20ನಿಮಿಷ 20ಸುದ್ದಿ

Updated on: 

ಚಿಂತಾಮಣಿ: ಬರಗಾಲ ಪರಿಸ್ಥಿತಿ ಎದುರಿಸಲು ಅಧಿಕಾರಿಗಳ ಜೊತೆ ಚರ್ಚಿಸಿ ಮುಂಜಾಗ್ರತೆ ಕ್ರಮವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮೂಲಭೂತ ಅಭಿವೃದ್ಧಿ, ಹಜ್ ಹಾಗೂ ವಾರ್ತಾ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್. ರೋಷನ್ ಬೇಗ್ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ಅಲ್ಪ ಪ್ರಮಾಣದ ಮಳೆಯಿಂದ ಜಿಲ್ಲೆಯ ರೈತರು ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಮಳೆ ಬಂದರೂ ಮುಂಜಾಗ್ರತಾ ಕ್ರಮವಾಗಿ ಅಗತ್ಯಕ್ಕೆ ತಕ್ಕಂತೆ ಬಿತ್ತನೆ ಬೀಜ ಮತ್ತು ರಸಗೊಬನ್ಬರ ಪೂರೈಕೆಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಜಿಪಂ ಅಧ್ಯಕ್ಷ ಕೇಶವ ರೆಡ್ಡಿ, ಜಿಪಂ ಸಿಇಒ ನೀಲಾ ಮಂಜುನಾಥ್, ಜಿಲ್ಲಾ ರಕ್ಷಣಾಧಿಕಾರಿ ಡಾ.ದಿವ್ಯ ಗೋಪಿನಾಥ್, ತಾಲೂಕು ಪಂಚಾಯ್ತಿ ಅಧ್ಯಕ್ಷ ಸ್ಕೂಲ್ ಸುಬ್ಬಾರೆಡ್ಡಿ, ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ ಹಾಗೂ ಕೃಷಿಕ ಸಮಾಜದ ಅಧ್ಯಕ್ಷ ಗೋವಿಂದಪ್ಪ ಮತ್ತಿತರ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ನಾಗಲಮುದ್ದಮ್ಮದೇವಿ ಪ್ರತಿಷ್ಠಾಪನೆ
ಟೇಕಲ್: ಟೇಕಲ್ ಸಮೀಪದ ದೊಡ್ಡಮಲ್ಲೆ ಗ್ರಾಮದಲ್ಲಿ ದಾಸಮ್ಮ, ಚೌಡಪ್ಪ ದಂಪತಿ ಮತ್ತು ಗ್ರಾಮಸ್ಥರು ಮೂರು ವರ್ಷಗಳಿಂದ ನಿರ್ಮಿರುವ ನೂತನ ದೇವಾಲಯ ನಾಗಲಮುದ್ದಮ್ಮದೇವಿ ಪ್ರತಿಷ್ಠಾಪನಾ ಮಹೋತ್ಸವವು ನಡೆಯಿತು. ದೇವಿಯ ಪ್ರಾಣ ಪ್ರತಿಷ್ಠಾಪನೆ ಶೋಡಷನ್ಯಾಸ, ಹೋಮಗಳು, ಪೂರ್ಣಾಹುತಿ, ಅಷ್ಟವದನ ಸೇವೆ, ಅಷ್ಟೋತ್ತರ ಸೇವೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಇದನ್ನು ಪ್ರಧಾನ ಆಗಮಿಕರಾದ ಬಿ.ಎಸ್. ವೆಂಕಟಾಚಲಾಚಾರ್ಯ ಹಾಗೂ ಋತ್ವಿಕರಿಂದ ಪೂಜಾ ಕೈಂಕರ್ಯಗಳು ನೆರವೇರಿದವು. ಪ್ರತಿಷ್ಠಾಪನಾ ಸಮಾರಂಭಕ್ಕೆ ಗ್ರಾ.ಪಂ. ಕಾರ್ಯದರ್ಶಿ ಮುನೇಗೌಡ, ಹುಣಸಿಕೋಟೆ ಮುನೇಗೌಡ, ಡಿ.ಆರ್. ವೆಂಕಟೇಶಪ್ಪ, ಈರಣ್ಯೆಗೌಡ, ಬಲ್ಲಹಳ್ಳಿ ಚಂದ್ರಪ್ಪ, ರಾಜಶೇಖರ್ ಇದ್ದರು.

