3 ತಿಂಗಳಿಗೆ 1 ಯೂನಿಟ್ ರಕ್ತ ದಾನ ಮಾಡಿ

Updated on

ಚಿಕ್ಕಬಳ್ಳಾಪುರ: ರಕ್ತದಾನ ಮಾಡುವುದರಿಂದ ಬೇರೊಬ್ಬರ ಪ್ರಾಣ ಉಳಿಯುವುದಲ್ಲದೇ ರಕ್ತದಾನಿಗಳ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ.ಶ್ರೀನಿವಾಸಮೂರ್ತಿ ತಿಳಿಸಿದರು.
ಅವರು ನಗರದ ಹೊರವಲಯದ ಚಿತ್ರಾವತಿಯ ಸರ್ಕಾರಿ ಬಿಎಡ್ ಕಾಲೇಜಿನಲ್ಲಿ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಆರೋಗ್ಯವಂತರು 17 ವರ್ಷದಿಂದ 55 ವರ್ಷದವರೆಗೆ ತಮ್ಮ ರಕ್ತವನ್ನು ಪ್ರತಿ 3 ತಿಂಗಳಿಗೊಮ್ಮೆ ಸ್ವಯಂಪ್ರೇರಣೆಯಿಂದ ನೀಡಬಹುದಾಗಿದೆ. ಇದರಿಂದ ಅವರ ಶರೀರದಲ್ಲಿ ಯಾವುದೇ ಕಾಯಿಲೆ ಇದ್ದರೂ ಮೊದಲೇ ತಿಳಿದು ಅದಕ್ಕೆ ಚಿಕಿತ್ಸೆ ಪಡೆಯಬಹುದಾಗಿದ್ದು, ರಕ್ತವನ್ನು ಪ್ರತಿ 3 ತಿಂಗಳಿಗೆ ಒಂದು ಯೂನಿಟ್ ನಂತೆ ನೀಡಿದಾಗ ಮತ್ತೆ ಶರೀರದಲ್ಲಿ ಉತ್ಪತ್ತಿಯಾಗುವ ಹೊಸ ರಕ್ತ ಕಣಗಳಿಂದ ಆರೋಗ್ಯದಲ್ಲಿ ಉತ್ತಮ ಬೆಳವಣಿಗೆ ಕಂಡು ಬರಲಿದೆ ಎಂದರು.
ಬಿಎಡ್ ಕಾಲೇಜಿನ ಪ್ರಾಂಶುಪಾಲ ಕೋಡಿ ರಂಗಪ್ಪ ಮಾತನಾಡಿ, ವಿಶ್ವದಲ್ಲಿ ಯಾವುದೇ ವಿಪತ್ತು ಸಂಭವಿಸಿದಾಗ  ಸಾರ್ವಜನಿಕರನ್ನು ರಕ್ಷಣೆ ಮಾಡಲು ರೆಡ್‌ಕ್ರಾಸ್ ಸೊಸೈಟಿಯನ್ನು ಡುನಂಟ್ 1964 ಮೇ 8 ರಂದು ಪ್ರಾರಂಭಿಸಿದ್ದು ಈ ಮೂಲಕ ವಿಶ್ವ ರೆಡ್‌ಕ್ರಾಸ್ ದಿನಾಚರಣೆ ಮೇ 8 ರಂದು ಆಚರಣೆಯಲ್ಲಿದೆ ಎಂದ ಅವರು,ರಾಷ್ಟ್ರದಲ್ಲಿರುವ ಸೇವಾ ಸಂಸ್ಥೆಗಳೊಂದಿಗೆ ಹೋಲಿಸಿದಾಗ ರೆಡ್‌ಕ್ರಾಸ್ ಸಂಸ್ಥೆಯ ಸೇವೆ ಅಮೂಲ್ಯವಾಗಿದೆ ಎಂದರು.
ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಚೇರ್ಮನ್ ಡಾ. ಬಾಬುರೆಡ್ಡಿ ಮಾತನಾಡಿ, ಪ್ರಾಣಾಂತಿಕ ಸಮಯದಲ್ಲಿ ರಕ್ತದ ಅವಶ್ಯಕತೆಗೆ ರೆಡ್‌ಕ್ರಾಸ್ ಹೆಚ್ಚು ಒತ್ತು ನೀಡುತ್ತಾ ಬಂದಿದ್ದು, ರಕ್ತವಿಲ್ಲದಿದ್ದರೆ ಮನುಷ್ಯ ಬದುಕುವುದು ಕಷ್ಟ ಎನ್ನುವುದನ್ನರಿತು ರೆಡ್‌ಕ್ರಾಸ್ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳ ಮೂಲಕ ರಕ್ತದ ಶೇಖರಣೆ ಮಾಡುತ್ತಿದೆ ಎಂದರು.  ಜಿಲ್ಲೆಯಲ್ಲಿ ಪ್ರಸ್ತುತ 258 ಕ್ಕೂ ಹೆಚ್ಚು ಕಾಯಂ ಸದಸ್ಯರಿದ್ದು, 71 ಕ್ಕೂ ಹೆಚ್ಚು ಪೇಟ್ರನ್ಸ್ ಇದ್ದಾರೆ ಎಂದ ಅವರು, ವಿದ್ಯಾರ್ಥಿಗಳಿಗಾಗಿ ಜೂನಿಯರ್ ರೆಡ್ ಕ್ರಾಸ್ ಘಟಕಗಳನ್ನು ಎಲ್ಲಾ ಕಾಲೇಜುಗಳಲ್ಲಿ ಪ್ರಾರಂಭಿಸಲಾಗಿದೆ ಎಂದರು.
ರೆಡ್‌ಕ್ರಾಸ್ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣಾಚಾರ್ ಪ್ರಾಸ್ತಾವಿಕ ನುಡಿಗಳನ್ನಾಡಿ, ರೆಡ್ ಕ್ರಾಸ್ ಘಟಕದಿಂದ 2012 ರ ಮಾರ್ಚಿ 29 ರಂದು ಜಿಲ್ಲೆಯಲ್ಲಿ ರೆಡ್ ಕ್ರಾಸ್ ರಕ್ತ ನಿಧಿ ಕೇಂದ್ರ ಆರಂಭಗೊಂಡು ರಾಜ್ಯದಲ್ಲಿ ಮಾದರಿ ರಕ್ತನಿಧಿ ಕೇಂದ್ರವೆನಿಸಿಕೊಂಡಿದೆ. ಮಾರ್ಚ್ 2014 ರವರೆಗೆ 177 ರಕ್ತದಾನ ಶಿಬಿರಗಳ ಆಯೋಜನೆ, 10,571 ಯೂನಿಟ್ ರಕ್ತ ಶೇಖರಣೆ, 10,056 ಮಂದಿಗೆ ರಕ್ತ ನೀಡಲಾಗಿದೆ ಎಂದರು.  ಈ ಸಂದರ್ಭದಲ್ಲಿ ಶಿಕ್ಷಣ ತಜ್ಞ ಡಾ.ಎನ್. ಶಿವರಾಮರೆಡ್ಡಿ, ಬಿಎಡ್ ಕಾಲೇಜಿನ ಉಪನ್ಯಾಸಕ ಎನ್. ಲೋಕನಾಥ್, ವರದಾಚಾರ್ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com