ಹನುಮಸಾಗರ: ಚುನಾಯಿತ ಪ್ರತಿನಿಧಿಗಳು ಭ್ರಷ್ಟಾಚಾರದಲ್ಲಿ ತೊಡಗದೆ ಸರ್ಕಾರದ ಯೋಜನೆಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಜನರಿಗೆ ತಲುಪಿಸುವ ಕೆಲಸ ಮಾಡಿದಾಗ ಅವರು ಜನಮೆಚ್ಚುವ ನಾಯಕರಾಗುತ್ತಾರೆ ಎಂದು ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಹೇಳಿದರು.
ಗ್ರಾಮದ ಕರಿಸಿದ್ಧೇಶ್ವರ ಮಠದ ಆವರಣದಲ್ಲಿ 2010-11ನೇ ಸಾಲಿನ ಸುವರ್ಣ ಗ್ರಾಮ ಯೋಜನೆಯಡಿ ನಿರ್ಮಿಸಿದ ಸಮುದಾಯ ಭವನವನ್ನು ಶುಕ್ರವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮದಲ್ಲಿ ಸ್ವಚ್ಛತೆ, ಆರೋಗ್ಯ, ಚರಂಡಿ, ರಸ್ತೆ ನಿರ್ಮಾಣ ಮುಂತಾದ ಅಭಿವೃದ್ಧಿ ಕೆಲಸ ಮಾಡಲು ಸರ್ಕಾರ ಸುವರ್ಣ ಗ್ರಾಮ ಯೋಜನೆ ಜಾರಿಗೊಳಿಸಿದೆ. ಗ್ರಾಮದ ಎಲ್ಲ ಸಮುದಾಯದ ಹಿರಿಯರು, ಜನಪ್ರತಿನಿಧಿಗಳ ಒತ್ತಾಸೆ ಮೇರೆಗೆ ಈ ಸಮುದಾಯ ಭವನ ನಿರ್ಮಾಣವಾಗಿದೆ. ಇದು ತಾಲೂಕಿನಲ್ಲಿ ಅತ್ಯಂತ ದೊಡ್ಡ ಸಮುದಾಯ ಭವನವಾಗಿದೆ ಎಂದರು.
ತಾಪಂ ಅಧ್ಯಕ್ಷ ಶರಣು ತಳ್ಳಿಕೇರಿ ಮಾತನಾಡಿ, ಇಚ್ಛಾಶಕ್ತಿ ಇದ್ದರೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಲಿಕ್ಕೆ ಸಾಧ್ಯ ಎಂಬುದಕ್ಕೆ ಈ ಬೃಹತ್ ಸಮುದಾಯಭವನವೇ ಸಾಕ್ಷಿ. ಇಲ್ಲಿಯ ಜನರು ಕೃಷ್ಣಾ ಬಿ ಸ್ಕೀಂ ಜಾರಿಗೆ ಜಾತ್ಯತೀತವಾಗಿ ಹೋರಾಟ ಪ್ರಾರಂಭಿಸಿದ್ದರು. ಅದರ ಫಲವಾಗಿ ಈಗ ಸಿಎಂ ಜಗದೀಶ ಶೆಟ್ಟರ್ ಅವರು ಆ ಯೋಜನೆಗೆ ಇತ್ತೀಚೆಗೆ ಅಡಿಗಲ್ಲಿನಿಟ್ಟು ಈ ಭಾಗ ನೀರಾವರಿಯಾಗಲು ಸಾಧ್ಯವಾಗಿಸಿದ್ದಾರೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ವಿಜಯ ಮಹಾಂತ ಸ್ವಾಮೀಜಿ, ಹಾಲಕೆರೆ ಅಭಿನವ ಅನ್ನದಾನ ಸ್ವಾಮೀಜಿ ಆಶೀರ್ವಚನ ನೀಡಿದರು. ಗ್ರಾಪಂ ಅಧ್ಯಕ್ಷೆ ಲಲಿತಮ್ಮ ಹುಲ್ಲೂರು ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನ್ನಪೂರ್ಣಮ್ಮ ಕಂದಕೂರಪ್ಪ, ಜಿಪಂ ಸದಸ್ಯೆ ಲಕ್ಷ್ಮೀದೇವಿ ಬಸವರಾಜ ಹಳ್ಳೂರು, ತಾಪಂ ಸದಸ್ಯರಾದ ಹನುಮಂತಪ್ಪ ರಾಠೋಡ, ಪರುಶುರಾಮಪ್ಪ ನಂದ್ಯಾಳ, ಗ್ರಾಪಂ ಉಪಾಧ್ಯಕ್ಷೆ ರೂಪಾ ಹಡಪದ, ತಾಪಂ ಇಓ ಎಂ. ಜಯಪ್ಪ ಇತರರು ಇದ್ದರು.
ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ, ಜಿಪಂ, ತಾಪಂ, ಗ್ರಾಪಂ ಸದಸ್ಯರು, ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಮಹಾಂತಯ್ಯ ಕೋಮಾರಿ, ಪ್ರಹ್ಲಾದ ಕಟ್ಟಿ, ಬಸವರಾಜ ದ್ಯಾವಣ್ಣವರ ನಿರ್ವಹಿಸಿದರು.
ಯಾತ್ರಿ ನಿವಾಸಕ್ಕೆ ಶಂಕುಸ್ಥಾಪನೆ
ಇಲ್ಲಿಯ ಅಭಿನವ ತಿರುಪತಿಯ ಬೆಟ್ಟದ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದ ಬಳಿ ಪ್ರವಾಸೋದ್ಯಮ ಇಲಾಖೆಯಿಂದ ಮಂಜೂರಾದ ಯಾತ್ರಿ ನಿವಾಸಕ್ಕೆ ಶಂಕುಸ್ಥಾಪನೆಯನ್ನು ಶಾಸಕ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಶುಕ್ರವಾರ ಸಂಜೆ ನೆರವೇರಿಸಿದರು