ಕೊಪ್ಪಳ: ಹೆಣ್ಣು ಭ್ರೂಣ ಹತ್ಯೆಯ ಕುರಿತ ಅಪ್ಪಾ ನನ್ನ ಕೊಲ್ಲಿಸಬೇಡಪ್ಪಾ...ಎಂಬ ಲೇಖನಕ್ಕೆ ಪ್ರತಿಷ್ಠಿತ ಲಾಡ್ಲಿ ಮೀಡಿಯಾ ಪ್ರಶಸ್ತಿ ಪಡೆದಿರುವ ಕೊಪ್ಪಳದ ಪತ್ರಕರ್ತ ಹುಸೇನಪಾಷಾ ಅವರ ಸಂದರ್ಶನ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ತಳಕಲ್ ಗ್ರಾಮದ ಕಸ್ತೂರಬಾ ಗಾಂಧಿ ಶಾಲೆಯ ದೈಹಿಕ ಶಿಕ್ಷಕಿ ಸುಜಾತಾ ಅವರ ಅನುಭವಗಳು, ಹೊಸಪೇಟೆ ಆಕಾಶವಾಣಿ ಕೇಂದ್ರದಿಂದ ಫೆ. 1ರಂದು ಮಧ್ಯಾಹ್ನ 12.30ಕ್ಕೆ ಭಿತ್ತರಗೊಳ್ಳಲಿದೆ. ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆಯವರು ಪ್ರಾಯೋಜಿಸಿರುವ ನಗುಕಂದ ಕಾರ್ಯಕ್ರಮದಲ್ಲಿ ಈ ಸಂದರ್ಶನಗಳು ಪ್ರಸಾರಗೊಳ್ಳಲಿವೆ. ಆಸಕ್ತರು ಎಫ್.ಎಂ. ಬ್ಯಾಂಡ್ ಕಂಪನಾಂಕ 100.5 ಮೆಗಾ ಹರ್ಟ್ಸ್ಗಳಲ್ಲಿ ಕಾರ್ಯಕ್ರಮ ಕೇಳಬಹುದು.
ಇಂದು ಬನ್ನಿಕೊಪ್ಪದಲ್ಲಿ ದತ್ತಿ ಉಪನ್ಯಾಸ
ಯಲಬುರ್ಗಾ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಫೆ. 1ರಂದು ಬೆಳಗ್ಗೆ 10.30ಕ್ಕೆ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬನ್ನಿಕೊಪ್ಪದ ಸ್ವಾತಂತ್ರ್ಯ ಯೋಧ ದಿ. ಶಂಕ್ರಪ್ಪ ಸಿದ್ಧಪ್ಪ ಹಾಗೂ ಮನ್ನಾಪುರದ ದಿ. ಶಂಕ್ರಪ್ಪ ಸಿದ್ಧಪ್ಪ ಜಮಖಂಡಿ ಅವರ ಸ್ಮರಣಾರ್ಥ ದತ್ತಿನಿಧಿ ಉಪನ್ಯಾಸ ಜರುಗಲಿದೆ. ಜಿಪಂ ಮಾಜಿ ಉಪಾಧ್ಯಕ್ಷ ಯಂಕಣ್ಣ ಯರಾಸಿ ಉದ್ಘಾಟಿಸಲಿದ್ದು, ಗ್ರಾಪಂ ಅಧ್ಯಕ್ಷ ಅಬ್ದುಲ್ ಸಾಬ ಸಭೆ ಅಧ್ಯಕ್ಷತೆ ವಹಿಸುವರು. ಫಕೀರಪ್ಪ ವಜ್ರಬಂಡಿ ಹಾಗೂ ದ್ಯಾಮಣ್ಣ ಜಮಖಂಡಿ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಜಿಪಂ ಸದಸ್ಯ ಉಮಾ ಎಸ್. ಮುತ್ತಾಳ, ತಾಪಂ ಸದಸ್ಯ ಪದ್ಮಾವತಿ ಮತ್ತಿತರರು ಭಾಗವಹಿಸಲಿದ್ದಾರೆ.
ಇಂದು ವಾರ್ಷಿಕೋತ್ಸವ
ಕುಷ್ಟಗಿ: ಸ್ಥಳೀಯ ವಿಜಯ ಚಂದ್ರಶೇಖರ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಾರ್ಷಿಕೋತ್ಸವ ಫೆ. 1ರಂದು ಸಂಜೆ 4.30ಕ್ಕೆ ಹಮ್ಮಿಕೊಳ್ಳಲಾಗಿದೆ. ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಕಾರ್ಯಕ್ರಮ ಉದ್ಘಾಟಿಸುವರು. ಮುದೇನೂರು ಮಠದ ಶಶಿಧರ ಸ್ವಾಮೀಜಿ, ಎಂ. ಗುಡದೂರು ನೀಲಕಂಠಯ್ಯ ತಾತನವರು ಸಾನ್ನಿಧ್ಯ ವಹಿಸುವರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿ.ವಿ. ಚಂದ್ರಶೇಖರ ಅಧ್ಯಕ್ಷತೆ ವಹಿಸುವರು ಎಂದು ಲಕ್ಷ್ಮೀದೇವಿ ಚಂದ್ರಶೇಖರ ಹಾಗೂ ಎಂ.ಕೆ. ಬಂಡಿಹಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.