ಪಿಕಪ್ ಹಳ್ಳಕ್ಕೆ: ಓರ್ವ ಸಾವು

Updated on: 

ಮಡಿಕೇರಿ: ಮಡಿಕೇರಿ ಬಳಿಯ ಮೇಕೇರಿಯಲ್ಲಿ ಪಿಕಪ್ ವಾಹನ ಹಳ್ಳಕ್ಕೆ ಬಿದ್ದ ಪರಿಣಾಮ ಕಗ್ಗೋಡ್ಲು ಗ್ರಾಮ ನಿವಾಸಿ ಮುಕ್ಕಾಟಿರ ಮುತ್ತಣ್ಣ ಸಾವನ್ನಪ್ಪಿದ್ದಾರೆ.ಪಿಕಪ್‌ನಲ್ಲಿ ಪ್ರಯಾಣಿಸುತ್ತಿದ್ದ ಭಾಸ್ಕರ್ ಕಾಲು ಮುರಿತಕ್ಕೊಳಗಾಗಿದ್ದು, ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೇರಂಬಾಣೆಯ ತಮ್ಮ ತೋಟದಿಂದ ಕಗ್ಗೋಡ್ಲಿಗೆ ಆಗಮಿಸುತ್ತಿದ್ದಾಗ ಮುತ್ತಣ್ಣ ಚಲಾಯಿಸುತ್ತಿದ್ದ ಪಿಕಪ್ ವಾಹನ ನಿಯಂತ್ರಣ ತಪ್ಪಿ ಮೇಕೇರಿ ಬಳಿ ಹಳ್ಳಕ್ಕುರುಳಿದ ಪರಿಣಾಮ ಈ ಘಟನೆ ಸಂಭವಿಸಿದೆ. ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪಡಿತರ ಅಕ್ಕಿಯಲ್ಲಿ ರಸಗೊಬ್ಬರ!
ನಾಪೋಕ್ಲು: ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಯಲ್ಲಿ ಇತ್ತೀಚೆಗೆ ಗ್ರಾಮಸ್ಥರಿಗೆ ವಿತರಿಸಿದ ಪಡಿತರ ಅಕ್ಕಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರ ಮಿಶ್ರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಗೊಬ್ಬರ ಮಿಶ್ರಿತ ಅಕ್ಕಿಯನ್ನು ವಿತರಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಷ ಸೇವಿಸಿ ಅಪರಿಚಿತ ಯುವಕ ಆತ್ಮಹತ್ಯೆ
ಪುತ್ತೂರು: ಅಪರಿಚಿತ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಆತನ ಮೃತ ದೇಹ ಮಂಗಳವಾರ ಪುತ್ತೂರು ಪಟ್ಟಣದ ಹೊರವಲಯದ ಕಲ್ಲೇಗ ಭಜನಾ ಮಂದಿರದ ಬಳಿಯಲ್ಲಿ ಪತ್ತೆಯಾಗಿದೆ.
ಭಜನಾ ಮಂದಿರದ ಹಿಂಭಾಗದಲ್ಲಿ ಸುಮಾರು 20ರಿಂದ 25 ವರ್ಷದ ವಯಸ್ಸಿನ ಯುವಕನ ಮೃತದೇಹ ಪತ್ತೆಯಾಗಿದ್ದು, ಆತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ಮೃತದೇಹವನ್ನು ಪುತ್ತೂರಿನ ಸರ್ಕಾರಿ ಶವಾಗಾರದಲ್ಲಿ ಇರಿಸಲಾಗಿದ್ದು ನಗರ ಪೊಲೀಸರು ಪ್ರಕರಣದ ದಾಖಲಿಸಿದ್ದಾರೆ. ಮೃತ ಯುವಕನ ವಾರಸುದಾರರಿದ್ದಲ್ಲಿ ನಗರ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

