ರಾಮಮೂರ್ತಿ ನವಲಿ
ಕನ್ನಡಪ್ರಭ ವಾರ್ತೆ, ಗಂಗಾವತಿ, ಜ. 23
ಕಾಯಕಯೋಗಿ, ಪವಾಡ ಪುರುಷ ಶ್ರೀ ಚನ್ನಬಸವ ಸ್ವಾಮಿ ತಾತನ ಜಾತ್ರೆ ನಿಮಿತ್ತ ನಗರದ ಶ್ರೀ ಚನ್ನಬಸವಸ್ವಾಮಿ ರಥೋತ್ಸವ ಜ. 24ರಂದು ವಿಜೃಂಭಣೆಯಿಂದ ಜರುಗಲಿದೆ. ಚನ್ನಬಸವ ಸ್ವಾಮಿ ಮೂಲತಃ ಬಾಗಲಕೋಟೆ ಜಿಲ್ಲೆಯ ಶಿರೂರು ಗ್ರಾಮದಲ್ಲಿ ಚೌಕಿಮಠ ಮರುಳ ಸಿದ್ಧಯ್ಯ ಮತ್ತು ಗೌರಮ್ಮನವರ ಗರ್ಭದಲ್ಲಿ ಜನಿಸಿದರು.
ಸುಸಂಸ್ಕೃತ ವ್ಯಕ್ತಿತ್ವದ ಮರುಳ ಸಿದ್ಧಯ್ಯನವರ ಮಾರ್ಗದರ್ಶನದಲ್ಲಿ ದೈವಿ ಭಕ್ತಿಯನ್ನು ತಾತನವರು ಕಂಡುಕೊಂಡರು. ತಂದೆ ಲಿಂಗೈಕ್ಯರಾದ ನಂತರ ಕಾಲ ಕ್ರಮೇಣ ಚನ್ನಬಸವರ ತಾಯಿಯವರ ಕುಟುಂಬದವರು ಒಂದಿಲ್ಲ ಒಂದು ತೊಂದರೆಯಿಂದ ಮೃತಪಟ್ಟರು. ಇದರಿಂದ ಚನ್ನಬಸವ ಸ್ವಾಮೀಜಿ ತಬ್ಬಲಿಯಾದರು.
ನಂತರ ಹುಚ್ಚೇಶ್ವರ ಸ್ವಾಮೀಜಿ ದೀಕ್ಷಾ ಸಂಸ್ಕಾರ ನೀಡಿ ತಮ್ಮ ಮಠದಲ್ಲಿ ಯೋಗಭ್ಯಾಸ, ಧ್ಯಾನ, ತತ್ವೋಪದೇಶ, ಪುರಾಣ, ಪುಣ್ಯ ಕಥೆಗಳನ್ನು ಚನ್ನಬಸವರಿಗೆ ತಿಳಿಹೇಳುತ್ತಾ ಜ್ಞಾನಾರ್ಜನೆ ನೀಡಿದರು. ಚನ್ನಬಸವ ಸ್ವಾಮೀಜಿ ಸರಳ ವ್ಯಕ್ತಿತ್ವ, ಉದಾತ್ತ ಚಿಂತನೆಯನ್ನು ಮೈಗೂಡಿಸಿಕೊಂಡರು. ಮುಂದೆ ಮಹಾಲಿಂಗ ಸ್ವಾಮಿಗಳ ಗುರು ಪೀಠವಾದ ಗಂಗಾವತಿಯ ಕಲ್ಲು ಮಠದ ಕೊಟ್ಟೂರೇಶ್ವರ ಸ್ವಾಮೀಜಿಗಳ ಮಾರ್ಗದರ್ಶನದಂತೆ ಕಲ್ಲು ಮಠದ ಉತ್ತರಾಧಿಕಾರಿಯಾದರು. ಸ್ವಾಮೀಜಿ ನಿತ್ಯ ವಿದ್ಯಾರ್ಥಿಗಳಿಗೆ ಶಿಕ್ಷಣ, ದಾಸೋಹ, ಪೂಜೆ-ಪುನಸ್ಕಾರಗಳ ಬಗ್ಗೆ ತಿಳಿಹೇಳುತ್ತಾ ಮಾನವೀಯ ಮೌಲ್ಯಗಳನ್ನು ಬೆಳೆಸಿದರು.
