ನಿರ್ಮಲ ನಗರ ನಿರ್ಮಾಣಕ್ಕೆ ಕೈಜೋಡಿಸಲು ಮನವಿ

Updated on

ಮಡಿಕೇರಿ: ನಗರಸಭೆ ಅಧ್ಯಕ್ಷೆ ಜುಲೇಕಾಬಿ, ಉಪಾಧ್ಯಕ್ಷೆ ಲೀಲಾ ಶೇಷಮ್ಮ, ಸದಸ್ಯರಾದ ಕೆ.ಎಂ.ಬಿ. ಗಣೇಶ್, ಪ್ರಕಾಶ್, ನಗರಸಭೆ ಪೌರಾಯುಕ್ತರಾದ ಬಿ.ಬಿ. ಪುಷ್ಪಾವತಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವಿಕುಮಾರ್, ಶಬರಿನಾಥ ರೈ ಮತ್ತಿತರರು ನಗರದ ಮಹದೇವಪೇಟೆ, ರಾಣಿಪೇಟೆ ಮತ್ತಿತರ ವಾರ್ಡ್‌ಗಳಿಗೆ ತೆರಳಿ ಸ್ವಚ್ಛತೆ ಸಂಬಂಧ ಅರಿವು ಮೂಡಿಸಿದರು. ಆ.1ರಿಂದ ಮನೆ ಮನೆಗೆ ಕಸ ಸಂಗ್ರಹಿಸುವ ವಾಹನ ಬರುತ್ತಿದ್ದು, ಹಸಿ ಮತ್ತು ಒಣಗಿದ ಕಸ ಬೇರ್ಪಡಿಸಿ ಕಸ ಸಂಗ್ರಹಿಸುವ ವಾಹನಕ್ಕೆ ಕಸ ಹಾಕಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಯಾವುದೇ ಕಾರಣಕ್ಕೂ ರಸ್ತೆ ಬದಿಯಲ್ಲಿ ಹಾಗೂ ಎಲ್ಲೆಂದರಲ್ಲಿ ಕಸ  ಬೀಸಾಡಬಾರದು. ಪರಿಸರವನ್ನು ಸ್ವಚ್ಛ ಹಾಗೂ ನಗರವನ್ನು ನಿರ್ಮಲವನ್ನಾಗಿ ಮಾಡುವ ದಿಸೆಯಲ್ಲಿ ಕೈಜೋಡಿಸಬೇಕು ಎಂದು ನಗರಸಭೆ ಅಧ್ಯಕ್ಷರು ಸಲಹೆ ಮಾಡಿದರು.

ಗೌರಮ್ಮ ದತ್ತಿ ಜಿಲ್ಲಾ ಪ್ರಶಸ್ತಿಗೆ ಕೆ. ಮಿಲನ ಭರತ್ ಆಯ್ಕೆ
ಮಡಿಕೇರಿ: 2014-15ನೇ ಸಾಲಿನ ಗೌರಮ್ಮ ದತ್ತಿನಿಧಿಯ ಜಿಲ್ಲಾ ಮಹಿಳಾ ಲೇಖಕಿ ಪ್ರಶಸ್ತಿಗೆ ಕೆ.ಮಿಲನ ಭರತ್ ಆಯ್ಕೆಯಾಗಿದ್ದಾರೆ. ಗೌರಮ್ಮ ದತ್ತಿನಿಧಿಯಡಿ ಪ್ರತಿವರ್ಷ ನೀಡಲಾಗುತ್ತಿರುವ ಜಿಲ್ಲಾ ಮಹಿಳಾ ಲೇಖಕಿ ಪ್ರಶಸ್ತಿ ಪಡೆಯುವವರಲ್ಲಿ ಮಿಲನ ಭರತ್ 11ನೇ ಲೇಖಕಿಯಾಗಿದ್ದು, ಇವರು ಬರೆದ ಕೊಡಗಿನಲ್ಲಿ ಐನ್ಮನೆ ಸಂಸ್ಕೃತಿ ಕೃತಿಗೆ ಈ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿಯನ್ನು ಆ.11ರಂದು ಸೋಮವಾರ ನಗರದ ಡಿ. ದೇವರಾಜ ಅರಸು ಭವನದಲ್ಲಿ ಮಧ್ಯಾಹ್ನ 2.30ಕ್ಕೆ ಗಂಟೆಗೆ ನಡೆಯುವ ದತ್ತಿನಿಧಿ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು. ಡಾ. ಪ್ರಕಾಶ್ ಕೂಡಿಗೆ, ಸಿ.ಎಸ್. ಸುರೇಶ್ ಹಾಗೂ ಡಾ. ಕೋರನ ಸರಸ್ವತಿ ಅವರು ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು.

