ಕನ್ನಡಪ್ರಭ ವಾರ್ತೆ, ಕೊಪ್ಪಳ, ಜು. 1
ಪಾಟೀಲ ಚೀಲ ಹಾಕಿಕೊಂಡು ಶಾಲೆಗೆ ಹೋಗಬೇಕಾದ ಬಾಲಕಿ ಮನೆಯಲ್ಲಿ ಕಿತ್ತು ತಿನ್ನುವ ಬಡತನ ಮತ್ತು ಪಾಲಕರ ಮೌಢ್ಯದಿಂದ ಗಂಡನ ಮನೆಗೆ ಹೋಗಿದ್ದಳು. ಅಲ್ಲಿ ಪತಿರಾಯನ ಪೆದ್ದುತನದ ವಿರುದ್ಧ ಸಿಡಿದೆದ್ದು ಜೂ. 30ರಂದು ಮನೆಬಿಟ್ಟು ಬಂದಿದ್ದಾಳೆ. ಅಲ್ಲದೇ ಅವರಿವರ ಸಹಾಯದಿಂದ ಮಕ್ಕಳ ರಕ್ಷಣಾ ಘಟಕದ ಮೂಲಕ ಮಂಗಳವಾರ ಕೊಪ್ಪಳದ ನೆಮ್ಮದಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾಳೆ.
ಇದು ಯಾವುದೋ ಸಿನೆಮಾ ಕತೆಯಲ್ಲ. ಕೇವಲ 14 ವರ್ಷದ ಬಾಲಕಿಯ ಕರುಣುಜನಕ ಕತೆ. ಗಂಗಾವತಿ ತಾಲೂಕಿನ ಮಲಕನಮರಡಿ ಗ್ರಾಮದ ಈ ಬಾಲ ಪತ್ನಿ ಪೆದ್ದ ಗಂಡನಿಂದ ಪಾರಾಗಿ ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾಳೆ. ಅಲ್ಲದೆ ನನ್ನಂಥ ಗೋಳು ಯಾರಿಗೂ ಬರಬಾರದು ಎಂದು ಬಿನ್ನವಿಸಿಕೊಂಡಿದ್ದಾಳೆ.
ಕೊಪ್ಪಳ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಇನ್ನೂ ತಾಂಡವವಾಡುತ್ತಿದೆ ಎನ್ನುವುದಕ್ಕೆ ಇಂಥ ನಿದರ್ಶನಗಳು ಆಗಾಗ ನಡೆಯುತ್ತಲೆ ಇವೆ. ಮತ್ತೆರಡು ಅಂಥದ್ದೆ ಪ್ರಕರಣ ಬೆಳಕಿಗೆ ಬಂದಿರುವುದು ಜಿಲ್ಲಾಡಳಿತವನ್ನು ಅಣಕಿಸುವಂತೆ ಮಾಡಿದೆ. ಬಾಲ್ಯ ವಿವಾಹ ತಡೆಗಾಗಿ ಜಿಲ್ಲಾಡಳಿತ ಮತ್ತು ಯುನಿಸೆಫ್ ಪ್ರಯತ್ನ ಕೈಗೂಡುತ್ತಿಲ್ಲ ಎನ್ನುವುದು ಸಾಬೀತಾಗಿದೆ.
ಹಿನ್ನೆಲೆ: ಗಂಗಾವತಿ ತಾಲೂಕಿನ ಮಲನಕಗುಡಿ ಗ್ರಾಮದ ಮಂಜುಳಾ (ಹೆಸರು ಬದಲಾಯಿಸಲಾಗಿದೆ) ಓದಲು ಬಾರದ ಅನಕ್ಷರಸ್ಥೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದೆ. ಹೀಗಾಗಿ, ಪಾಲಕರೂ ಇರುವ ಮಗಳನ್ನು ಹೇಗಾದರೂ ಸರಿ, ಮದುವೆ ಮಾಡಿಕೊಟ್ಟು ಭಾರ ಇಳಿಸಿಕೊಂಡರಾಯಿತು ಎಂದು ಗ್ರಾಮದಲ್ಲಿನ ಯುವಕನೊಬ್ಬನಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಆತ ಅರೆ ಹುಚ್ಚನಿದ್ದು, ಸಂಸಾರದ ಗಂಧ, ಗಾಳಿಯೇ ಗೊತ್ತಿಲ್ಲ ಎಂದು ಹೇಳಲಾಗುತ್ತದೆ. ಇಂಥ ಗಂಡ ಮತ್ತು ಅವನ ಕುಟುಂಬದವರ ಕಾಟದಿಂದ ಬೇಸತ್ತ ಬಾಲೆ ತನ್ನ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ನಿರ್ಧರಿಸಿದ್ದಾಳೆ. ಟಿವಿಯಲ್ಲಿ ಬಾಲ್ಯ ವಿವಾಹ ತಡೆಯುವ ವರದಿಯೊಂದನ್ನು ನೋಡಿ ಪ್ರೇರೇಪಿತಳಾಗಿ ಗಂಡನ ಮನೆಯವರಿಂದ ತಪ್ಪಿಸಿಕೊಂಡು ಬಂದಿದ್ದಾಳೆ. ನಂತರ ಅವರಿವರ ನೆರವು ಪಡೆದು ಮಕ್ಕಳ ರಕ್ಷಣಾ ಘಟಕದವರನ್ನು ಭೇಟಿಯಾಗಿ ಕೊಪ್ಪಳದ ನೆಮ್ಮದಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾಳೆ.
ಸಮಸ್ಯೆ ಸುಳಿಯಿಂದ ಪಾರಾಗಿರುವ ಮಂಜುಳಾ, ಕೂಪದಿಂದ ಪಾರಾಗಿದ್ದೇನೆ. ನನ್ನ ಬದುಕು ನಿರೂಪಿಸಿಕೊಳ್ಳುವುದಕ್ಕೆ ಅವಕಾಶ ನೀಡಿ, ನಾನು ಅನಕ್ಷರಸ್ಥೆಯಾಗಿದ್ದರೂ ಇಂಥ ಹೀನ ಬದುಕಿಗೆ ಇತರರು ಹೋಗದಂತೆ ತಡೆಯುವ ಪ್ರಯತ್ನ ಮಾಡುತ್ತೇನೆ. ನನ್ನ ಪಾಲಕರನ್ನು ಮನವೊಲಿಸಿ, ಸಂತೈಸುವುದೇ ದೊಡ್ಡ ಸವಾಲಾಗಿದೆ ಎಂದು ಕಣ್ಣೀರಿಡುತ್ತಾಳೆ.