ಸಿಡಿಮದ್ದಿನ ನಡುವೆ ನವಿಲುಗಳ ಹತ್ಯೆ
ಟೇಕಲ್:  ಮಾಲೂರು ತಾಲೂಕಿನ ಟೇಕಲ್ ಸಮೀಪದ ಬೂತೆಮ್ಮನ ಬೆಟ್ಟ ಹಾಗೂ ಬನಹಳ್ಳಿ ಬೆಟ್ಟದ ತಪ್ಪಲು ಪ್ರದೇಶದಲ್ಲಿ ಒಂದು ಸಾವಿರಕ್ಕೂ ಹೆಚ್ಚು ನವಿಲುಗಳು ಹಲವಾರು ವರ್ಷಗಳಿಂದ ಸ್ವಚ್ಛಂದವಾಗಿ ವಿಹರಿಸುತ್ತಿವೆ. ಬೂತೆಮ್ಮನ ಬೆಟ್ಟದ ಬಲ್ಲೇರಿ, ಕೂಗಿಟಗಾನಹಳ್ಳಿ, ಓಬಟ್ಟಿ, ಜಂಗಾನಹಳ್ಳಿ, ಕಾರಂಗುಟ್ಟೆ, ಕದಿರೇನಹಳ್ಳಿ ಮತ್ತಿತರೆಡೆ ಇವುಗಳು ಕಾಣಿಸಿಕೊಳ್ಳುತ್ತವೆ. ಆದರೆ ಇತ್ತೀಚಿನ ದಿನದಲ್ಲಿ ಈ ಸುತ್ತಮುತ್ತಲ ಪರಿಸರದಲ್ಲಿ ಕಲ್ಲು ಗಣಿಗಾರಿಕೆ ಹೆಚ್ಚಾಗಿದ್ದು, ಬಂಡೆಗಳಿಗೆ ಸಿಡಿಮದ್ದು ಇಟ್ಟಾಗ, ಶಬ್ದಕ್ಕೆ ನವಿಲುಗಳು ಭಯಭೀತವಾಗಿ ಗೂಡಿನಿಂದ ಆಚೆ ಬರುತ್ತಿವೆ. ಈ ಸಂದರ್ಭದಲ್ಲಿ ಕೆಲವರು ಈ ನವಿಲುಗಳನ್ನು ಹಿಡಿದು, ಕೊಂದು ತಿನ್ನುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಆದಷ್ಟೂ ಮಟ್ಟಿಗೆ ಸಂರಕ್ಷಿಸಬೇಕೆಂಬುದೇ ಸ್ಥಳೀಯ ಜನತೆ ಆಗ್ರಹವಾಗಿದೆ.

ವಿತರಣೆ
ಗೌರಿಬಿದನೂರು ತಾಪಂ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಕಲಚೇತನ ಫಲಾನುಭವಿಗಳಿಗೆ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಸಾಧನಾಸಲಕರಣೆಗಳನ್ನು ವಿತರಿಸಿದರು.

ಕರವೇ ರಾಜ್ಯಾಧ್ಯಕ್ಷರ ಬಂಧನಕ್ಕೆ ಆಕ್ರೋಶ
ಟೇಕಲ್: ಬೆಳಗಾವಿಯ ಯಳ್ಳೂರು ಚಲೋ ಘೋಷಣೆಯಡಿ, ಅಲ್ಲಿ ಕನ್ನಡ ಧ್ವಜ ಹಾರಿಸಲು ಹೊರಟಿದ್ದ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರನ್ನು ಹಾಗೂ ನೂರಾರು ಕಾರ್ಯಕರ್ತರನ್ನು ಮಾರ್ಗ ಮಧ್ಯೆ ಪೊಲೀಸರು ಬಂಧಿಸಿರುವುದು  ಖಂಡನೀಯ ಎಂದು ಸ್ಥಳೀಯ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ರಕ್ಷಣೆ ಇಲ್ಲವೆಂದು ಹಾಗೂ ಬೆಳಗಾವಿ ತಲುಪಲು ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ನಾಕಬಂದಿ ಹಾಕಿ ಕರವೇ ಕಾರ್ಯಕರ್ತರಿಗೆ ತಡೆಯೊಡ್ಡುತ್ತಿರುವುದನ್ನು ಟೇಕಲ್ ಕರವೇ ಘಟಕದ ಕಾರ್ಯಾಧ್ಯಕ್ಷ ಉಳ್ಳೇರಹಳ್ಳಿ ಮಂಜುನಾಥ್, ಗೋವರ್ದನ್ ಅವರು ಪತ್ರಿಕಾ ಹೇಳಿಕೆ ನೀಡಿ, ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ಕರವೇ ಜಿಲ್ಲಾ ಹಾಗೂ ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

