದಾಳಿಯಿಂದಾಗಿ ರೈತರು ಶೇ. 50ಕ್ಕೂ ಹೆಚ್ಚು ಫಸಲು ಕಳೆದುಕೊಳ್ಳುತ್ತಿದ್ದಾರೆ. ನೂರಾರು ಮುಗ್ಧ ಜನರು ಕಾಡಾನೆ ದಾಳಿಗೆ ತುತ್ತಾಗುತ್ತಿದ್ದಾರೆ. ಆನೆ ಪಥ ಮತ್ತು ಅವುಗಳ ಆವಾಸ ಸ್ಥಾನಗಳಲ್ಲಿ ನಡೆಯುತ್ತಿರುವ ನಿರಂತರ ಕಾನೂನು ಬಾಹಿರ ಮರ ಹನನ, ಆನೆ ಪಥಗಳ ಒತ್ತುವರಿ, ಅಭಯಾರಣ್ಯ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನಿರಂತರ ನಡೆಯುತ್ತಿರುವ ಕಲ್ಲು ಗಣಿಗಾರಿಕೆ, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಶುಂಠಿ ಕೃಷಿ ಮತ್ತು ಗಾಂಜಾ ಕೃಷಿ, ಅಭಿವೃದ್ಧಿಯ ಹೆಸರಿನಲ್ಲಿ ಜಿಲ್ಲೆಯ ಅರಣ್ಯ ಪ್ರದೇಶಗಳ ವ್ಯವಸ್ಥಿತ ನಾಶ, ಹೈಟೆನ್ಷನ್ ವಿದ್ಯುತ್ ಮಾರ್ಗ, ರೈಲು ಮಾರ್ಗ ಆನೆಗಳ ಮೇವು ಹಾಗೂ ನೀರಿನ ಕೊರತೆಗೆ ಕಾರಣವಾಗಿದೆ ಎಂದೂ ಕಾವೇರಿ ಸೇನೆ ಸಂಚಾಲಕ ರವಿಚಂಗಪ್ಪ ದೂರಿದರು. ಕಾಡಾನೆಗಳು ಜಿಲ್ಲೆಯ ಗಡಿಭಾಗದ ರೈತರ ಕಾಫಿ ತೋಟಗಳು ಮತ್ತು ಬತ್ತದ ಗದ್ದೆಗಳನ್ನು ಖಾಯಂ ಆವಾಸ ಸ್ಥಾನವಾಗಿಸಿವೆ ಎಂದು ಆರೋಪಿಸಿದ ರವಿ ಚಂಗಪ್ಪ, ಹಾವಳಿ ತಡೆಗೆ ಶಾಶ್ವತ ಪರಿಹಾರ ಸೂಚಿಸಬೇಕೆಂದು ಒತ್ತಾಯಿಸಿದರು. ರವಿಚಂಗಪ್ಪ ಮನವಿ ಪತ್ರವನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗನ್ ಮೋಹನ್ ಶರ್ಮಗೆ ನೀಡಿದರು. ಮಾಲ್ದಾರೆ, ಸಿದ್ದಾಪುರ, ವಿ.ಬಾಡಗ, ಕೆದಕಲ್ ಸೇರಿದಂತೆ ಕಾಡಾನೆ ಹಾವಳಿ ಪ್ರದೇಶದ ಗ್ರಾಮಸ್ಥರು ಹಾಗೂ ಬೆಳೆಗಾರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com