ರು. 150 ಕೋಟಿ ನೀಡಲು ಸಿಎಂಗೆ ಮನವಿ: ನಾಗೇಂದ್ರ

Updated on: 

ಕೊಪ್ಪಳ: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮಕ್ಕೆ ಕನಿಷ್ಟ ರು. 150 ಕೋಟಿ ನೀಡುವಂತೆ ಈಗಾಗಲೇ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಮನವಿ ಮಾಡಿರುವುದಾಗಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ. ನಾಗೇಂದ್ರಪ್ಪ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2007-08ರಿಂದ 2011-12ನೇ ಆಯವ್ಯಯ ವಿವರ ನೀಡಿದರು. ಕಳೆದ 3 ವರ್ಷಗಳಲ್ಲಿ ಪರಿಶಿಷ್ಟ ಪಂಗಡದ 60354 ಫಲಾನುಭವಿಗಳಿಗೆ ರು. 492.52 ಕೋಟಿ ಸಾಲ ಸೌಲಭ್ಯ ಒದಗಿಸಲಾಗಿದೆ ಎಂದರು. ಗಂಗಾಕಲ್ಯಾಣ ಯೋಜನೆಯಡಿ 25169 ಕೊಳವೆ ಬಾವಿಗಳನ್ನು ಕೊರೆದು ರು. 334.66 ಕೋಟಿ ವೆಚ್ಚ ಮಾಡಲಾಗಿದೆ. ಜೊತೆಗೆ 17654 ಕೊಳವೆಬಾವಿಗಳನ್ನು ವಿದ್ಯುದ್ದೀಕರಣಗೊಳಿಸಲಾಗಿದೆ. ಈಚೆಗೆ ನಡೆದ ಬೋರ್ಡ್ ಮೀಟಿಂಗ್‌ನಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮವನ್ನು ರಚಿಸುವ ಕುರಿತು ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಆಯೋಗವನ್ನು ಪ್ರತ್ಯೇಕಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ರು. 1 ಎಕರೆ ಜಮೀನು ಹೊಂದಿದವರೂ ಗಂಗಾಕಲ್ಯಾಣ ಯೋಜನೆಯ ಫಲಾನುಭವಿಗಳಾಗುವ ಕುರಿತು ನಿರ್ಧರಿಸಲಾಗಿದೆ. ಹೈನುಗಾರಿಕೆ ಸಬ್ಸಿಡಿಯನ್ನು ರು. 50 ಸಾವಿರಕ್ಕೆ ಹೆಚ್ಚಿಸಲಾಗಿದೆ. ಹಸು ಖರೀದಿಗೆ ಇಲ್ಲಿವರೆಗೆ ರು. 25 ಸಾವಿರ ನೀಡುತ್ತಿದ್ದ ಸಾಲ ಯೋಜನೆಯನ್ನು ರು. 1 ಲಕ್ಷಕ್ಕೆ ಏರಿಸಲಾಗಿದೆ. 16 ಜಿಲ್ಲೆಗಳಲ್ಲಿ ಇರುವಂತೆ ಎಲ್ಲ ಜಿಲ್ಲೆಗಳಲ್ಲೂ ನಿಗಮದ ಪ್ರತ್ಯೇಕ ಕಚೇರಿ ಸ್ಥಾಪಿಸುವಂತೆ ಸರ್ಕಾರಕ್ಕೆ ಕೋರಲಾಗಿದೆ ಎಂದರು.ಈಗಿರುವ ನಿಗಮದ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಶೀಘ್ರವೇ 178 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಈ ಕುರಿತು ಬಜೆಟ್ ನಂತರ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಅಧಿಸೂಚನೆ ಹೊರಬೀಳಲಿದೆ ಎಂದರು. ಆರ್.ಸುಂದರ್, ಚೌಡ್ಕಿ ಹನುಮಂತಪ್ಪ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com