ಕುಶಾಲನಗರ: ಕುಶಾಲನಗರ ಸಮೀಪ ದೊಡ್ಡ ಹರವೆ ರಾಣಿಗೇಟ್ ಕಾವೇರಿ ಸಾಕಾನೆ ಶಿಬಿರದಲ್ಲಿ ಪಳಗಿಸಲಾಗುತ್ತಿದ್ದ ಕೆಂಚಮ್ಮ ಹೆಣ್ಣಾನೆಯನ್ನು ದೊಡ್ಡಿಯಿಂದ ಮುಕ್ತಗೊಳಿಸುವ ಕಾರ್ಯ ಸೋಮವಾರ ನಡೆಯಿತು.
ಸಾಕಾನೆ ಶಿಬಿರದಲ್ಲಿ ಹಾಸನ-ಸಕಲೇಶಪುರ ಭಾಗಗಳಲ್ಲಿ ಸೆರೆ ಹಿಡಿದ 4 ಕಾಡಾನೆಗಳನ್ನು ಪಳಗಿಸುವ ಕಾರ್ಯ ಕಾವೇರಿ ಸಾಕಾನೆ ಶಿಬಿರದಲ್ಲಿ ಕಳೆದ 2 ತಿಂಗಳಿನಿಂದ ನಡೆದಿತ್ತು. ಇತ್ತೀಚೆಗಷ್ಟೇ ಮೂರು ಪಳಗಿದ ಆನೆಗಳು ದೊಡ್ಡಿಯಿಂದ ಮುಕ್ತಗೊಂಡಿದ್ದವು. ಇದೀಗ ನಾಲ್ಕನೇ ಆನೆಯೂ ಮಾವುತ, ಕಾವಾಡಿಗರ ನಿರ್ದೇಶನ ಪಾಲಿಸುವುದರೊಂದಿಗೆ ಸಂಪೂರ್ಣ ಪಳಗಿದ ಹಿನ್ನೆಲೆಯಲ್ಲಿ ಕೆಂಚಮ್ಮ ಎಂದು ನಾಮಕರಣ ಮಾಡಿ ದೊಡ್ಡಿಯಿಂದ ಹೊರಬಿಡಲಾಯಿತು ಎಂದು ಪಿರಿಯಾಪಟ್ಟಣ ಅರಣ್ಯವಲಯಾಧಿಕಾರಿ ಎಂ.ಎಸ್. ಚಿಣ್ಣಪ್ಪ ಮಾಹಿತಿ ಒದಗಿಸಿದ್ದಾರೆ.
ಈ ಕಾರ್ಯಾಚರಣೆ ಸಂದರ್ಭ ದುಬಾರೆ ಸಾಕಾನೆ ಶಿಬಿರದ ಆನೆಗಳಾದ ಮಯೂರ, ಚಂದ್ರ ಆನೆಗಳ ಸಹಕಾರ ಪಡೆಯಲಾಯಿತು.
ಹುಣಸೂರು ಡಿ.ಎಫ್.ಒ ಬಾಲಚಂದ್ರ, ವನ್ಯಜೀವಿ ವಿಭಾಗದ ವೈದ್ಯರಾದ ಡಾ. ಉಮಾಶಂಕರ್, ಎ.ಸಿ.ಎಫ್. ವಿನಯಕುಮಾರ್, ವನಪಾಲಕರಾದ ಗಣೇಶ್, ರಾಮು, ಮುತ್ತಪ್ಪ, ಅರಣ್ಯ ಸಿಬ್ಬಂದಿ ರಾಮು, ಗಣೇಶ್, ಮುತ್ತಪ್ಪ, ಆನೆ ಮಾವುತರು, ಕಾವಾಡಿಗರು ಪಾಲ್ಗೊಂಡಿದ್ದರು.
Advertisement