ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ, ಕೊಪ್ಪಳ, ಜ. 24
ರಾಜ್ಯದಲ್ಲಿಯೇ ಪೈಲೆಟ್ ಯೋಜನೆಯಾಗಿ ಜಾರಿ ಮಾಡಲು ಮುಂದಾಗಿದ್ದ ಜಿ ಪ್ಲಸ್ 1 ಮನೆ ನಿರ್ಮಾಣವನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಜಿ. ಪ್ಲಸ್ 1 ಮನೆ ಪಡೆಯಲು ಬಹುತೇಕರು ಹಿಂದೇಟು ಹಾಕಿದ್ದರಿಂದ ಯೋಜನೆಯನ್ನೇ ಕೈಬಿಟ್ಟು, ಪುನಃ ಈಗ ಕೇವಲ ಜಿ ಮನೆಗಳನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿದೆ. ಇದರಿಂದ ಜನ ಮತ್ತೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.
ಕೊಪ್ಪಳ ನಗರದ ಹಿರೇಸಿಂದೋಗಿ ರಸ್ತೆಯಲ್ಲಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ 4000 ಮನೆಗಳನ್ನು ನಿರ್ಮಿಸಲು ಸರ್ಕಾರ ಒಪ್ಪಿಗೆ ನೀಡಿತ್ತು. ಅದಕ್ಕೆ ಅಗತ್ಯ ರು. 400 ಕೋಟಿ ಬಿಡುಗಡೆಗೆ ಆದೇಶವನ್ನೂ ಮಾಡಲಾಗಿತ್ತು. ಈ ಯೋಜನೆಯಲ್ಲಿ ಪೈಲೆಟ್ ಯೋಜನೆಯಡಿ ಪ್ರತಿ ಮನೆಯ ಮೇಲೆ ಮತ್ತೊಂದು ಮಹಡಿ ಮನೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು. ಈ ಮೂಲಕ ನಿವೇಶನ ಕೊರತೆ ನೀಗಿಸಲು ಸರ್ಕಾರ ಮುಂದಾಗಿತ್ತು.
ಆದರೆ, ಜಿ ಪ್ಲಸ್ 1 ಮನೆ ಪಡೆಯಲು ಫಲಾನುಭವಿಗಳು ಮುಂದೆ ಬರಲಿಲ್ಲ. ನಮ್ಮ ಮನೆಯ ಮೇಲೆ ಮತ್ತೊಬ್ಬರು ಮನೆ ಮಾಡುವುದಾದರೆ ಅದರಿಂದ ನಮಗೆ ತೊಂದರೆಯಾಗುತ್ತದೆ. ಹೀಗಾಗಿ, ಮನೆ ಬೇಡ ಎಂದು ಅದೆಷ್ಟೋ ಜನರು ಅರ್ಜಿ ಹಿಂದೆ ಪಡೆದರು. ಹೀಗಾಗಿ, ನಾಲ್ಕು ಸಾವಿರ ಮನೆಗಳಿಗೆ ಶೇ. 10ರಷ್ಚೂ ಅರ್ಜಿಗಳು ಬರದೇ ಇರುವುದರಿಂದ ಅನಿವಾರ್ಯವಾಗಿ ಯೋಜನೆಯನ್ನೇ ಬದಲಾಯಿಸಲಾಗಿದೆ.
ಆದೇಶ: ಈ ಕುರಿತು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕರು ಜ. 21ರಂದು ಸುತ್ತೋಲೆ ಹೊರಡಿಸಿ, ಜಿ ಪ್ಲಸ್ 1 ಮನೆ ನಿರ್ಮಾಣವನ್ನು ಕೈಬಿಡಲಾಗಿದೆ. ಈಗ ನೆಲಮಹಡಿ ಮಾತ್ರ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಈಗ ಮೊದಲ ಹಂತವಾಗಿ 2 ಸಾವಿರ ಮನೆ ನಿರ್ಮಾಣ ಮಾಡಲಾಗುವುದು. ಇದಾದ ನಂತರ ಮತ್ತೆ 2 ಸಾವಿರ ಮನೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಸಹಾಯಧನ ಕಡಿತ: ಜಿ ಪ್ಲಸ್ 1 ಮನೆ ನಿರ್ಮಾಣಕ್ಕೆ ಸರ್ಕಾರ ರು. 1 ಲಕ್ಷ ಸಹಾಯಧನ ನೀಡಲು ಮುಂದಾಗಿತ್ತು. ಆದರೆ, ಈಗ ಈ ಯೋಜನೆಯನ್ನು ಕೈಬಿಟ್ಟಿರುವುದರಿಂದ ಹಿಂದಿನಂತೆಯೇ ರು. 75 ಸಾವಿರ ಸಹಾಯಧನ ನೀಡಲಾಗುತ್ತದೆ. ಹೀಗಾಗಿ, ರು. 2 ಲಕ್ಷ ಮೌಲ್ಯದ ಮನೆಗೆ ರು. 1 ಲಕ್ಷ ಸಾಲ ಹಾಗೂ ರು. 25 ಸಾವಿರ ಫಲಾನುಭವಿಗಳು ಪಾವತಿ ಮಾಡಬೇಕು.