ಕಾರ್ಯಕ್ರಮ
ಮಾಲೂರಿನ ಪ್ರಗತಿ ಪದವಿ ಪೂರ್ವ ಕಾಲೇಜಿನಲ್ಲಿ ಚುಟುಕ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಮನೆಗೂಂದು ಪತ್ರಿಕೆ ಕಾರ್ಯಕ್ರಮವನ್ನು ಕಸಾಪ ಜಿಲ್ಲಾಗೌರವಾಧ್ಯಕ್ಷ ಅಶ್ವಥ್ರೆಡ್ಡಿ ದಿನ ಪತ್ರಿಕೆಗಳನ್ನು ಪ್ರದರ್ಶಿಸುವ ಮೂಲಕ ಉದ್ಘಾಟಿಸಿದರು.

ಅಭಿವೃದ್ಧಿಗೆ ಸಹಕರಿಸಲು ಶಾಸಕರ ಮನವಿ
ಮುಳಬಾಗಲು: ಪಕ್ಷಾತೀತವಾಗಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಲು ಶಾಸಕ ಕೊತ್ತೂರು ಮಂಜುನಾಥ್ ಮನವಿ ಮಾಡಿದರು. ತಾಲೂಕಿನ ದುಗ್ಗಸಂದ್ರ ಗ್ರಾಮದಲ್ಲಿ ಶನಿವಾರ ರು. 38 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ ರೈತ ಸಂಪರ್ಕ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮದ ಊರುಬಾಗಿಲು ನಿರ್ಮಾಣಕ್ಕೆ ವೈಯುಕ್ತಿಕವಾಗಿ ಮೂರು ಲಕ್ಷ ರುಪಾಯಿಗಳನ್ನು ನೀಡಿದರು. ನೆಮ್ಮದಿ ಕೇಂದ್ರದವನ್ನು ಸ್ಥಳಾಂತರಿಸದೇ ಅಭಿವೃದ್ಧಿಪಡಿಸಲು ಗ್ರಾಮಸ್ಥರು ಕೋರಿದರು. ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು. ಕೆಪಿಸಿಸಿ ಸದಸ್ಯ ಉತ್ತನೂರು ಶ್ರೀನಿವಾಸ್, ಜಿ.ಪಂ. ಸದಸ್ಯೆ ಇಂದಿರಾ ಶ್ರೀನಿವಾಸ್, ತಾ.ಪಂ. ಅಧ್ಯಕ್ಷೆ ಅರ್ಚನಾ ಮಲ್ಲಿಕಾರ್ಜುನ ರೆಡ್ಡಿ,  ಸದಸ್ಯರಾದ ಲಕ್ಷ್ನಿದೇವಮ್ಮ, ಪೆದ್ದೂರು ವೆಂಕಟರಾಮ್ ಇದ್ದರು.