ನಗರದ ಹೊರ ಭಾಗದಲ್ಲಿರುವ ದುರುಗಮ್ಮನ ಹಳ್ಳದ ದಂಡೆಯ ಮೇಲೆ ಚಿಕ್ಕ ಬಸವಣ್ಣ ಮೂರ್ತಿ ಇದ್ದ ಸ್ಥಳದಲ್ಲಿ ನೆಲೆಸಿದರು. ಅಂದಿನಿಂದ ಮಠದಲ್ಲಿ ಸದಾ ದಾಸೋಹ, ಪುರಾಣ, ಭಜನೆಗಳು ನಡೆಯುತ್ತಿವೆ. ಸ್ವಾಮೀಜಿಗಳು ಒಂದೇ ಜಾತಿಗೆ ಸೀಮಿತವಾಗಿರದೇ ಸರ್ವ ಜಾತಿ-ಜನಾಂಗದವರನ್ನು ಅಪ್ಪಿಕೊಳ್ಳುವವರಾಗಿದ್ದರು. ತಾತನವರು 85ನೇ ವಯಸ್ಸಿನಲ್ಲಿ ಪುಷ್ಯ ಶುದ್ಧ ತ್ರಯೋದಶಿಯಂದು ಸಂಜೆ 6ಕ್ಕೆ ಲಿಂಗೈಕ್ಯರಾದರು.
ಅಂದಿನಿಂದ ಪ್ರತಿವರ್ಷ ನಗರದಲ್ಲಿ ತಾತನ ಜಾತ್ರೆ ಎಂದೇ ಕರೆಯಲ್ಪಡುತ್ತಿದ್ದು, 3 ದಿನಗಳ ಕಾಲ ಸಂಭ್ರದಿಂದ ಜರುಗುತ್ತದೆ.
ನಾಮಕರಣ: ಆರಾಧ್ಯ ದೈವ, ಕಾಯಕ ಯೋಗಿ ಶ್ರೀ ಚನ್ನಬಸವ ಸ್ವಾಮಿ ತಾತ ಎನ್ನುವ ಹೆಸರು ಇಲ್ಲಿ ಪ್ರಚಲಿತ, ಸ್ವಾಮೀಜಿಗಳ ಹೆಸರಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಪಟ್ಟಣ ಸಹಕಾರಿ ಬ್ಯಾಂಕ್, ಹಾಗೂ ಶಿಕ್ಷಣ ಸಂಸ್ಥೆಗಳಲ್ಲದೇ ಗಂಜಿನಲ್ಲಿ ಇರುವ ವಾಣಿಜ್ಯೋದ್ಯಮಿಗಳು ಸ್ವಾಮೀಜಿಗಳ ಹೆಸರಿನಲ್ಲಿ ಅಂಗಡಿಗಳನ್ನು ಪ್ರಾರಂಭಿಸುತ್ತಿರುವುದು ವಿಶೇಷವಾಗಿದೆ.
ಇಂದು ರಥೋತ್ಸವ: ಜ. 24ರಂದು ಶ್ರೀ ಚನ್ನಬಸವ ಸ್ವಾಮೀಜಿಗಳ ಮಹಾರಥೋತ್ಸವ ಶ್ರದ್ಧಾ-ಭಕ್ತಿಯಿಂದ ಜರುಗಲಿದೆ.
ಕಳೆದ ಮೂರು ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪುರಾಣ, ಪ್ರವಚನ, ಉತ್ಸವಗಳು ಜರುಗುತ್ತಿವೆ. ಪ್ರಸುತ್ತ ಮುತ್ತಲಿನ ಗ್ರಾಮಗಳ ಭಕ್ತರು, ಕಾಲ್ನಡಿಗೆಯಲ್ಲಿ ದಾಸೊಹಕ್ಕಾಗಿ ರೊಟ್ಟಿಗಳನ್ನು ಮಠಕ್ಕೆ ತಂದು ಸಮರ್ಪಿಸುತ್ತಾರೆ. ಈ ಜಾತ್ರೆಯಲ್ಲಿ ಆಂಧ್ರ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಭಕ್ತರು ಭಾಗವಹಿಸಿ ಸ್ವಾಮಿಗಳು ಕೃಪೆಗೆ ಪಾತ್ರರಾಗುತ್ತಾರೆ.