ಗಂಗಾವತಿ: ನಗರದ ಆನೆಗೊಂದಿ ರಸ್ತೆಯ ವಿರೂಪಾಪುರ ಶ್ರೀದುರ್ಗಾದೇವಿ ದೇವಸ್ಥಾನದಲ್ಲಿ ಬಿಜೆಪಿ ತಾಲೂಕು ಸ್ಲಂ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಂಡಲ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಭೀಮೇಶ (ಅಧ್ಯಕ್ಷ), ಹನುಮಂತಪ್ಪ ಗಾಳಿ (ಉಪಾಧ್ಯಕ್ಷ), ವೆಂಕಟೇಶ, ಕೆ.ಇ.ಬಿ. (ಉಪಾಧ್ಯಕ್ಷ), ನಾಗರಾಜ ಉಪ್ಪಿ ಫೋಟೋಸ್ (ಪ್ರಧಾನ ಕಾರ್ಯದರ್ಶಿ), ರಮೇಶ ಪಾರ್ಗೆ (ಕಾರ್ಯದರ್ಶಿ) ಧರ್ಮಣ್ಣ ಭೋವಿ (ಸಹ ಕಾರ್ಯದರ್ಶಿ), ತಿಮ್ಮಣ್ಣ (ಸಹ ಕಾರ್ಯದರ್ಶಿ), ಯರಿಸ್ವಾಮಿ (ಖಜಾಂಚಿ), ಕಾರ್ಯಕಾರಿಣಿ ಮಂಡಳಿ ಸದಸ್ಯರಾಗಿ ವಿಶ್ವನಾಥ ಕಲ್ಮಠ, ಮಾರುತಿ ಪತ್ತಾರ, ಹನುಮಂತ ಭೋವಿ, ಯಮನೂರಪ್ಪ, ಹರ್ಷವರ್ದನ್ ಅಣ್ಣೂರ, ಮಂಜುನಾಥ ಎಚ್.ಎಂ, ವೀರೇಶ ಅಪರೆಡ್ಡಿ, ಆನಂದ ಗಾಳಿ, ಶಿವಪ್ರಸಾದ ಕಲ್ಮಠ, ವೀರೇಶ ನಾಯಕ, ಕೊಟ್ರೇಶ ಬಡಿಗೇರ, ಚನ್ನಪ್ಪ ಭೋಪೂರ, ಪ್ರಶಾಂತ ಬಡಿಗೇರ, ಬಸವರಾಜ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಕೊಪ್ಪಳ ಜಿಲ್ಲಾ ಸ್ಲಂ ಮೋರ್ಚಾ ಅಧ್ಯಕ್ಷ ಕೆ. ಅಂಬಣ್ಣ ಜಿಲ್ಲಾ ಕಾರ್ಯದರ್ಶಿ ವೀರೇಶ ಸೂಳೇಕಲ್, ಜಿಲ್ಲಾ ಉಪಾಧ್ಯಕ್ಷ ಪ್ರಭು ಗಾಳಿ ಇದ್ದರು.
