ಮಡಿಕೇರಿ: ಗ್ರಾಮೀಣ ಪ್ರದೇಶದಲ್ಲಿ ಮಿತಿ ಮೀರಿರುವ ವಿದ್ಯುತ್ ಸಮಸ್ಯೆ ಮತ್ತು ಅನಿಯಮಿತ ವಿದ್ಯುತ್ ಕಡಿತವನ್ನು ಖಂಡಿಸಿ ಬಿಜೆಪಿ ರೈತ ಮೋರ್ಚಾ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಕೊಡಗು ಜಿಲ್ಲೆಗೆ 24 ಗಂಟೆ ವಿದ್ಯುತ್ ಪೂರೈಸಬೇಕೆಂದು ಒತ್ತಾಯಿಸಿದರು.
ನಗರದಲ್ಲಿರುವ ಸೆಸ್ಕ್ ಕಾರ್ಯಪಾಲಕ ಅಭಿಯಂತರರ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕೃಷಿ ಮೋರ್ಚಾದ ಪ್ರಮುಖರು ಪ್ರಾಮಾಣಿಕವಾಗಿ ಶೇ.100ರಷ್ಟು ವಿದ್ಯುತ್ ದರವನ್ನು ಪಾವತಿಸುತ್ತಿರುವ ಕೊಡಗು ಜಿಲ್ಲೆಗೆ ನಿರಂತರವಾಗಿ ವಿದ್ಯುತ್ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ದರ ಪಾವತಿಸದೆ ಅಸಹಕಾರ ಚಳವಳಿ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.
ಬಿಜೆಪಿ ಪ್ರಮುಖ ಹಾಗೂ ಜಿಪಂ ಮಾಜಿ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಮಾತನಾಡಿ, ಅಧಿಕ ಮಳೆಯಿಂದಾಗಿ ಕುಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿ ವಿದ್ಯುತ್ ಕಡಿತಗೊಂಡು ತಿಂಗಳು ಸಮೀಪಿಸಿದೆ. ಆದರೆ ಲೈನ್‌ಮ್ಯಾನ್‌ಗಳ ಕೊರತೆ ಹಿನ್ನೆಲೆ ದುರಸ್ತಿ ಕಾರ್ಯ ವಿಳಂಬವಾಗುತ್ತಿದೆ. ಜಿಲ್ಲೆಗೆ ಅಗತ್ಯವಿರುವಷ್ಟು ಸಿಬ್ಬಂದಿ ಹಾಗೂ ಇತರ ವ್ಯವಸ್ಥೆಗಳನ್ನು ಕಲ್ಪಿಸುವುದಾಗಿ ಸರ್ಕಾರ ನೀಡಿದ ಭರವಸೆ ಹುಸಿಯಾಗಿದೆ ಎಂದು ಆರೋಪಿಸಿದರು.
ಅನಿಯಮಿತ ವಿದ್ಯುತ್ ಕಡಿತವನ್ನು ಕೈಬಿಡಬೇಕು, ಕನಿಷ್ಟ 8 ಗಂಟೆ 3 ಫೇಸ್ ವಿದ್ಯುತ್ ಪೂರೈಸಬೇಕು, ಸುಟ್ಟು ಹೋದ ಟ್ರಾನ್ಸ್‌ಫಾರ್ಮರ್‌ಗಳನ್ನು ತಕ್ಷಣ ಬದಲಾಯಿಸಬೇಕು. ರೈತರ ಪಂಪ್‌ಸೆಟ್‌ಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಹಳೆಯ ತಂತಿಗಳನ್ನು ಮತ್ತು ಕಂಬಗಳನ್ನು ಬದಲಿಸಿ ವಿದ್ಯುತ್ ನಷ್ಟ ತಪ್ಪಿಸಿ ರೈತರ ಪಂಪ್‌ಸೆಟ್ ಉಳಿಸಬೇಕು, ಲೈನ್‌ಮ್ಯಾನ್‌ಗಳ ಕೊರತೆ ನೀಗಿಸಬೇಕು, ಅಕ್ರಮ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಹಾಯಕ ಕಾರ್ಯಪಾಲಕ ಅಭಿಯಂತರ ವಸಂತ್ ಕುಮಾರ್ ಅವರಿಗೆ ರೈತ ಮೋರ್ಚಾದ ಪ್ರಮುಖರು ಮನವಿ ಪತ್ರ ಸಲ್ಲಿಸಿದರು.
ಜಿಪಂ ಉಪಾಧ್ಯಕ್ಷೆ ಬೀನಾಬೊಳ್ಳಮ್ಮ, ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬೆಪ್ಪುರನ ಮೇದಪ್ಪ, ತಳೂರು ಕಿಶೋರ್ ಕುಮಾರ್, ನಗರಸಭಾ ಸದಸ್ಯರಾದ ಪಿ.ಡಿ. ಪೊನ್ನಪ್ಪ, ಅನಿತಾ ಪೂವಯ್ಯ, ಪ್ರಮುಖರಾದ ಪದ್ಮಾವತಿ, ಗೀತಾ ಪವಿತ್ರ, ಬಿ.ಎ. ಹರೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Advertisement