ನಾಳೆ ಸಚಿವ ಖರ್ಗೆ, ಧರ್ಮಸಿಂಗ್ಗೆ ಸನ್ಮಾನ
ಕೊಪ್ಪಳ: ಹೈದ್ರಾಬಾದ್- ಕರ್ನಾಟಕಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು ಭಾರತ ಸಂವಿಧಾನದ 371 (ಜೆ) ಕಲಂ ತಿದ್ದುಪಡಿ ಹೋರಾಟ, ಜಾರಿಗೆ ಶ್ರಮಿಸಿದ ಕೇಂದ್ರದ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಂಸದ ಎನ್. ಧರ್ಮಸಿಂಗ್ ಅವರಿಗೆ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಸಾರ್ವಜನಿಕ ಮೈದಾನದಲ್ಲಿ ಫೆ.4ರ ಬೆಳಗ್ಗೆ 11.30ಕ್ಕೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ. ಕಾಂಗ್ರೆಸ್ನ ಕೊಪ್ಪಳ ಜಿಲ್ಲೆಯ ಹಾಲಿ, ಮಾಜಿ ಸಂಸದರು, ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ಚುನಾಯಿತ ಪ್ರತಿನಿಧಿಗಳು, ಪಕ್ಷದ ವಿವಿಧ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು, ಪಕ್ಷದ ಅಭಿಮಾನಿಗಳು, ಜಿಲ್ಲೆಯ ಯುವಜನತೆ, ಸಾರ್ವಜನಿಕರು ಭಾಗವಹಿಸಬೇಕೆಂದು ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಹಿಟ್ನಾಳ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಗವಿಮಠ ಜಾತ್ರೆ: ಮರಳು, ರಾಗುದಾಸ ಅರ್ಪಣೆ
ಕೊಪ್ಪಳ: ಇಲ್ಲಿಗೆ ಸಮೀಪದ ಭಾಗ್ಯನಗರದ ಬಾಲ ವಿನಾಯಕ ಮಿತ್ರ ಮಂಡಳಿಯಿಂದ ಶನಿವಾರ ಗವಿಮಠ ಜಾತ್ರೆಗೆ 11 ಟ್ರ್ಯಾಕ್ಟರ್ ಮರಳು, 2.50 ಕ್ವಿಂಟಲ್ ರಾಗುದಾಸ (ರವಾ, ಗೋಡಂಬಿ, ದ್ರಾಕ್ಷಿ ಮುಂತಾದ ಪದಾರ್ಥಗಳಿಂದ ಮಾಡಿದ ಸಿಹಿ ತಿನಿಸು ಅಥವಾ ಶಿರಾ ಹೋಲುವ ಆಹಾರ) ದೇಣಿಗೆ ನೀಡಲಾಯಿತು. 11 ಟ್ರ್ಯಾಕ್ಟರ್ ಮರಳು, 2.50 ಕ್ವಿಂಟಲ್ ರಾಗುದಾಸನ್ನು ಭಾಗ್ಯನಗರದಿಂದ ಗವಿಮಠ ಆವರಣದವರೆಗೆ ಅದ್ಧೂರಿಯಿಂದ ಮೆರವಣಿಗೆಯಲ್ಲಿ ತರಲಾಯಿತು. ಮಂಡಳಿ ಸದಸ್ಯರು, ಭಾಗ್ಯನಗರ ಗ್ರಾಮಸ್ಥರು, ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.