ಡಿಸಿಸಿ ಬ್ಯಾಂಕಿನಿಂದ 7.50 ಕೋಟಿ ಸಾಲ ವಿತರಣೆ
ಗೌರಿಬಿದನೂರು: ತಾಲೂಕಿನ ಸಹಕಾರಿ ಬ್ಯಾಂಕ್ಗಳಿಂದ 7.50ಕೋಟಿ ಸಾಲವನ್ನು ರೈತರಿಗೆ ವಿತರಿಸ ಲಾಗಿದೆ ಎಂದು ವಿಧಾನ ಸಭಾ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಹೇಳಿದರು. ತಾಪಂ ಆವರಣದಲ್ಲಿ ವಿಕಲಚೇತನರಿಗೆ ಸಾಧನಾಸಲಕರಣೆಗಳ ವಿತರಣೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಠಡಿ ಉದ್ಘಾಟನೆಯಲ್ಲಿ ಮಾತನಾಡಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದೇಗೌಡ ಡಿಸಿಸಿ ಬ್ಯಾಂಕಿನ ಪುನಶ್ಚೇತನದ ಬಗ್ಗೆ ಶಿವಶಂಕರರೆಡ್ಡಿ ಪಾತ್ರವನ್ನು ವಿವರಿಸಿದರು. 88 ಮಂದಿ ವಿಕಲಚೇತನರಿಗೆ ಮೂರು ಚಕ್ರದ ಸೈಕಲ್, ಗಾಲಿ ಕುರ್ಚಿ, ಬುದ್ದಿ ಮಾಂಧ್ಯ ವ್ಯಕ್ತಿಗಳಿಗೆ ನಿರಾಮಯ ವೈದ್ಯಕೀಯ ವಿಮೆ ಕಾರ್ಡ್ಗಳು, ಜಿಪಂ ಸದಸ್ಯರ ಶೇ.3 ರ ಅನುದಾನದಲ್ಲಿ ಜಿಪಂ ಸದಸ್ಯ ಚಿನ್ನಪ್ಪಯ್ಯರಿಂದ 13 ಮಂದಿ ವಿಕಲಚೇತನ ಫಲಾನುಭವಿಗಳಿಗೆ ಸಹಾಯಧನದ ಚೆಕ್ ವಿತರಣೆ ನೀಡಡಲಾಯಿತು. ಪುರಸಭೆ ಅಧ್ಯಕ್ಷ ನರಸಿಂಹ ಮೂರ್ತಿಗೆ ಸನ್ಮಾನ ಮಾಡಲಾಯಿತು. ತಾಪಂ ಅಧ್ಯಕ್ಷ ಪ್ರಭಾಕರ್, ಉಪಾಧ್ಯಕ್ಷ ರತ್ನಮ್ಮ, ತಹಸೀಲ್ದಾರ್ ಡಾ.ಎನ್. ಭಾಸ್ಕರ್, ಪುರಸಭೆ ಅಧ್ಯಕ್ಷ ನರಸಿಂಹ ಮೂರ್ತಿ, ತಾಪಂ ಇಒ ರೆಡ್ಡೆಪ್ಪ ಇದ್ದರು.

