-ಶಿವಕುಮಾರ ಕುಷ್ಟಗಿ
ನರೇಗಲ್ಲ: ರೋಣ ತಾಲೂಕಿನ ಹಾಲಕೆರೆ ಗ್ರಾಮದಲ್ಲಿ ಹಿರಿಯ ಅನ್ನದಾನ ಶ್ರೀಗಳ ಪುಣ್ಯಾರಾಧನೆ ಶತಮಾನೋತ್ಸವದ ಅಂಗವಾಗಿ ಆ. 4ರಂದು ಸಂಜೆ 4 ಗಂಟೆಗೆ ಕುಮಾರೇಶ್ವರ ಸೇವಾ ಸಮಿತಿ ನೇತೃತ್ವದಲ್ಲಿ ಡಾ.ಅಭಿನವ ಅನ್ನದಾನ ಶ್ರೀಗಳಿಗೆ ರಾಜ್ಯದ ಮೊದಲ ರಕ್ತದಾನ ತುಲಾಭಾರ ನೆರವೇರಲಿದೆ.
ಭಕ್ತರು ತಮ್ಮ ಪಾಲಿನ ದೇವರು ಎಂದು ನಂಬಿರುವವರಿಗೆ ಬೆಳ್ಳಿ-ಬಂಗಾರ ತುಲಾಭಾರ ಮಾಡುತ್ತಾರೆ. ಅದು ಮಠಕ್ಕೆ ಸಲ್ಲುತ್ತದೆ. ಮಠಗಳು ಇರುವುದೇ ಸಾರ್ವಜನಿಕರ ಒಳಿತಿಗಾಗಿ. ರಕ್ತದ ಕೊರತೆಯಿಂದ ಯಾರೂ ಸಾಯಬಾರದು ಎಂಬ ಸದುದ್ದೇಶದಿಂದ ಹಿರಿಯ ಶ್ರೀಗಳ ಪುಣ್ಯಾರಾಧನೆ ಶತಮಾನೋತ್ಸವದ ಅಂಗವಾಗಿ ಮಠದ ಭಕ್ತರು ರಕ್ತದ ಮೂಲಕ ಶ್ರೀಗಳಿಗೆ ತುಲಾಭಾರ ಮಾಡುತ್ತಿದ್ದಾರೆ.
ಹಾಲಕೆರೆ ಕುಮಾರೇಶ್ವರ ಸೇವಾ ಸಮಿತಿ, ಹಾಲಕೆರೆ ಅನ್ನದಾನ ಶ್ರೀಗಳ ಶಿಷ್ಯರ ಬಳಗ ಹಾಗೂ ಗ್ರಾಮಸ್ಥರ ಆಶ್ರಯದಲ್ಲಿ ರಕ್ತ ತುಲಾಭಾರ ಹಮ್ಮಿಕೊಂಡಿದ್ದು, ಗ್ರಾಮೀಣರಲ್ಲಿ ರಕ್ತದಾನದ ಕುರಿತು ಅರಿವು ಮೂಡಿಸಿ, ಪ್ರೇರೇಪಿಸುವುದೂ ಇದರ ಉದ್ದೇಶವಾಗಿದೆ.
250 ಯುನಿಟ್ ಗುರಿ
ಅಭಿನವ ಅನ್ನದಾನ ಶ್ರೀಗಳು 70 ಕೆಜಿ ಇದ್ದು, ಅವರ ತೂಕದಷ್ಟು ರಕ್ತವನ್ನು ತುಲಾಭಾರ ನೀಡಬೇಕಾದಲ್ಲಿ 250 ಯುನಿಟ್ (350 ಎಂಎಲ್) ರಕ್ತ ಬೇಕಾಗುತ್ತದೆ. ಮಠದ ಸಾವಿರಕ್ಕೂ ಹೆಚ್ಚು ಭಕ್ತರು ರಕ್ತದಾನಕ್ಕೆ ಹೆಸರು ನೋಂದಾಯಿಸಿದ್ದು, ಸೋಮವಾರ ಸಂಜೆ 4ಕ್ಕೆ ಗ್ರಾಮದ ಸಭಾಮಂಟಪದಲ್ಲಿ ರಕ್ತದ ಮೂಲಕ ತುಲಾಭಾರ ಕಾರ್ಯಕ್ರಮ ನಡೆಯಲಿದೆ.
Advertisement