ಕೋಲಾರ: ಪ್ರಾಣಿ ಪಕ್ಷಿಗಳಿಗೆ ಉಪಯೋಗವಿಲ್ಲದ ಜಾಲಿ ಗಿಡಗಳನ್ನು ತೆರವುಗೊಳಿಸಿ ಕೆರೆಗಳ ಸಂರಕ್ಷಣೆಗಾಗಿ ಆ.15ರಿಂದ ಆರಂಭಗೊಳ್ಳಲಿರುವ ಆಂದೋಲನಕ್ಕೆ ಜನತೆ ಸಂಪೂರ್ಣ ಸಹಕಾರ ನೀಡಬೇಕೆಂದು ಶ್ರೀನಿವಾಸಪುರ ಶಾಸಕ ಕೆ.ಆರ್. ರಮೇಶ್ ಕುಮಾರ್ ಮನವಿ ಮಾಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ಕೆರೆ ಉಳಿಸಿ ಆಂದೋಲನ ಸಂಬಂಧ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಆ.15ರಂದು ಮುದವಾಡಿ ಕೆರೆಯನ್ನು ಪ್ರವೇಶ ಮಾಡಿ ಅಲ್ಲಿ ಬೆಳೆದಿರುವ ಕರಿ ಜಾಲಿ ಮತ್ತು ಬಿಳಿ ಜಾಲಿಯನ್ನು ಕಿತ್ತೊಗೆದು ಕೆರೆಯ ಒತ್ತುವರಿ ತೆರವುಗೊಳಿಸಿ ಸಂರಕ್ಷಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕಾರ್ಯಕ್ಕೆ ಯಾರೇ ಅಡ್ಡಿ ಬಂದರೂ ನಿಲ್ಲುವುದಿಲ್ಲ. ಕೆರೆಗಳ ಸಂರಕ್ಷಣೆಗಾಗಿ ತಾವು ಹುತಾತ್ಮರಾಗುವುದಕ್ಕೂ ಸಿದ್ಧ ಎಂದು ಘೋಷಣೆ ಮಾಡಿದರು.
ಕೆರೆ ಉಳಿಸಿ ಆಂದೋಲನಕ್ಕಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುತ್ತದೆ. ಇದರಲ್ಲಿ ವಿವಿಧ ಸಂಘ ಸಂಸ್ಥೆಗಳನ್ನು, ಪ್ರಗತಿಪರ ರೈತರು, ಶಾಲಾ-ಕಾಲೇಜುಗಳ ಎನ್ಎಸ್ಎಸ್, ಎನ್ಸಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್, ಜನಪ್ರತಿನಿಧಿಗಳನ್ನು ಒಗ್ಗೂಡಿಸಿ ಕೆರೆ ಉಳಿಸಿ ಆಂದೋಲನದ ಗುರಿ ತಲುಪುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಮುದುವಾಡಿ ಕೆರೆಯನ್ನು ಸ್ವಚ್ಛಗೊಳಿಸಿ ನಂತರ ಒತ್ತುವರಿಯನ್ನು ಯಾವುದೇ ಮುಲಾಜು ಇಲ್ಲದೆ ತೆರವುಗೊಳಿಸುತ್ತೇವೆ. ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಜನತೆ ಇದಕ್ಕೆ ಸಂಪೂರ್ಣ ಸಹಕಾರ ನೀಡುವ ನಂಬಿಕೆ ಇದೆ. ರೈತರು ಮತ್ತು ಪ್ರಕೃತಿಯ ವಿರೋಧಿಯಾಗಿರುವ ಜಾಲಿ ಗಿಡಗಳನ್ನು ಕೆರೆಯಿಂದ ಎತ್ತಗಂಡಿ ಮಾಡಿ ಮಳೆ ನೀರು ಮತ್ತು ನೀರಾವರಿ ಯೋಜನೆಗಳಿಂದ ಹರಿಯುವ ನೀರು ಕೆರೆಯಲ್ಲಿ ನಿಲ್ಲುವಂತೆ ಮಾಡಿದಲ್ಲಿ ಜನರಿಗೆ ಪ್ರಯೋಜನವಾಗಲಿದೆ. ಕೆರೆ ಉಳಿಸಿ ಆಂದೋಲನಕ್ಕೆ ಸಂಬಂಧಿಸಿ ಕರಪತ್ರಗಳ ಮೂಲಕ ಜನತೆಯಲ್ಲಿ ಅರಿವು ಮೂಡಿಸಲಾಗುವುದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಕೆ. ರವಿ, ಜಿಲ್ಲೆಯ ಕೆರೆಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಕೆರೆಗಳ ಒತ್ತುವರಿ ತೆರವುಗೊಳಿಸುವಂತೆ ಹೈಕೋರ್ಟ್ ಆದೇಶಿಸಿದೆ. ಜಲ ಸಂಪತ್ತಿನ ಮೂಲಗಳಾದ ಕೆರೆಗಳನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕೆರೆ ಉಳಿಸಿ ಆಂದೋಲನಕ್ಕೆ ಎಲ್ಲರ ಸಹಕಾರ ಪಡೆಯುವುದಾಗಿ ತಿಳಿಸಿದರು.
