ಕಮಲದಿಂದ ಕೊಪ್ಪಳ ಕನಸು ನನಸು

Updated on: 

ಯಲಬುರ್ಗಾ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ರೈತಪರವಾದ ಯೋಜನೆಗಳನ್ನು ಜಾರಿಗೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಕೊಪ್ಪಳ ಜಿಲ್ಲೆಯ ಬಹುದಿನಗಳ ಕನಸು ಈಗ ನನಸಾಗುವ ಕಾಲ ಸನ್ನಿಹಿತವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್ ಹೇಳಿದರು.
ಮಂಗಳವಾರ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಕೊಪ್ಪಳ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಜ. 23ರಂದು ರಾಜ್ಯದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕುಷ್ಟಗಿ ತಾಲೂಕಿನ ಕಲಾಲಬಂಡಿ ಗ್ರಾಮದಲ್ಲಿ ಭೂಮಿ ಪೂಜೆ ನೇರವೇರಿಸಲಿದ್ದಾರೆ. ಬಳಿಕ ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದಲ್ಲಿ ಸಂಜೆ 4ಕ್ಕೆ ಸಾರ್ವಜನಿಕ ಸಮಾರಂಭ ಸಭೆ ಉದ್ಘಾಟಿಸಿ ಮಾತನಾಡಲಿದ್ದಾರೆ.
ಕಾಂಗ್ರೆಸ್ 50 ವರ್ಷಗಳ ಕಾಲ ರಾಜ್ಯವನ್ನು ಆಳಿದರೂ ಈ ಭಾಗದಲ್ಲಿ ನೀರಾವರಿ ಯೋಜನೆಯನ್ನು ಜಾರಿಗೊಳಿಸುವ ಚಿಂತನೆಯನ್ನು ಎಂದೂ ಮಾಡಲಿಲ್ಲ. ಆದರೆ, ಚುನಾವಣೆ ಸಮೀಪಿಸುತ್ತಿದ್ದಂತೆ ಕೃಷ್ಣಾ ಬಿ ಸ್ಕೀಂ ಯೋಜನೆಯ ಕಾಳಜಿ ಇಟ್ಟುಕೊಂಡು ಕಾಂಗ್ರೆಸ್ ಪಾದಯಾತ್ರೆ ಮಾಡುವ ಮೂಲಕ ಅಭಿವೃದ್ಧಿ ಮಂತ್ರ ಪಠಿಸುತ್ತಿರುವುದು ಗಮನಿಸಿದರೆ ಅಧಿಕಾರದ ದಾಹ ಅವರನ್ನು ಕಾಡುತ್ತಿದೆ. ಕಾಂಗ್ರೆಸ್‌ನವರ ಕಾಳಜಿ ಬಗ್ಗೆ ಈ ಭಾಗದ ಜನರಿಗೆ ಚೆನ್ನಾಗಿ ಗೊತ್ತಿದೆ. ಅಧಿಕಾರದಲ್ಲಿದ್ದಾಗ ಕೆಲಸ ಮಾಡದವರು ಈಗ ಅಧಿಕಾರ ಕಳಕೊಂಡ ಮೇಲೆ ನೀರಾವರಿ ಯೋಜನೆಯ ಬಗ್ಗೆ ನೆನಪಾಯಿತೆ? ಇಂಥ ಹೀನಾಯ ಸ್ಥಿತಿ ಕಾಂಗ್ರೆಸ್ ನಾಯಕರಿಗೆ ಬರಬಾರದಿತ್ತು ಎಂದು ಲೇವಡಿ ಮಾಡಿದರು.
ನೀರಾವರಿಗೆ ಆದ್ಯತೆ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರು. 17 ಸಾವಿರ ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿದೆ. ಇದರಿಂದ ಕೊಪ್ಪಳ ಭಾಗದ 48 ಸಾವಿರ ಹೆಕ್ಟೇರ್ ನೀರಾವರಿಯಾಗಲಿದೆ. ಗುಲಬರ್ಗಾದಲ್ಲಿ ನಡೆದ ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಣಯದಂತೆ ಕೃಷ್ಣಾ ಕೊಳ್ಳಕ್ಕೆ ಸಂಬಂಧಿಸಿದ 9 ಯೋಜನೆಗಳ ಪೈಕಿ ಕೊಪ್ಪಳ ಜಿಲ್ಲಾ ಏತ ನೀರಾವರಿ ಯೋಜನೆ ಸೇರಿ 7 ಯೋಜನೆಗಳು ಜಾರಿಗೆ ಅಣಿಯಾಗಲಿವೆ.
ನೀರಾವರಿ ಯೋಜನೆಗೆ 1ನೇ ಹಂತವಾಗಿ ರು. 7.20 ಕೋಟಿ, 2ನೇ ಹಂತವಾಗಿ ರು. 400 ಕೋಟಿಯಲ್ಲಿ ಕಾಮಗಾರಿ ಕೈಗೊಳ್ಳುವುದರ ಜೊತೆಗೆ ಈ ಸರ್ಕಾರ ನೀರಾವರಿ ಯೋಜನೆಗೆ ಹೆಚ್ಚು ಆದ್ಯತೆ ನೀಡಿದೆ ಎಂದರು.
ಸಹಕಾರ ಅಗತ್ಯ: ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಇದರ ಸಮರ್ಪಕ ಅನುಷ್ಠಾನಕ್ಕೆ ಎಲ್ಲರೂ ಪಕ್ಷ ಭೇದ ಮರೆತು ಸಹಕರಿಸಿ ಈ ಭಾಗದ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು ಎಂದರು.
ಕಲಾಲಬಂಡಿ ಗ್ರಾಮದಲ್ಲಿ ಪೂಜೆ ನೇರವೇರಿಸಿದ ನಂತರ ತಾಲೂಕಿನ ಬೇವೂರು ಗ್ರಾಮದಲ್ಲಿ  ಅಂದು ನಡೆಯುವ ಸಮಾರಂಭದಲ್ಲಿ ಜಲಸಂಪನ್ಮೂಲ ಸಚಿವರಾದ ಬಸವರಾಜ ಬೊಮ್ಮಾಯಿ, ಶಾಸಕ ಈಶಣ್ಣ ಗುಳಗಣ್ಣವರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಸಣ್ಣ ನೀರಾವರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ, ಕೊಪ್ಪಳ ಲೋಕಸಭಾ ಸದಸ್ಯ ಶಿವರಾಮಗೌಡ, ಮಾಜಿ ಸಚಿವ ಲಕ್ಷ್ಮಣ ಸವದಿ ಹಾಗೂ ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು, ಜಿಪಂ, ತಾಪಂ, ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. ಇದಕ್ಕಾಗಿ ಬೃಹತ್ ವೇದಿಕೆ ಸಿದ್ಧವಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com