ವರದಕ್ಷಿಣೆ ಕಿರುಕುಳ: ದೂರು ದಾಖಲು
ಕೆಜಿಎಫ್: ತವರು ಮನೆಯಿಂದ ವರದಕ್ಷಿಣೆ ತರುವಂತೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಪತಿ ಹಾಗೂ ಅತ್ತೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೃಹಿಣಿಯೊಬ್ಬಳು ದೂರು ನೀಡಿರುವ ಘಟನೆ ಚಾಂಪಿಯನ್ರೀಫ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಾಂಪಿಯನ್ರೀಫ್ ನಿವಾಸಿ ಲಾವಣ್ಯ ಎಂಬುವರೊಂದಿಗೆ ನಗರದ ಸುಭಾಷ್ನಗರದ ನಿವಾಸಿ ಪ್ರಭು ಎಂಬುವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಮಯದಲ್ಲಿ 160 ಗ್ರಾಂ ಚಿನ್ನಾಭರಣ, ದ್ವಿಚಕ್ರ ವಾಹನ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಮದುವೆಯಾದ ಹೊಸತರಲ್ಲಿ ಅನ್ಯೋನ್ಯವಾಗಿದ್ದದ ದಂಪತಿಗಳು ನಂತರದ ದಿನಗಳಲ್ಲಿ ವರದಕ್ಷಿಣಿ ವಿಚಾರವಾಗಿ ಕಿರುಕುಳ ಆರಂಭವಾಯಿತು. ಪತಿ ಪ್ರಭು ಹಾಗೂ ಅತ್ತೆ ತಿಲಗಾ, ನನ್ನನ್ನು ತವರಿನಿಂದ ವರದಕ್ಷಿಣೆ ತರುವಂತೆ ಪೀಡಿಸಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ಮಗಳಿಗೆ ಅನಾರೋಗ್ಯದ ಬಗ್ಗೆ ಗಂಡನಿಗೆ ತಿಳಿಸಿದರೂ, ಚಿಕಿತ್ಸೆ ಕೊಡಿಸದೆ ನಿರ್ಲಕ್ಷ್ಯ ಎಸಗಿದ್ದಾರೆ ಎಂದು ತಿಳಿಸಿದ್ದಾರೆ. ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಂಡಿರುವು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಯೋಜನೆ ಸದುಪಯೋಗವಾಗಲಿ: ಶಾಸಕ ಎನ್.ಎಚ್. ಶಿವಶಂಕರರೆಡ್ಡಿ
ಗೌರಿಬಿದನೂರು: ರಾಜ್ಯ ಸರ್ಕಾರ ಬಡ್ಡಿ ರಹಿತ ಸಾಲ ನೀಡುವುದರ ಜೊತೆಗೆ ಹಲವು ಜನಪರ ಯೋಜನೆಗಳನ್ನು  ಜಾರಿಗೆ ತಂದಿದ್ದು ಇವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ವಿಧಾನಸಭೆ ಉಪ ಸಭಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದರು. ಹಂಪಸಂದ್ರ ವ್ಯವಸಾಯ ಸೇವಾ ಸಹಕಾರ ಸಂಘ ಹಮ್ಮಿಕೊಂಡಿದ್ದ ಕೆಸಿಸಿ ಸಾಲ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ಯಾವುದೇ ಬ್ಯಾಂಕಿನಿಂದ ಸಾಲ ಪಡೆದು ಅಭಿವೃದ್ಧಿ ಹೊಂದಿ ಮತ್ತೆ ಬ್ಯಾಂಕಿಗೆ ಸಾಲ ಮರುಪಾವತಿ ಮಾಡಿದಾಗ ಸಹಕಾರ ಸಂಘಗಳು ಅಭಿವೃದ್ಧಿ ಪಥದತ್ತ ಸಾಗಲು ಸಹಕಾರಿಯಾಗುತ್ತದೆ ಎಂದರು.
ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಜೆ.ವಿ. ಹನುಮೇಗೌಡ ಮಾತನಾಡಿ, ಸಾಲ ಪಡೆದ ರೈತರು ಒಂದು ವರ್ಷದೊಳಗೆ ಸಾಲ ಮರುಪಾವತಿ ಮಾಡಬೇಕು. ಸಹಕಾರಿ ಬ್ಯಾಂಕ್ನ ಆರ್ಥಿಕ ಶಕ್ತಿ ಹೆಚ್ಚಿದರೆ ರೈತರಿಗೆ ಇನ್ನಷ್ಟು ಸಾಲ ಸೌಲಭ್ಯ ಕಲ್ಪಿಸಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ. ಗೋವಿಂದಗೌಡ ಮಾತನಾಡಿ ದರು. ಅಧ್ಯಕ್ಷ ಗಂಗಪ್ಪ, ಜಿಲ್ಲಾ ನಿರ್ದೇಶಕ ಹನುಮಂತರೆಡ್ಡಿ, ಜಿಪಂ ಸದಸ್ಯ ಸಿ.ಆರ್. ನರಸಿಂಹ ಮೂರ್ತಿ ಇದ್ದರು.

ಕಾರ್ಯಕ್ರಮ
ಮಾಲೂರು ತಾಲೂಕಿನ ಹೆಡಗಿನ ಬೆಲೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಯುಕ್ವೇನ್ ಇಂಡಿಯಾ ಲಿಮಿಟೆಡ್ ಕಂಪನಿ ವತಿಯಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ಶೈಕ್ಷಣಿಕ ಪರಿಕರ ವಿತರಿಸುವ ಕಾರ್ಯಕ್ರಮ.

ಶೈಕ್ಷಣಿಕ ಅನುದಾನ ಸದುಪಯೋಗಪಡಿಸಿಕೊಳ್ಳಿ
ಮುಳಬಾಗಲು: ಶೈಕ್ಷಣಿಕ ಅಭಿವೃದ್ಧಿಗಾಗಿ ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಮೂಲ ಸೌಕರ್ಯ ಒದಗಿಸಲು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಲಾಗುವುದೆಂದು ಶಾಸಕ ಕೊತ್ತೂರು ಜಿ. ಮಂಜುನಾಥ್ ನುಡಿದರು. ತಾಲೂಕಿನ ಕಾಂತರಾಜ ಸರ್ಕಲ್ ಬಳಿ ರು. 99 ಲಕ್ಷ ವೆಚ್ಚದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಬಾಲಕರ ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ಮಾಡಿ ಮಾತನಾಡಿದರು. ಕೆಜಿಎಫ್, ತಾಯಲೂರು, ಕೆ. ಬೈಯ್ಯಪಲ್ಲಿ, ಬೈರಕೂರು ರಸ್ತೆಗಳ ಅಭಿವೃದ್ಧಿಗೆ ಕಾರ್ಯ ನಡೆಯುತ್ತಿದೆ ಎಂದರು. ತಾಲೂಕಿನ 30 ಗ್ರಾಪಂ ವ್ಯಾಪ್ತಿಯಲ್ಲಿ ಗುಡಿಸಲು ವಾಸಿಗಳು  ಹಾಗೂ ಆಶ್ರಯರಹಿತರಿಗೆ 955 ಮನೆ ಬಿಡುಗಡೆಯಾಗಿದೆ ಎಂದು ನುಡಿದರು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ರಾಮಲಿಂಗಾರೆಡ್ಡಿ, ರಾಜೇಂದ್ರಗೌಡ ಇದ್ದರು.

