ಕೊಪ್ಪಳ: ಗಣಿ ಮಾಲೀಕರು 25 ಸಾವಿರ ಕಾರ್ಮಿಕರಿಗೆ ನೀಡಬೇಕಾದ ಬಾಕಿ ಕೂಲಿ ಹಣವನ್ನು ನೀಡದೆ ಸತಾಯಿಸುತ್ತಿದ್ದಾರೆ. ಕಾರಣ ಕೂಡಲೇ ಸರ್ಕಾರ ಮಧ್ಯಸ್ಥಿಕೆ ವಹಿಸಿ ಕಾರ್ಮಿಕರಿಗೆ ಕೂಲಿ ಕೊಡಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗೆ ಬರೆದಿರುವ ಮನವಿ ಪತ್ರವನ್ನು ಮಂಗಳವಾರ ಜಿಲ್ಲಾಧಿಕಾರಿಗಳ ಮೂಲಕ ಟಿಯುಸಿ ಸಂಘಟನೆ ಆಗ್ರಹಿಸಿದೆ. ಬಳ್ಳಾರಿಯ 25000 ಕಾರ್ಮಿಕರ ಬಾಕಿ ವೇತನ ಕೊಡದ ಅಲ್ಲಿನ ಗಣಿ ಮಾಲೀಕರು ವಂಚನೆ ಮಾಡಿದ್ದಾರೆ. ಈ ಕುರಿತು ಫೆ. 18ರಂದು ಬಳ್ಳಾರಿಯಲ್ಲಿ ಬೃಹತ್ ರ್ಯಾಲಿಯ ಮೂಲಕ ತಮಗೆ (ಮುಖ್ಯಮಂತ್ರಿ) ಮನವಿ ಪತ್ರ ಕಳಿಸಲಾಗಿತ್ತು. ಜು. 23ರಂದು ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. 23 ದಿನಗಳು ಕಳೆದರೂ ಸರ್ಕಾರ ಈ ಹೋರಾಟ ನಿರತ ಕಾರ್ಮಿಕರ ಬೇಡಿಕೆ ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷಿಸಿರುವುದು ಖಂಡನೀಯ. ಈ ಬೆಳವಣಿಗೆ ಮೇಲ್ನೋಟಕ್ಕೆ ಸರ್ಕಾರ ಗಣಿ ಮಾಲೀಕರಿಗೆ ಶರಣಾಗಿದೆ ಎಂದು ಕಂಡು ಬರುತ್ತದೆ. ಕಾರ್ಮಿಕರ ಬೇಡಿಕೆ ಮತ್ತು ಹೋರಾಟವನ್ನು ಇದೇ ರೀತಿ ನಿರ್ಲಕ್ಷ್ಯ ಭಾವನೆಯಿಂದ ನೋಡಿದ್ದಾದರೆ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ಹೋರಾಟವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಜಿಲ್ಲಾಧ್ಯಕ್ಷ ಬಸವರಾಜ ನರೇಗಲ್, ರಾಜ್ಯಾಧ್ಯಕ್ಷ ಡಿ.ಎಚ್. ಪೂಜಾರ ಇದ್ದರು.