ಗಂಗಾವತಿ: ಗ್ರಾಮೀಣ ಕ್ರೀಡೆಗೆ ಹೆಚ್ಚು ಪ್ರಾಧಾನ್ಯತೆ ನೀಡುವ ಉದ್ದೇಶದಿಂದ ಕನಕಗಿರಿ ಉತ್ಸವದಲ್ಲಿ ವಿವಿಧ ಕ್ರೀಡೆಏರ್ಪಡಿಸಿದೆ ಎಂದು ಕನಕಗಿರಿ ಶಾಸಕ ಶಿವರಾಜ ತಂಗಡಗಿ ಹೇಳಿದರು.
ತಾಲೂಕಿನ ಐತಿಹಾಸಿಕ ಕನಕಗಿರಿ ಉತ್ಸವದ ನಿಮಿತ್ತ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ರಾಜ್ಯದಲ್ಲಿ ವಿವಿಧ ಉತ್ಸವಗಳನ್ನು ಆಚರಿಸುತ್ತ ಬಂದಿದೆ. ಅದರಂತೆ ಕನಕಗಿರಿ ಉತ್ಸವ ಆಚರಿಸಲಾಗುತ್ತದೆ. ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಮಲ್ಲಕಂಬ, ಕಬಡ್ಡಿ, ವಾಲಿಬಾಲ್ ಮತ್ತಿತರ ಕ್ರೀಡೆಗಳನ್ನು ಏರ್ಪಡಿಸಲಾಗಿದೆ ಎಂದರು.
ಕನಕಗಿರಿ ಕೇಸರಿ: ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಒಂದೂವರೇ ಕೆಜಿ ಬೆಳ್ಳಿಯ ಗಧೆ ನೀಡಲಾಗುತ್ತಿದ್ದು, ಕುಸ್ತಿ ಪಟುವಿಗೆ ಚೈತನ್ಯ ತುಂಬುವ ಉದ್ದೇಶದಿಂದ ಕನಕಗಿರಿ ಕೇಸರಿ ಪುರಸ್ಕಾರ ನೀಡಲಾಗುತ್ತದೆ. ಇಲ್ಲಿ ವಿಜೇತರಾದವರು ರಾಜ್ಯ ಮತ್ತು ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಪ್ರಶಸ್ತಿ ಪಡೆಯುತ್ತಾರೆ ಎಂದರು.
ಜಿಪಂ ಸದಸ್ಯ ಸಮಗಂಡಿ ಗಂಗಣ್ಣ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಅಧ್ಯಕ್ಷ ಹೊನ್ನೂರುಸಾಬ ತಾಪಂ ಸದಸ್ಯರಾದ ಜೆ. ಬಸವರಾಜ, ಸರ್ವಮಂಗಳ ಭೂಸನೂರುಮಠ, ರಂಗಮ್ಮ ನಾಯಕ, ಗೋವಿಂದರೆಡ್ಡಿ, ಮಂಜುನಾಥ, ರುದ್ರಪ್ಪ ಕುರಿ, ಹುಲಗಪ್ಪ, ಹನುಮಂತಪ್ಪ ಮೂಸ್ಟೂರು, ಜಿಲ್ಲಾ ಯುವಜನ ಸೇವಾ ಕ್ರೀಡಾ ಇಲಾಖೆ ಉಪನಿರ್ದೇಶಕ ವಿ.ಎಸ್. ಘಾಡಿ, ತಾಲೂಕು ಯುವಜನ ಸೇವಾ ಕ್ರೀಡಾಧಿಕಾರಿ ತಿಪ್ಪಯ್ಯಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.