ಕಾರ್ಮಿಕರಿಗೆ ನಿವೇಶನ ವಿತರಿಸಿ
ಗಂಗಾವತಿ: ನಿವೇಶನಗಳ ಹಂಚಿಕೆಯಲ್ಲಿ ಕಾರ್ಮಿಕರಿಗೆ ಅನ್ಯಾಯವಾಗಿದೆ ಎಂದು ಖಂಡಿಸಿ ಅಸಂಘಟಿತ ಕಾರ್ಮಿಕರು ರಾಣಾಪ್ರತಾಪ್ ವೃತ್ತದಿಂದ ನಗರಸಭೆಗೆ ಬೃಹತ್ ರ್ಯಾಲಿ ನಡೆಸಿದರು. ಆಶ್ರಯ ಸಮಿತಿ ಸ್ವಾಧೀನದಲ್ಲಿರುವ 554 ನಿವೇಶನಗಳಲ್ಲಿ ಕನಿಷ್ಠ ಒಂದು ನಿವೇಶನವಾದರೂ ಕಾಲುವೆ ಬದಿಯಲ್ಲಿ, ರಸ್ತೆ ಬದಿಯಲ್ಲಿ ಮತ್ತು ಸರ್ಕಾರಿ ಜಾಗಗಳಲ್ಲಿ ಜೀವನ ಮಾಡುತ್ತಿರುವ ಕಾರ್ಮಿಕರಿಗೆ ಮಂಜೂರು ಮಾಡದೇ ಇರುವುದು ಖಂಡನೀಯವಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಆಶ್ರಯ ಸಮಿತಿಯು ನಿಯಮಾವಳಿಗಳನ್ನು ಗಾಳಿಗೆ ತೂರಿ ಭ್ರಷ್ಟಾಚಾರವೆಸಗಿ ಅನರ್ಹ ಫಲಾನುಭಮಿಗಳನ್ನು ಆಯ್ಕೆ ಮಾಡಿದೆ. ಕೂಡಲೇ ಶಾಸಕರು ಆಶ್ರಯ ಸಮಿತಿಯ ಪಟ್ಟಿಯನ್ನು ಮರು ಪರಿಶೀಲಿಸಿ ಅರ್ಹರಿಗೆ ನೀಡಬೇಕೆಂದು ಒತ್ತಾಯಿಸಿದರು. ಕಾರ್ಮಿಕ ಮುಖಂಡರಾದ ಜೆ. ಭಾರದ್ವಾಜ್, ಎಐಸಿಸಿಟಿಯು ಜಿಲ್ಲಾಧ್ಯಕ್ಷ ಎಂ. ವಿರೂಪಾಕ್ಷಪ್ಪ, ಬಸವರಾಜ ಸುಳೆಕಲ್, ಖಾದರಸಾಬ್, ವಿರೂಪಾಕ್ಷಪ್ಪ, ಮಹಾಬಳೇಶಪ್ಪ, ಬಿ. ಮೋಹನ, ಎಂ. ಏಸಪ್ಪ, ಬಸಪ್ಪ, ಗಂಗಮ್ಮ, ಪಾರ್ವತಮ್ಮ, ಮುತ್ತಣ್ಣ, ನೂರಾರು ಅಸಂಘಟಿತ ಕಾರ್ಮಿಕರು ಪಾಲ್ಗೊಂಡಿದ್ದರು.
ದೋಣಿ ಪ್ರಯಾಣಿಕರ ಸುರಕ್ಷತೆಗಾಗಿ ಒತ್ತಾಯಿಸಿ ಡಿಸಿಗೆ ಕರವೇ ಮನವಿ
ಗಂಗಾವತಿ: ಐತಿಹಾಸಿಕ ತಾಣ ಆನೆಗುಂದಿ ಹಾಗೂ ನವಬೃಂದಾವನ ನಡುಗಡ್ಡೆ ಪ್ರದೇಶಗಳಲ್ಲಿ ದೋಣಿ ಮೂಲಕ ಸಂಚರಿಸುವ ಪ್ರಯಾಣಿಕರಿಗೆ ಸುರಕ್ಷತೆಗಾಗಿ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ದೋಣಿ ಪ್ರಯಾಣದ ಗುತ್ತಿಗೆ ಪಡೆದ ಗುತ್ತಿಗೆದಾರರು ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಕೊಂಡು ದೋಣಿಗಳನ್ನು ನದಿಯಲ್ಲಿ ಹಾಕುತ್ತಿರುವುದರಿಂದ ದುರಂತಗಳು ಸಂಭವಿಸುವ ಆತಂಕ ಎದುರಾಗಿದೆ. ಅಲ್ಲದೇ ಪ್ರಯಾಣಿಕರಿಗೆ ಯಾವುದೇ ರಕ್ಷಣಾ ಕವಚಗಳನ್ನು ಪೂರೈಸುವುದಿಲ್ಲ. ಗುತ್ತಿಗೆ ಪಡೆಯುವಾಗ ಸರ್ಕಾರವು ವಿಧಿಸಿದ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಶುಲ್ಕ ಸಂಗ್ರಹಿಸುತ್ತ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಕೂಡಲೇ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಾಜೇಶ ಅಂಗಡಿ, ವಿದ್ಯಾರ್ಥಿ ಘಟಕದ ಕೆ. ವೆಂಕಟೇಶ ಬಾಬು, ಕಾರ್ಯಕರ್ತರಾದ ನಾಗರಾಜ ಹ್ಯಾಟಿ, ಕೊಟ್ರೇಶ, ಯಮನೂರು, ಮಹೇಶ ಮತ್ತಿತರರು ಉಪಸ್ಥಿತರಿದ್ದರು.
