ಕುಕನೂರು: ನವೋದಯ ಸಿಬ್ಬಂದಿ ಮುಷ್ಕರದ ಮಧ್ಯೆಯೂ ಪರೀಕ್ಷೆ ನಡೆಸುವ ಮೂಲಕ ಜಿಲ್ಲಾಡಳಿತ ತನ್ನ ಕರ್ತವ್ಯ ಪಾಲನೆ ಮಾಡಿದೆ. ಜಿಲ್ಲೆಯ ಗಂಗಾವತಿ, ಕೊಪ್ಪಳ, ಕುಷ್ಟಗಿ, ಯಲಬುರ್ಗಾದ ಒಟ್ಟು 3500 ವಿದ್ಯಾರ್ಥಿಗಳು 6ನೇ ತರಗತಿಗೆ ಪ್ರವೇಶ ಬಯಸಿ ಪರೀಕ್ಷೆಗೆ ದಾಖಲಾಗಿದ್ದರು. ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆಗಳು ಅಧಿಕೃತವಾಗಿ ಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳು ಮತ್ತವರ ಪಾಲಕರು ನಿರಾಳರಾಗುವಂತೆ ಮಾಡಿವೆ.
ಇದೇ ಮೊದಲ ಬಾರಿ: ಜವಾಹರ ನವೋದಯ ಶಾಲೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಿಬ್ಬಂದಿ ಹೊರತು ಪಡಿಸಿ ಪ್ರವೇಶ ಪರೀಕ್ಷೆ ನಡೆದಿದೆ. ಜವಾಹರ ನವೋದಯ ಮಹಾವಿದ್ಯಾಲಯದ 6ನೇ ತರಗತಿ ಕೇಂದ್ರೀಯ ಪ್ರವೇಶ ಪರೀಕ್ಷೆಯನ್ನು ಶಿಕ್ಷಣ ಇಲಾಖೆ ನಡೆಸಿದೆ. 27 ವರ್ಷಗಳಿಂದಲೂ ಕೇಂದ್ರ ಸರ್ಕಾರದ ನಿಯಮದಂತೆ ಪರೀಕ್ಷೆ ನಡೆಯುತಿತ್ತು. ಆದರೆ, ಕೇಂದ್ರ ಸರ್ಕಾರದ ಆದೇಶವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸುತ್ತಾರೆ ಮುಷ್ಕರ ನಿರತರು.
ಶಾಸಕರಿಗೆ ಮತನೀಡಬೇಡಿ: ನಯೀಮ್
ಕುಷ್ಟಗಿ: ರಾಜ್ಯದ 13 ಜಿಲ್ಲೆಗಳ ದಾಳಿಂಬೆ ಬೆಳೆಗಾರರು ಸಂಕಷ್ಟದಲ್ಲಿದರೂ ರಾಜ್ಯ ಸರ್ಕಾರ ದಾಳಿಂಬೆ ಬೆಳೆಗಾರರ ನೆರವಿಗೆ ಬರುತ್ತಿಲ್ಲ. ಹೀಗಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ತಮ್ಮ ಕ್ಷೇತ್ರದ ಶಾಸಕರಿಗೆ ಮತ ನೀಡದಂತೆ ರಾಜ್ಯ ದಾಳಿಂಬೆ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಅಬ್ದುಲ್ ನಯೀಮ್ ಆರ್. ಮನವಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ 4-5 ವರ್ಷಗಳಿಂದ ಹವಾಮಾನ ವೈಫಲ್ಯದಿಂದ ದುಂಡಾಣು ಅಂಗಮಾರಿ ರೋಗಕ್ಕೆ ಸಿಲುಕಿ ರಾಜ್ಯದ 13187 ಹೆಕ್ಟೇರ್ ಪ್ರದೇಶದ ಬೆಳೆ ಹಾಳಾಗಿದೆ. ದಾಳಿಂಬೆ ಬೆಳೆಗಾರರು ರಾಜ್ಯ ಸರ್ಕಾರಕ್ಕೆ ಪದೇಪದೆ ಸಾಲ ಮನ್ನಾ ಮಾಡುವಂತೆ ಮನವಿ, ಪ್ರತಿಭಟನೆ, ಧರಣಿ ಮಾಡಿದರೂ ಪ್ರಯೋಜನೆವಾಗಿಲ್ಲ ಎಂದು ಆರೋಪಿಸಿದ್ದಾರೆ.
ಇಂದು ಜಿಪಂ ಕೆಡಿಪಿ ಸಭೆ
ಕೊಪ್ಪಳ: ಜಿಪಂ ಕೆಡಿಪಿ ಪ್ರಗತಿ ಪರಿಶೀಲನೆ ಸಭೆ ಫೆ. 11ರ ಬೆಳಗ್ಗೆ 11ಕ್ಕೆ ಜಿಪಂ ಸಭಾಂಗಣದಲ್ಲಿ ನಡೆಯಲಿದೆ. ಜಿಪಂ ಅಧ್ಯಕ್ಷ ಕೆ. ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸುತ್ತಾರೆಂದು ಸಿಇಓ ಡಿ.ಕೆ. ರವಿ ತಿಳಿಸಿದ್ದಾರೆ.
ಇಂದು ರೈತರಿಗೆ ತರಬೇತಿ
ಕೊಪ್ಪಳ: ಕೃಷಿ ಇಲಾಖೆಯು ಸುರಕ್ಷಿತ ಕೀಟನಾಶಕಗಳ ಬಳಕೆ ಕುರಿತಂತೆ ಫೆ. 11ರಂದು ತಾಲೂಕಿನ ನಿಲೋಗಿಪುರದಲ್ಲಿ ರೈತರಿಗೆ ತರಬೇತಿ ಹಮ್ಮಿಕೊಂಡಿದೆ. ಸುರಕ್ಷಿತ ಕೀಟನಾಶಕಗಳ ಬಳಕೆ ಬಗ್ಗೆ ನಿಲೋಗಿಪುರದ ರಾಮಪ್ಪ ನಿಂಗಾಪುರ ಅವರ ಜಮೀನಿನಲ್ಲಿ ತರಬೇತಿಯನ್ನು ಆಯೋಜಿಸಿದ್ದು, ರೈತರು ತರಬೇತಿಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಸಹಾಯಕಕೃಷಿ ನಿರ್ದೇಶಕಿ ಬಿ. ಮಂಜುಳಾ ತಿಳಿಸಿದ್ದಾರೆ.
19ಕ್ಕೆ ಸಲಹಾ ಸಮಿತಿ ಸಭೆ
ಕೊಪ್ಪಳ: ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದ ಹನ್ನೆರಡನೆ ವೈಜ್ಞಾನಿಕ ಸಲಹಾ ಸಮಿತಿ ಸಭೆ ಫೆ. 19ರಂದು ಬೆಳಗ್ಗೆ 10.30ಕ್ಕೆ ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಲಿದೆ. ಸಭೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಕಳೆದ 6 ತಿಂಗಳ ಪ್ರಗತಿ, ಜಿಲ್ಲೆಯ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳು, ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕರು ತಿಳಿಸಿದ್ದಾರೆ.