ಸೇನಾ ನೇಮಕಾತಿ ರ್ಯಾಲಿ ನಾಳೆಯಿಂದ
ಮಡಿಕೇರಿ: ಮಂಗಳೂರಿನ ಸೇನಾ ನೇಮಕಾತಿ ಕಚೇರಿ ವತಿಯಿಂದ ಭಾರತೀಯ ಸೇನಾ ನೇಮಕಾತಿ ರ್ಯಾಲಿಯನ್ನು ಆ.5 ರಿಂದ 12ರವರೆಗೆ ಮೂಡುಬಿದಿರೆಯಲ್ಲಿ ನಡೆಯಲಿದ್ದು, ಕೊಡಗು ಜಿಲ್ಲೆಯ ಅಭ್ಯರ್ಥಿಗಳಿಗೆ ಅನ್ವಯವಾಗುವ ಸದರಿ ನೇಮಕಾತಿಯ ವೇಳಾಪಟ್ಟಿ ಕೆಳಕಂಡಂತೆ ಇರುತ್ತದೆ. ಆಗಸ್ಟ್ 5ರಂದು ಹುದ್ದೆ ಸಿಪಾಯಿ ಗುಮಾಸ್ತ ಎಸ್.ಕೆ. ಟೆಕ್ನಿಕಲ್, ವಯೋವುತಿ 17 - 23 ವರ್ಷ.  5-8-91 ರಿಂದ 5-2-97 ರೊಳಗೆ ಜನಿಸಿರಬೇಕು. ವಿದ್ಯಾರ್ಹತೆ ಪಿಯುಸಿಯಲ್ಲಿ  ಶೆ.50 ಅಂಕಗಳೊಂದಿಗೆ ತೇರ್ಗಡೆ.  ಪ್ರತಿ ವಿಷಯದಲ್ಲಿ ಶೇ.40 ಅಂಕ ಹೊಂದಿರಬೇಕು. ಆಗಸ್ಟ್ 10ರಂದು ಹುದ್ದೆ ಸಿಪಾಯಿ ಟ್ರೇಡ್ಸ್‌ಮ್ಯಾನ್, ವಿದ್ಯಾರ್ಹತೆ 10ನೇ ಹಾಗೂ 8ನೇ ತರಗತಿಯಲ್ಲಿ ಕನಿಷ್ಠ ಮಟ್ಟದಲ್ಲಿ ಪಾಸಾಗಿರಬೇಕು. ಆಗಸ್ಟ್ 11ರಂದು ಹುದ್ದೆ ಸಿಪಾಯಿ ಜನರಲ್ ಡ್ಯೂಟಿ  ವಯೋವುತಿ 17- 21ವರ್ಷ. 5-8-93 ರಿಂದ 5-2-97ರೊಳಗೆ ಜನಿಸಿರಬೇಕು. ವಿದ್ಯಾರ್ಹತೆ 10ನೇ ತರಗತಿಯಲ್ಲಿ ಕನಿಷ್ಠ ಶೆ.45 ಅಂಕಗಳೊಂದಿಗೆ ತೇರ್ಗಡೆ. ಕನಿಷ್ಠ ಪ್ರತಿ ವಿಷಯದಲ್ಲಿ ಶೇ.32 ಅಂಕಗಳು ಹೊಂದಿರಬೇಕು. ಸಿಪಾಯಿ ಟೆಕ್ನಿಕಲ್ ಹುದ್ದೆಗೆ 17- 23 ವರ್ಷ. 5-8-91 ರಿಂದ 5-2-97ರೊಳಗೆ ಜನಿಸಿರಬೇಕು. ಪಿ.ಯು.ಸಿ.(ರಸಾಯನಶಾಸ್ತ, ಭೌತಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್‌ನಲ್ಲಿ ತೇರ್ಗಡೆ) ಅಥವಾ 3 ವರ್ಷಗಳ ಎಂಜಿನಿಯರಿಂಗ್ ಡಿಪ್ಲೋಮದಲ್ಲಿ ಶೇ.50 ಅಂಕಗಳೊಂದಿಗೆ ಪಾಸಾಗಿರಬೇಕು. ಆಗಸ್ಟ್, 12ರಂದು ಮಾಜಿ ಸೈನಿಕರಿಗೆ (ಡಿ.ಎಸ್.ಸಿ), ವಯೋವುತಿ 48 ವರ್ಷ ಮೀರಿರಬಾರದು. ಭಾರತೀಯ ಸೇನೆಯಲ್ಲಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸಿರಬೇಕು. ಈ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಸಿ. ಜಗನ್ನಾಥ್ ತಿಳಿಸಿದ್ದಾರೆ.
 