ಪಡಿತರ ಚೀಟಿ ಗೊಂದಲ: ಪ್ರತಿಭಟನೆ ಎಚ್ಚರಿಕೆ
ಸಿದ್ದಾಪುರ: ಐದು ವರ್ಷಗಳಿಂದಲೂ ಪಡಿತರ ಚೀಟಿ ವಿತರಣೆ ಅವ್ಯವಸ್ಧೆಯಿಂದ ಕೂಡಿದ್ದು ಸರ್ಕಾರ ಇಂದಿಗೂ ಸಮಸ್ಯೆ ಬಗೆ ಹರಿಸಲಿಲ್ಲವೆಂದು ಗಿರಿಜನ ಮುಖಂಡೆ ಜೆ.ಕೆ. ಮುತ್ತಮ್ಮ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸಾಮಾನ್ಯ ಜನರಿಗೆ ಸಿಗುವ ಪಡಿತರ ವ್ಯವಸ್ಥೆಯನ್ನು ಹಲವಾರು ವರ್ಷಗಳಿಂದಲೂ ಸಮಸ್ಯೆಗಳಾಗಿ ಉಳಿದಿದ್ದು ಸರ್ಕಾರ ಇಂದಿಗೂ ಸಮಸ್ಯೆ ಸರಿಪಡಿಸಲು ಮುಂದಾಗಲ್ಲಿಲ. ತಟ್ಟಳ್ಳಿ, ದಿಡ್ಡಳ್ಳಿ, ಚೋಟೆ ಪಾರೆ, ಬಸವನಹಳ್ಳಿ ಸೇರಿದಂತೆ ಮತ್ತತರ ಕಡೆಗಳಲ್ಲಿ ಸಾವಿರಾರು ಮಂದಿ ವಾಸವಿದ್ದು ಬೆರಳಣಿಕೆಯಷ್ಟು ಮಂದಿಗೆ ಮಾತ್ರ ಪಡಿತರ ಚೀಟಿ ನೀಡಲಾಗಿದ್ದು, ಇದರಿಂದ ಹಲವರು ಪಡಿತರ ಚೀಟಿ ಕಳೆದುಕೊಳ್ಳುವ ಭೀತಿಯಲ್ಲಿ ಗಿರಿಜನರಿದ್ದಾರೆ. ಇಲ್ಲಿನ ಗಿರಿಜನರು ಆರಂಭದಿಂದಲೂ ಪಡಿತರ ಚೀಟಿಗೆ ತಮ್ಮ ಕೆಲಸ ಬಿಟ್ಟು ಕಚೇರಿಗಳಿಗೆ ಅಲೆದು ಪಡಿತರ ಚೀಟಿ ಪಡೆದುಕೊಂಡಿದ್ದಾರೆ. ಸರ್ಕಾರ ಹಾಗು ಆಹಾರ ಇಲಾಖೆ ಹೊಸ ಕಾನೂನು ತಂದು ಗೊಂದಲಕ್ಕೀಡು ಮಾಡಿದ್ದು ಇದರಿಂದ ನ್ಯಾಯ ಬೆಲೆ ಅಂಗಡಿಗಳಲ್ಲಿ ಯಾವುದೇ ಆಹಾರ ಪದಾರ್ಥ ಸಿಗದೇ ಸಂಕಷ್ಟಕ್ಕೊಳಗಾಗಿದ್ದಾರೆ. ಪಡಿತರ ಚೀಟಿ ಹೊಂದಿದ ಪ್ರತಿ ಕುಟುಂಬಕ್ಕೆ ಸಿಗಬೇಕಾದ ಆಹಾರ ಧಾನ್ಯಗಳು ನಿಗದಿತ ಪ್ರಮಾಣಕ್ಕಿಂತಲೂ ಕಡಿಮೆ ಸಿಗುತ್ತಿದ್ದು ಇದರಿಂದ ಗಿರಿಜನರು ತುತ್ತು ಆನ್ನಕ್ಕೂ ಪರದಾಡುವಂತಾಗಿದೆ. ಸಮಸ್ಯೆ ಬಗೆ ಹರಿಯದಿದ್ದಲ್ಲಿ ಆಹಾರ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುದೆಂದು ಎಚ್ಚರಿಸಿದ್ದಾರೆ.   

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com