ಕರವೇ ರಾಜ್ಯಾಧ್ಯಕ್ಷರ ಬಂಧನ ಖಂಡಿಸಿ ರಸ್ತೆತಡೆ
ಮಾಲೂರು: ಬೆಳಗಾವಿಗೆ ಹೂರಟ್ಟಿದ್ದ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಸೇರಿದಂತೆ ಕನ್ನಡದ ಹೋರಾಟಗಾರರನ್ನು ಪೊಲೀಸರು ಬಂಧಿಸಿರುವುದನ್ನು ಪ್ರತಿಭಟಿಸಿ ಇಲ್ಲಿನ ಕರವೇ ಕಾರ್ಯಕರ್ತರು ಇಲ್ಲಿನ ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಘಟನೆ ಶನಿವಾರ ನಡೆದಿದೆ.  ಈ ಸಂಧರ್ಭದಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ಮಂಜುನಾಥ್ ಗೌಡ ರವರು ಮಹಾರಾಷ್ಟ್ರದ ಕಿಡಿಗೇಡಿ ಶಾಸಕರು ನಮ್ಮ ನೆಲಕ್ಕೆ ಬಂದು ನಮ್ಮ ರಾಜ್ಯಕ್ಕೆ ಅವಮಾನ ಮಾಡುವ ರೀತಿಯಲ್ಲಿ ನಡೆದುಕೊಂಡು ಸಮಾಜದಲ್ಲಿ ಶಾಂತಿ ಕದಡುವ ಪರಿಸ್ಥಿತಿ ತಂದಿದ್ದರೂ ಅವರನ್ನು ಬಂಧಿಸದೆ ಬಿಟ್ಟ ನಮ್ಮ ರಾಜ್ಯ ಪೊಲೀಸರು ಕನ್ನಡ ಹೋರಾಟಗಾರರನ್ನು ಬಂಧಿಸುತ್ತಿರುವುದು ನಾಚಿಗೆಗೇಡಿನ ಸಂಗತಿ. ನಮ್ಮ ಸರ್ಕಾರವು ಸಹ ತಮ್ಮ ಮತ ಬ್ಯಾಂಕಿಗಾಗಿ ಎಂ.ಇ.ಎಸ್. ಕಿಡಿಗೇಡಿತನಕ್ಕೆ ಜಾಣ ಕುರುಡು ಪ್ರದರ್ಶಿಸಿ,ಕನ್ನಡ ಹೋರಾಟಗಾರರ ಮೇಲೆ ದರ್ಪ ತೋರಿಸುತ್ತಿರುವುದು ಖಂಡನೀಯ ಎಂದರು. ಈ ತಕ್ಷಣ ನಾರಾಯಣಗೌಡ ಸೇರಿದಂತೆ ನೂರಾರು ಕಾರ್ಯಕರ್ತರನ್ನು ಬಿಡುಗಡೆಗೊಳಿಸದಿದ್ದರೆ ಸಂಘಟನೆಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಚೇರಿ ಮುಂದೆ ಕುಳಿತವರ ಮೇಲೆ ಕಾರು ನುಗ್ಗಿ ಒಬ್ಬ ಸಾವು
ಬಂಗಾರಪೇಟೆ: ಕೂತಿದ್ದವರ ಮೇಲೆ ಕಾರೊಂದು ಹರಿದು ಒಬ್ಬರು ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಹುನ್ಕುಂದ ಗ್ರಾಮದಲ್ಲಿ ನಡೆದಿದೆ.ಗ್ರಾಮದ ನಾಗರಾಜ್25 ಎಂಬಾತನೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸುರೇಶ್ ಮತ್ತು ಚಂದ್ರಪ್ಪ ಗಂಭೀರವಾಗಿ ಗಾಯಗೊಂಡು ಕೋಲಾರದ ಎಸ್ಎನ್ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರು ಸ್ನೇಹಿತರು ಪಂಚಾಯ್ತಿ ಕಚೇರಿ ಮುಂದೆ ಕುಳಿತು ಕೊಂಡು ಲೋಕಾಭಿರಾಮ ಮಾತುಗಳನ್ನಾಡುಕೊಂಡಿದ್ದಾಗ ದಿಢೀರನೆ ರಭಸವಾಗಿ ಬಂದ ಕಾರೊಂದು ಮೂವರ ಮೇಲೆ ಹಾದು ಹೋಗಿದೆ. ಕಾರು ಬಂದ ರಭಸಕ್ಕೆ ನಾಗರಾಜ್ ಸ್ಥ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾರನ್ನು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ. ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಬೆಲ್ಟ್ ವಿತರಣೆ
ಮಾಲೂರು: ಸರ್ಕಾರವು ಶೈಕ್ಷಣಿಕ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಗ್ರಾಮೀಣ ಭಾಗದ ಶಾಲೆಯ ಶಿಕ್ಷಕರು ಗ್ರಾಮೀಣ ಮಕ್ಕಳಿಗೆ ಸದುಪಯೋಗವಾಗುವಂತೆ ಕರ್ತವ್ಯ ನಿರ್ವಹಿಸಬೇಕು ಎಂದು ತಾಪಂ ಸದಸ್ಯ ಎಸ್.ವಿ. ಲೋಕೇಶ್ ಹೇಳಿದರು.
  ತಾಲೂಕಿನ ಹೆಡಗಿನ ಬೆಲೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಯುಕ್ವೇನ್ ಇಂಡಿಯಾ ಕಂಪನಿ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ, ಬೆಲ್ಟ್, ಟೈ ಹಾಗೂ ಶೂಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡುತ್ತ ರಾಜ್ಯ ಸರ್ಕಾರದ ಯೋಜನೆಗಳಾದ ಅಕ್ಷರ ದಾಸೋಹ, ಕ್ಷೀರಭಾಗ್ಯ, ವಿದ್ಯಾರ್ಥಿ ವೇತನ,ಹೆಣ್ಣು ಮಕ್ಕಳಿಗೆ 2 ರು.ಗಳ ಪ್ರೋತ್ಸಾಹ ಧನ ಸೇರಿದಂತೆ ಹತ್ತು ಹಲಾವರು ಯೋಜನೆಗಳನ್ನು ಶೈಕ್ಷಣಿಕ ಅಭಿವದ್ಧಿ ಗಾಗಿ ಅನುಷ್ಠಾನಗೊಳಿಸುತ್ತಿದೆ. ಜತೆಯಲ್ಲಿ ಸ್ಥಳೀಯವಾಗಿ ತಾಲೂಕಿನಲ್ಲಿರುವ ಹಲಾವರು ಬೃಹತ್ ಕಾರ್ಖಾನೆ-ಕಂಪನಿಗಳು ತಾಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು. ಅನಂತಚಾರಿ ಇದ್ದರು.

