ಮಾಧ್ಯಮ ಪ್ರಜಾಪ್ರಭುತ್ವದ ಆಧಾರ ಸ್ತಂಭ

Updated on: 

ಕನ್ನಡಪ್ರಭ ವಾರ್ತೆ, ಕೊಪ್ಪಳ, ಜು. 1
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೊಡ್ಡ ಶಕ್ತಿ ಅಡಗಿದೆ. ಅಂತಹ ಪ್ರಜಾಪ್ರಭುತ್ವದ ಆಧಾರ ಸ್ತಂಭವಾಗಿ ಮಾಧ್ಯಮ ಕೆಲಸ ಮಾಡುತ್ತಿದೆ ಎಂದು ಗದುಗಿನ ಶ್ರೀ ತೋಂಟದಾರ್ಯ ಸಂಸ್ಥಾನ ಮಠದ ಸಿದ್ಧಲಿಂಗ ಸ್ವಾಮೀಜಿ ನುಡಿದರು.
ನಗರದ ಮಹಾಂತಯ್ಯನ ಮಠ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಕೊಪ್ಪಳ ಮೀಡಿಯಾ ಕ್ಲಬ್ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ, ಪತ್ರಕರ್ತರಿಗೆ ಸನ್ಮಾನ ಮತ್ತು ಕೊಪ್ಪಳ ಇತಿಹಾಸದ ಕುರಿತ ಕಿರುಚಿತ್ರ ಪ್ರದರ್ಶನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪ್ರಜಾಪ್ರಭುತ್ವ ಮಹಾಸೌಧವಿದ್ದಂತೆ. ಇದಕ್ಕೆ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಮತ್ತು ಪತ್ರಿಕಾ ರಂಗ ಆಧಾರ ಸ್ತಂಭಗಳು. ಇದರಲ್ಲಿ ಶಾಸಕಾಂಗ, ಕಾರ್ಯಾಂಗ ಆಡಳಿತ ತಪ್ಪಿ ನಡೆದಾಗ ನ್ಯಾಯಾಂಗ ಸರಿ ದಾರಿ ತೋರಿಸುತ್ತದೆ. ಇವು ಮೂರು ದಾರಿ ತಪ್ಪಿದಾಗ ಪತ್ರಿಕಾ ರಂಗ ದಾರಿ ತೋರಿ ಕೆಲಸ ಮಾಡಿದ ಉದಾಹರಣೆಗಳು ಇವೆ ಎಂದರು. ಪತ್ರಿಕೆಗಳು ಪ್ರಜಾಪ್ರಭುತ್ವದ ಸಾಕು ತಾಯಿ ಇದ್ದಂತೆ. ದೇಶದಲ್ಲಿ ಅಕ್ರಮ, ಹಗರಣಗಳನ್ನು ಮಾಧ್ಯಮ ಹೊರ ಹಾಕುತ್ತದೆ. ಪ್ರಸ್ತುತ ವ್ಯವಸ್ಥೆಯಲ್ಲಿ ಪತ್ರಿಕೋದ್ಯಮದ ಬಗ್ಗೆ ಜನತೆಗೆ ತಿಳಿವಳಿಕೆ ಬರಬೇಕಿದೆ. ಆಸಕ್ತಿಯಿಂದ ತಿಳಿದುಕೊಳ್ಳಲು ಮುಂದಾಗಬೇಕಿದೆ ಎಂದರು.
ಕವಿವಿ ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎ.ಎಸ್. ಬಾಲಸುಬ್ರಹ್ಮಣ್ಯಂ ಮಾತನಾಡಿ, ಯುರೋಪ್ ರಾಷ್ಟ್ರದ ಪೆಡ್ರಿಕ್ ಮೋಗ್ಲಿನ್ ಎನ್ನುವ ವ್ಯಕ್ತಿ 1836ರಲ್ಲಿ ದೇಶಕ್ಕೆ ಮತ ಪ್ರಚಾರಕ್ಕಾಗಿ ಬಂದವನು. ಇಲ್ಲಿಯ ಜನರ ಮುಗ್ಧತೆ, ಸಾಹಿತ್ಯ ಕಲೆಗೆ ಆಸಕ್ತಿ ವ್ಯಕ್ತಪಡಿಸಿ, ಇಲ್ಲಿಯ ಜನರಿಗೆ ಒಂದು ಪತ್ರಿಕೆ ಕೊಡಬೇಕು. ಅವರು ಇಲ್ಲಿಂದಲೇ ಪ್ರಪಂಚವನ್ನು ನೋಡುವಂತಾಗಬೇಕು ಎನ್ನುವ ಉದ್ದೇಶದಿಂದ 1843, ಜು. 1ರಂದು ಮಂಗಳೂರಿನಲ್ಲಿ ಬಾಸೆಲ್ ಮಿಷನ್ ಮೂಲಕ ಮಂಗಳೂರು ಸಮಾಚಾರ್ ಎನ್ನುವ ಪಾಕ್ಷಿಕ ನೀಡಿದನು. ಹಾಗಾಗಿ ಈವರೆಗೂ ಆ ದಿನವನ್ನು ಪತ್ರಿಕಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ ಎಂದರು. ಪ್ರಸ್ತುತ ದಿನಗಳಲ್ಲಿ ಪತ್ರಕರ್ತರೆ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಆ ಸಮಸ್ಯೆಗಳ ಮಧ್ಯೆ ಜನತೆಯ ನೋವು, ಸಮಸ್ಯೆ ಕುರಿತು ವರದಿ ಪಡೆದು ತನ್ನ ಸಮಸ್ಯೆ ಮುಚ್ಚಿಟ್ಟು ಜನತೆಯ ಸಮಸ್ಯೆಯತ್ತ ಬೆಳಕು ಚಲ್ಲುತ್ತಾನೆ. ದಿನದ 24 ಗಂಟೆಯೂ ಪತ್ರಕರ್ತರು ಕರ್ತವ್ಯ ನಿರತರಾಗಿರುತ್ತಾರೆ ಎಂದರು. ಸುವರ್ಣ ನ್ಯೂಸ್‌ನ ಕ್ಯಾಮೆರಾ ವಿಭಾಗದ ಮುಖ್ಯಸ್ಥ ಸತ್ಯಬೋಧ ಜೋಷಿ, ಮೀಡಿಯಾ ಕ್ಲಬ್ ಅಧ್ಯಕ್ಷ ಸೋಮರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಛಾಯಾಗ್ರಾಹಕ ಪ್ರಕಾಶ ಕಂದಕೂರು, ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂ ಇದ್ದರು. ಹಿರಿಯ ಪತ್ರಕರ್ತ ವಾಸುದೇವ ಆಚಾರ್ಯ ಹುಲಗಿ, ದೊಡ್ಡೇಶ ಯಲಿಗಾರ, ಸಿರಾಜ್ ಬಿಸರಳ್ಳಿ, ಪ್ರಕಾಶ ಕಂದಕೂರು ಅವರನ್ನು ಸನ್ಮಾನಿಸಲಾಯಿತು. ಅಶೋಕ್‌ಕುಮಾರ ಸ್ವಾಗತಿಸಿ, ನಿರ್ವಹಿಸಿದರು. ಮೀಡಿಯಾ ಕ್ಲಬ್ ಗೌರವಾಧ್ಯಕ್ಷ ಶರಣಪ್ಪ ಬಾಚಲಾಪುರ ಪ್ರಾಸ್ತಾವಿಕ ಮಾತನಾಡಿದರು. ಶರಣು ಹುಲಿಹೈದರ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ಮುಕ್ಕಣ್ಣ ಕತ್ತಿ ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com