ಮೂರ್ನಾಡು: ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ತರಕಾರಿ, ಸೊಪ್ಪುಗಳು ಕಸಗಳು ಕೊಳೆತು ನಾರುತ್ತಿದ್ದು ಸ್ವಚ್ಛಗೊಳಿಸದೆ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯವಹಿಸಿ ಕಣ್ಣು ಮುಚ್ಚಿ ಕುಳಿತಿದೆ.
ಸಂತೆ ದಿನವಾದ ಗುರುವಾರ ಸಂತೆ ವ್ಯಾಪಾರಿಗಳು ತರಕಾರಿ, ಸೊಪ್ಪು, ಕಸ ಹಾಗೂ ಬೇಡಾದ ವಸ್ತುಗಳನ್ನು ಬಿಸಾಡಿ ಹೋಗುತ್ತಿದ್ದು, ಇಂತಹ ಕಸಗಳು ಒಂದು ವಾರದವರೆಗೆ ಮಾರುಕಟ್ಟೆಯಲ್ಲಿಯೇ ಕೊಳೆತು ಗಬ್ಬೆದು ನಾರುತ್ತಿದೆ. ಗುರುವಾರ ಸಂತೆ ಆದ ಬಳಿಕ ಮಾರುಕಟ್ಟೆ ಸ್ವಚ್ಛಗೊಳಿಸದೆ ಇರುವುದು ಸಮಸ್ಯೆಗೆ ಎಡೆಮಾಡಿಕೊಟ್ಟಿದೆ.
ಸಂತೆ ದಿನ ಗುರುವಾರ ಬಂತೆಂದರೆ ಬುಧವಾರ ಸಂಜೆ ಮಾರುಕಟ್ಟೆಯನ್ನು ಸ್ವಚ್ಛಗೊಳಿಸುತ್ತಿದ್ದು, ಅಲ್ಲಿಯ
ತನಕ ಒಂದು ವಾರದ ಕಸಗಳು, ತರಕಾರಿಗಳು ಕೊಳೆತು ದುರ್ವಾಸನೆ ಬೀರುತ್ತಿರುತ್ತದೆ. ಮಾರುಕಟ್ಟೆಯ ರಸ್ತೆಯಲ್ಲಿರುವ ವಾಣಿಜ್ಯ ಮಳಿಗೆಗಳಲ್ಲಿರುವ ವ್ಯಾಪಾರಸ್ಥರು, ಮೀನು ಹಾಗೂ ಮಾಂಸ ಮಳಿಗೆಗಳ ವ್ಯಾಪಾರಸ್ಥರು ಹಾಗೂ ಗ್ರಾಹಕರು ಈ ದುರ್ವಾಸನೆಯಿಂದ ದಿನವಿಡೀ ಮೂಗು ಮುಚ್ಚಿಕೊಂಡು ನಡೆದಾಡುವ ದುಸ್ಥಿತಿ ಬಂದೊದಗಿದೆ.
ಮಳೆಗಾಲದ ಸಮಯದಲ್ಲಿ ಸೊಪ್ಪು, ತರಕಾರಿಗಳು ಎಲ್ಲೆಂದರಲ್ಲಿ ಬಿದ್ದು ಕೊಳೆತು ಅಸಹ್ಯ ಹುಟ್ಟಿಸುತ್ತಿದ್ದು, ಅನೇಕ ಕಡೆಗಳಲ್ಲಿ ಇಂತಹ ಕೊಳೆತ ತರಕಾರಿಗಳಲ್ಲಿ ಹುಳಗಳು ಕಂಡುಬರುತ್ತಿದೆ.
ಪಾಸ್ಟಿಕ್ ತಾಜ್ಯಗಳು ಅಲ್ಲಲಿ ಹರಡಿಕೊಂಡು ಸಾಂಕ್ರಮಿಕ ರೋಗ ಹರಡುವ ಭೀತಿ ನಾಗರಿಕರಲ್ಲಿ ಹುಟ್ಟಿದೆ.
ಗ್ರಾಮ ಪಂಚಾಯಿತಿಗೆ ಅನೇಕ ಬಾರಿ ಸಾರ್ವಜನಿಕರು ಮಾರುಕಟ್ಟೆ ಅಶುಚಿತ್ವದ ಬಗ್ಗೆ ಮನವಿ ಮಾಡಿಕೊಂಡರೂ ಯಾವುದೇ ಕ್ರಮ ಕೈಗೊಳ್ಳದೆ ಆಡಳಿತ ಮಂಡಳಿ ಕಣ್ಣು ಮುಚ್ಚಿ ಕುಳಿತಿದೆ ಎಂದು ಇಲ್ಲಿನ ಗ್ರಾಮ ಪಂಚಾಯಿತಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ತನದಿಂದ ಆಡಳಿತ ನಡೆಸಿದರೆ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ನಾಗರಿಕರು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿಗೆ ಅನೇಕ ಬಾರಿ ಮನವಿ ಹಾಗೂ ಗ್ರಾಮ ಸಭೆಗಳಲ್ಲಿ ಈ ಬಗ್ಗೆ ಗಮನ ಹರಿಸುವಂತೆ ತಿಳಿಸಿದರೂ ಯಾವುದೇ ಪ್ರಯೋಜನವಿಲ್ಲ. ಪಟ್ಟಣದಲ್ಲಿ ಅನೇಕ ಕಡೆಗಳಲ್ಲಿ ಕಸದ ರಾಶಿಗಳು ತಾಂಡವಾಡುತ್ತಿದ್ದು, ಗ್ರಾ. ಪಂ. ಕಣ್ಣಿಗೆ ಕಾಣದಾಗಿದೆ. ಸಮಸ್ಯೆಗಳನ್ನು ಆಡಳಿತ ಮಂಡಳಿಯ ಮುಂದಿಟ್ಟರೆ ಸಮಸ್ಯೆಗಳನ್ನು ಇತ್ಯರ್ಥ ಮಾಡುವಲ್ಲಿ ಗ್ರಾ.ಪಂ. ವಿಫಲವಾಗಿದೆ.
ಶಿವಕುಮಾರ್, ಪಟ್ಟಣ ನಿವಾಸಿ
ಮಾರುಕಟ್ಟೆಯಲ್ಲಿ ಸಂತೆ ಮುಗಿದ ಬಳಿಕ ಅಥವಾ ಮರುದಿನ ಬೆಳಗ್ಗೆ ಕಸ ಹಾಗೂ ತರಕಾರಿಗಳನ್ನು ಸ್ವಚ್ಛಗೊಳಿಸಿ ವಿಲೇವಾರಿ ಮಾಡಿದರೆ ಇಂತಹ ಸಮಸ್ಯೆ ಉದ್ಭವವಾಗುದಿಲ್ಲ. ಗ್ರಾಮ ಪಂಚಾಯಿತಿ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ.
ಸಮೀರ್, ಪಟ್ಟಣ ನಿವಾಸಿ
Advertisement