ಕುಷ್ಟಗಿ: ಕೃಷ್ಣಾ ಬಿ ಸ್ಕೀಂ ಯೋಜನೆಗೆ ಸಂಬಂಧಿಸಿದಂತೆ ಹಾಲಿ ಶಾಸಕರಾದ ಅಮರೇಗೌಡ ಭಯ್ಯಾಪುರ ಹಾಗೂ ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ, ಕೆ.ಶರಣಪ್ಪ ತಮ್ಮ ಮುಂದಿನ ಚುನಾವಣಾ ಲಾಭಕ್ಕಾಗಿ ಕೃಷ್ಣಾ ಬಿ ಸ್ಕೀಂ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಅಮರೇಗೌಡ ಪಾಟೀಲ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಗಾಗಿ ಹಲವಾರು ದಿನಗಳಿಂದ ಹೋರಾಟ ನಡೆಯುತ್ತಲೇ ಇದೆ. ಆದರೆ, ಯೋಜನೆಗೆ ಚಾಲನೆ ದೊರೆಯುತ್ತಿದಂತೆ ರಾಜಕೀಯ ಲಾಭಕ್ಕಾಗಿ ಕೆಲವರು ಪತ್ರಿಕಾ ಹೇಳಿಕೆಗಳ ಮೂಲಕ ಜನಸಾಮಾನ್ಯರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಯೋಜನೆಯ ಕುರಿತು ಜನತೆಗೆ ಸಂಪೂರ್ಣ ಮಾಹಿತಿ ನೀಡುತ್ತಿಲ್ಲ ಮತ್ತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಫಕೀರಪ್ಪ ಚಳಗೇರಿ, ಸುರೇಶ ಕುಂಟುನಗೌಡ, ತಾಪಂ ಸದಸ್ಯ ಪರಶುರಾಮಪ್ಪ ನಂದಿಹಾಳ, ಹರೀಶ ಇತರರು ಇದ್ದರು.