ಕೊಪ್ಪಳ ನಗರದಲ್ಲಿ ಬುಧವಾರ ಭಾರಿ ಮಳೆ ಸುರಿದಿದ್ದರಿಂದ ರಸ್ತೆಗಳು ಕೆರೆಯಂತಾಗಿದ್ದರೂ ಸಂಚಾರ ಸಮಸ್ಯೆಯಾಯಿತು. ಇನ್ನು ಅಲ್ಲಲ್ಲಿ ನೀರು ಅಂಗಡಿ ಮುಂಗಟ್ಟುಗಳಿಗೆ ನುಗ್ಗಿದ್ದರಿಂದ ಪರದಾಡುವಂತೆ ಆಗಿತ್ತು. ನಗರದಲ್ಲಿ ಅಲ್ಪ ಮಳೆಯಾದರೆ ಸಾಕು ನೂರೆಂಟು ಸಮಸ್ಯೆ. ಆದರೆ, ಇದು ಭಾರಿ ಮಳೆಯಾಗಿದ್ದರಿಂದ ಬಸ್ ನಿಲ್ದಾಣದ ಎದುರು ರಾಷ್ಟ್ರೀಯ ಹೆದ್ದಾರಿ ಕೆರೆಯಂತಾಗಿತ್ತು. ಸುಮಾರು ಹೊತ್ತು ಸಂಚಾರಕ್ಕೆ ಸಾಧ್ಯವಾಗದೆ ಇದ್ದಿದ್ದರಿಂದ ಟ್ರಾಫಿಕ್ ಸಮಸ್ಯೆಯಾಗಿತ್ತು. ಇದಲ್ಲದೆ ಇದರ ನಡುವೆ ಸಾಹಸ ಮಾಡಿ ಬೈಕ್ ಸವಾರರು ಸಂಚಾರ ಮಾಡುತ್ತಿದ್ದ ದೃಶ್ಯ ರೋಮಾಂಚನವಾಗಿತ್ತು. ನಗರದ ಮಧ್ಯದಲ್ಲಿರುವ ರಾಜಕಾಲುವೆ ಅತಿಕ್ರಮಣವಾಗಿದ್ದರಿಂದ ನೀರು ಕಾಲುವೆಯ ಮೂಲಕ ಹೋಗಲು ಆಗದೆ ರಸ್ತೆಗೆ ಬರುತ್ತದೆ. ಇಷ್ಟಾದರೂ ನಗರಸಭೆಯವರು ಸಮಸ್ಯೆ ಪರಿಶೀಲಿಸುವುದಕ್ಕೆ ಬಾರದೆ ಇರುವ ಕುರಿತು ಜನರು ಹಿಡಿಶಾಪ ಹಾಕುತ್ತಿದ್ದರು.