ಕನ್ನಡಪ್ರಭ ವಾರ್ತೆ, ಕೊಪ್ಪಳ, ಜ. 24
ಕೃಷಿ ಉತ್ಪನ್ನ ಮಾರುಕಟ್ಟೆಯ ನೂತನ ಅಧ್ಯಕ್ಷರಾಗಿ ಡಿ.ಮಲ್ಲಪ್ಪ ಹಾಗೂ ಉಪಾಧ್ಯಕ್ಷರಾಗಿ ನೀಲಪ್ಪ ಸಕ್ರೆಪ್ಪ ಮೇಟಿ ಗುರುವಾರ ಆಯ್ಕೆಯಾದರು.
ಎಪಿಎಂಸಿಯ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಬಿಜೆಪಿಯ ಜಿಲ್ಲಾ ನಾಯಕರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಪಿಎಂಸಿ ಅಧ್ಯಕ್ಷ ಡಿ.ಮಲ್ಲಪ್ಪ, ನನ್ನ ಕಾಲಾವಧಿಯಲ್ಲಿ ವರ್ತಕರ ಹಾಗೂ ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ. ಅವರಿಬ್ಬರು ಎರಡು ಕಣ್ಣುಗಳಿದ್ದಂತೆ. ಯಾರಿಗೂ ನೋವಾಗದಂತೆ ಆಡಳಿತ ನಡೆಸುತ್ತೇನೆ. ನಗರ ತರಕಾರಿ ಮಾರುಕಟ್ಟೆ ಸ್ಥಳಾಂತರ ಕುರಿತು ಗಮನ ಹರಿಸುತ್ತೇನೆ. ರೈತರ ಬೆಳೆಗಳಿಗೆ ಸಮರ್ಪಕ ಬೆಲೆ ನೀಡುವ ಮೂಲಕ ಅವರ ಹಿತ ಕಾಯುತ್ತೇನೆ ಎಂದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಗೌರವಿಸಿದ ಬಿಜೆಪಿ ಮುಖಂಡ ಹನುಮಂತಪ್ಪ ಅಂಗಡಿ, ಕೊಪ್ಪಳ ಎಪಿಎಂಸಿ ಇಡೀ ರಾಜ್ಯದಲ್ಲಿಯೇ ಮಾದರಿ ಕೃಷಿ ಉತ್ಪನ್ನ ಮಾರುಕಟ್ಟೆಯಾಗುವ ನಿಟ್ಟಿನಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರು ಕೆಲಸ ಮಾಡಲಿ ಎಂದು ಹಾರೈಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ, ಭೂ ನ್ಯಾಯ ಮಂಡಳಿ ಸದಸ್ಯ ಹಾಲೇಶ್ ಕಂದಾರಿ ಮತ್ತಿತರರು ಉಪಸ್ಥಿತರಿದ್ದರು.