ಇಚ್ಚಾಶಕ್ತಿ ಅಗತ್ಯ: ರಾಜಕೀಯ ಇಚ್ಚಾಶಕ್ತಿ, ಪ್ರಾಮಾಣಿಕ ಅಧಿಕಾರಿಗಳಿಗೆ ಉತ್ತಮ ಕೆಲಸ ಮಾಡಲು ಅವಕಾಶ ನೀಡದೆ ಕೆರೆ ಉಳಿಸಿ ಆಂದೋಲನ ಕೈಗೆತ್ತಿಕೊಂಡರೆ ಪ್ರಯೋಜನವಿಲ್ಲವೆಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ. ಗೋಪಿನಾಥ್ ಹೇಳಿದರೆ. ಪತ್ರಕರ್ತ ಕೆ.ನರಸಿಂಹಮೂರ್ತಿ ಜಿಲ್ಲೆಯ ಕೆರೆಗಳ ದುಸ್ಥಿತಿಯ ಬಗ್ಗೆ ಈಗಾಗಲೇ ಮಾಧ್ಯಮಗಳು ಬೆಳಕು ಚೆಲ್ಲಿವೆ. ಕಾನೂನಾತ್ಮಕವಾಗಿ ಕೆರೆಗಳನ್ನು ಉಳಿಸಲು ಜನಪ್ರತಿನಿಧಿಗಳು ಮುಖ್ಯವಾಗಿ ಶಾಸಕರ ಪಾತ್ರ ಪ್ರಮುಖವಾಗಿದೆ ಎಂದು ಅಭಿಪ್ರಾಯಿಸಿದರು.
ಕೆರೆಗಳ ಉಳಿಸುವ ಆಂದೋಲನ ಉತ್ತಮ ಕಾರ್ಯ, ಆದರೆ. ಜಿಲ್ಲೆಯ ಮಟ್ಟಿಗೆ ಜೇನುಗೂಡಿಗೆ ಕೈಹಾಕುವ ಸಾಹಸ ಕಾರ್ಯವಾಗಿದೆ. ಸೂಕ್ಷ್ಮತೆಯನ್ನು ಅರಿತು ಎಚ್ಚರದಿಂದ ಗುರಿ ಸಾಧಿಸಬೇಕೆಂದು ಪತ್ರಕರ್ತ ಪಾ.ಶ್ರೀ.ಅನಂತರಾಮ್ ತಿಳಿಸಿದರೆ, ಕೆರೆಗಳ ಸಂರಕ್ಷಣೆಗೆ ಜನತೆ ಮುಂದೆ ಬರಲು ಸಿದ್ಧ, ಆದರೆ, ಜನಪ್ರತಿನಿಧಿಗಳು ಸಹಕಾರ ಮುಖ್ಯವೆಂದು ಪತ್ರಕರ್ತ ಸಿ.ಜಿ. ಮುರಳಿ, ಮಹಿಳಾ ಸಂಘಟನೆಯ ಶೈಲಜ ತಿಳಿಸಿದರು. ಪ್ರಭಾರ ಜಿಲ್ಲಾಧಿಕಾರಿ ಮಂಜುನಾಥ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.