ರಸ್ತೆ ತಡೆ
ಮಾಲೂರಿನ ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ ಶನಿವಾರ ರಸ್ತೆ ತಡೆ ನಡೆಸಿದ ಕರವೇ ಕಾರ್ಯಕರ್ತರು ಬೆಳಗಾವಿಯಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಸೇರಿದಂತೆ ಬಂಧಿಸಿರುವ ನೂರಾರು ಕನ್ನಡ ಹೋರಾಟಗಾರರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ವಿದ್ಯಾರ್ಥಿಗಳು ಪಠ್ಯದ ಜತೆ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ
ಮಾಲೂರು: ಸುಸಂಸ್ಕೃತ ಸಮಾಜಕ್ಕೆ ಉನ್ನತ ಶಿಕ್ಷಣಕ್ಕೆ ಪತ್ರಿಕೆಗಳು ಮಹತರ ಪಾತ್ರ ವಹಿಸುವುದರಿಂದ ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳ ಜತೆ ದಿನ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕವಿ ಡಿ.ಟಿ. ಪ್ರಸನ್ನ ಹೇಳಿದರು.
  ಅವರು ಪಟ್ಟಣದ ಪ್ರಗತಿ ಪದವಿಪೂರ್ವ ಕಾಲೇಜಿನಲ್ಲಿ ಚುಟುಕ ಸಾಹಿತ್ಯ ಪರಿಷತ್ ಶನಿವಾರ ಆಯೋಜಿಸಿದ್ದ ಮನೆಗೊಂದು ಪತ್ರಿಕೆ ಕಾರ್ಯಕ್ರಮದಲ್ಲಿ ಮಾತನಾಡುತ್ತ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪೋಷಕರು ತಮ್ಮ ಮಕ್ಕಳಿಂದ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ತಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕೆಂಬ ಹಂಬಲವನ್ನು ಹುಸಿಗೊಳಸದಂತೆ ವಿದ್ಯಾರ್ಥಿಗಳು ತಮ್ಮ ವ್ಯಾಸಂಗ ಕಾಲದಲ್ಲಿ ಓದುವ ಹವ್ಯಾಸ ಬೆಳೆಸಿಕೊಂಡು ತಮ್ಮ ಕುಟುಂಬದ ಹಾಗೂ ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಬೇಕು ಎಂದರು.