ಸೇನಾ ತರಬೇತಿ ಸಮಾರೋಪ
ಕುಶಾಲನಗರ: ಕುಶಾಲನಗರ ಮಾಜಿ ಸೈನಿಕರ ಸಂಘದ ವತಿಯಿಂದ ಸೇನೆಗೆ ಸೇರಬಯಸುವ ಯುವಕರಿಗೆ ನಡೆದ 9ನೇ ಪೂರ್ವ ಸಿದ್ಧತಾ ಶಿಬಿರದ ಸಮಾರೋಪ ಸಮಾರಂಭ ಭಾನುವಾರ ನಡೆಯಿತು.  ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕುಶಾಲನಗರ ಠಾಣಾಧಿಕಾರಿ ಅನೂಪ್ ಮಾದಪ್ಪ, ಯುವಪೀಳಿಗೆ ದುಶ್ಚಟದಿಂದ ದೂರವಿರುವುದರೊಂದಿಗೆ, ಶಿಸ್ತುಬದ್ಧವಾದ ಜೀವನ ರೂಪಿಸಿಕೊಳ್ಳುವ ಬಗ್ಗೆ ದೃಢ ನಿರ್ಧಾರ ತಳೆಯಬೇಕು ಎಂದರು. ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಿವೃತ್ತ ಕ್ಯಾ. ಭಾಸ್ಕರ್ ಮಾತನಾಡಿ, ಸೇನೆ ಸೇರಲು ಯುವಕರಿಗೆ ವಿಫುಲ ಅವಕಾಶಗಳಿವೆ. ವಿಜ್ಞಾನ ವಿಷಯದಲ್ಲಿ ವ್ಯಾಸಂಗ ಪೂರೈಸಿದವರಿಗೆ ಸೇನೆಯಲ್ಲಿ ಹೆಚ್ಚಿನ ಆದ್ಯತೆ ಇದೆ. ಯುವತಿಯರಿಗೂ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶವಿದೆ ಎಂದು ಮಾಹಿತಿ ಒದಗಿಸಿದರು. 15 ದಿನಗಳ ಕಾಲ ನಡೆದ ಪೂರ್ವ ಸಿದ್ಧತಾ ಶಿಬಿರದಲ್ಲಿ ಸಂಘದ ಪದಾಧಿಕಾರಿಗಳಾದ ಹವಲ್ದಾರ್ ಜನಾರ್ದನ ಹಾಗೂ ಹವಲ್ದಾರ್ ನರೇಶ್ ಕುಮಾರ್ ತರಬೇತುದಾರರಾಗಿ ಪಾಲ್ಗೊಂಡಿದ್ದರು. ಜಿಲ್ಲೆಯ ಹಾಗೂ ನೆರೆಯ ಜಿಲ್ಲೆಯ 30ಕ್ಕೂ ಹೆಚ್ಚು ಯುವಕರು ಶಿಬಿರದಲ್ಲಿ ಭಾಗವಹಿಸಿದ್ದರು.

ತಿಮ್ಮಣ್ಣ ಸುರಕ್ಷಿತವಾಗಿ ಬರಲು ಪೂಜೆ, ಪ್ರಾರ್ಥನೆ
ಮಡಿಕೇರಿ: ಬಾದಾಮಿ ಬಳಿಯಲ್ಲಿ ಬಾಲಕ ತಿಮ್ಮಣ್ಣ ಹಟ್ಟಿ ತೆರೆದ ಕೊಳವೆ ಬಾವಿ ಗುಂಡಿಗೆ ಬಿದ್ದ ಘಟನೆ ಕೊಡಗು ಜಿಲ್ಲಾದ್ಯಂತ ಜನರ ಆತಂಕಕ್ಕೆ ಕಾರಣವಾಗಿದೆ. ಬಾಲಕ ತಿಮ್ಮಣ್ಣ ಸುರಕ್ಷಿತವಾಗಿ ಕೊಳವೆಬಾವಿಯಿಂದ ಹೊರಬರಲಿ ಎಂದು ಪ್ರಾರ್ಥಿಸಿ ಮಡಿಕೇರಿಯಲ್ಲಿಯೂ ಮಕ್ಕಳು, ಸಾರ್ವಜನಿಕರು ಪ್ರಾರ್ಥನೆ ನಡೆಸಿದರು. ಬಾಲಕ ತಿಮ್ಮಣ್ಣ ಸುರಕ್ಷಿತವಾಗಿ ಕೊಳವೆ ಬಾವಿ ಗುಂಡಿಯಿಂದ ಮೇಲೆದ್ದು ಬರಲಿ ಎಂದು ಮಡಿಕೇರಿಯಲ್ಲಿ ಶಾಲಾ ಮಕ್ಕಳು ಪ್ರಾರ್ಥನೆ ನಡೆಸಿದರು. ಯೂರೋ ಕಿಡ್ಸ್ ಸಂಸ್ಥೆ ಪುಟಾಣಿಗಳು ಶಾಲೆಯಲ್ಲಿ ತಿಮ್ಮಣ್ಣನಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಮಡಿಕೇರಿಯ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಭಕ್ತರು ಕೂಡ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಮಡಿಕೇರಿ ನಗರಸಭಾಧ್ಯಕ್ಷೆ ಜುಲೇಕಾಬಿ, ಉಪಾಧ್ಯಕ್ಷೆ ಲೀಲಾ ಶೇಷಮ್ಮ, ಸದಸ್ಯ ಕೆ.ಎಂ. ಗಣೇಶ್, ಎ.ಸಿ. ದೇವಯ್ಯ,  ಪ್ರಕಾಶ್ ಆಚಾರ್ಯ, ಉಸ್ಮಾನ್ , ಪೌರಾಯುಕ್ತೆ ಪುಪ್ಪಾವತಿ ಸೇರಿದಂತೆ ಅನೇಕರು ಇದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com