ಮಾಲೂರಲ್ಲಿ ಸ್ವಾತ್ರಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆ
ಮಾಲೂರು: ಇಲ್ಲಿನ ಶಾಸಕರ ಕಚೇರಿಯಲ್ಲಿ ತಹಸೀಲ್ದಾರ್ ಶಿವುಕುಮಾರ್ ಅಧ್ಯಕ್ಷತೆಯಲ್ಲಿ ಸ್ವಾತ್ರಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆ ಮಂಗಳವಾರ ನಡೆಯಿತು.  ತಾಲೂಕಿನ ಸರ್ಕಾರದ ವಿವಿಧ ಇಲಾಖೆಯ ಮುಖ್ಯಸ್ಥರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಮಂಜುನಾಥ್ ಗೌಡ ಕಳೆದ ವರ್ಷದಂತೆ ಈ ಬಾರಿಯೂ ಸ್ವಾತಂತ್ರ್ಯ ಮಹೋತ್ಸವವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸುವಂತೆ ಸೂಚಿಸಿದರಲ್ಲದೇ ಮಕ್ಕಳು-ಪೋಷಕರು ಬಿಸಿಲ ಬೇಗೆಯಿಂದ ತಪ್ಪಿಸಲು ಪೆಂಡಾಲ್ ಹಾಕಿಸುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳಿಗಾಗಿ ಸಿಹಿಯನ್ನು ಸ್ವಂತ ಖರ್ಚಿನಲ್ಲಿ ನೀಡುವುದಾಗಿ ತಿಳಿಸಿದ ಶಾಸಕರು ಸ್ವಾತಂತ್ರ್ಯೋತ್ಸವ ಅರ್ಥಪೂರ್ಣವಾಗಿ ಮೂಡಿಬರುವಂತೆ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಾಲೂಕು ಆಡಳಿತಕ್ಕೆ ನಿರ್ದೇಶನ ನೀಡಿದರು. ತಹಸೀಲ್ದಾರ್ ಶಿವು ಕುಮಾರ್ ಮಾತನಾಡಿ ಪಟ್ಟಣದ ಎಲ್ಲ ಸರ್ಕಾರಿ ಕಚೇರಿಗಳ ಮೇಲೆ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನವೇ ದೀಪಾಲಂಕಾರ ಹಾಕಿಸಲಾಗುವುದು.

ಪೂರ್ವಭಾವಿ ಸಭೆ
ಮಾಲೂರಿನ ಮಿನಿ ವಿಧಾನ ಸೌಧದ ಶಾಸಕ ಕೊಠಡಿಯಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಶಿವು ಕುಮಾರ್ ಮಾತನಾಡಿದರು. ಶಾಸಕ ಮಂಜುನಾಥ್ ಗೌಡ,ತಾ.ಪಂ.ಅಧ್ಯಕ್ಷೆ ನಾಗವೇಣಿ, ಪುರಸಭೆ ಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com