ಪದಾಧಿಕಾರಿಗಳ ಆಯ್ಕೆ
ತಾವರಗೇರಾ: ಸ್ಥಳೀಯ ನರಹರಿ ದೇವಸ್ಥಾನದಲ್ಲಿ ಭಾರತೀಯ ರಿಪಬ್ಲಿಕ್ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕೊಪ್ಪಳ ಜಿಲ್ಲಾ ಮಹಿಳಾ ಅಧ್ಯಕ್ಷೆಯಾಗಿ ಸರೋಜಮ್ಮ ಗೊಂದಳ್ಳಿ, ಕುಷ್ಟಗಿ ತಾಲೂಕು ಅಧ್ಯಕ್ಷರಾಗಿ ಶಿವರಾಜ ಬಿಸೆ, ತಾಲೂಕು ಎಸ್ಸಿ ಮತ್ತು ಎಸ್ಟಿ ಘಟಕದ ಅಧ್ಯಕ್ಷರಾಗಿ ಅಜಿತ ನಾಯಕ, ತಾಲೂಕು ಮಹಿಳಾ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿ ಪರ್ಜನ್ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ರಮೇಶ ಕೋಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಂಗಾವತಿಯಲ್ಲಿ ಕವಿಗೋಷ್ಠಿ
ಗಂಗಾವತಿ: ನಗರದ 20ನೇ ವಾರ್ಡಿನ ಚಲವಾದಿ ವಾರ್ಡ್ದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾವ್ಯಲೋಕ ಸಂಘಟನೆ ಆಯೋಜಿಸಿದ್ದ 48ನೇ ಕವಿಗೋಷ್ಠಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ನಾರಾಯಣ ಕಂದಗಲ್ ಪ್ರಗತಿಯ ಗುಣ ಮತ್ತು ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಸುವ ಶಕ್ತಿಯನ್ನು ಕಾವ್ಯ ಹೊಂದಿರಬೇಕು ಎಂದರು. ಕವಿಯತ್ರಿ ಶರಣಮ್ಮ ಕೆ. ಅಂಗಡಿ ಮಾತನಾಡಿ, ಕಾವ್ಯ ರಚನೆಯಿಂದ ಸಮಾನತೆ ವಾತಾವರಣ ಸೃಷ್ಟಿಯಾಗಬೇಕು ಎಂದರು. ಕಲ್ಗುಡಿಯ ಗಣೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘಟನೆ ಅಧ್ಯಕ್ಷ ಎಂ. ಪರಶುರಾಮ ಪ್ರಿಯ, ಶಾಲೆ ಮುಖ್ಯಗುರು ಸಂಗಪ್ಪ ಗಾಜಿ ಇದ್ದರು. ಶ್ರುತಿ ವರ್ಣೇಕರ್, ಸುಧಾತಾಯಿ ಬಡಿಗೇರ, ಮಹ್ಮದ್ಮೀಯಾ, ನರ್ಮದಾಬಾಯಿ ಕುಲಕರ್ಣಿ, ಟಿ.ಆರ್. ಶಾರದಾ, ಕೃಷ್ಣಾಸಿಂಗ್, ರಘುನಾಥ ಸಂಗಳದ, ಚಿದಾನಂದ ಕೀರ್ತಿ, ವಿರೂಪಣ್ಣ, ವಿ.ಯು. ವರ್ಣೇಕರ್, ರಮೇಶ ಗಬ್ಬೂರು, ಜ್ಯೋತಿ ಹಿರೇಮಠ, ಗೋಪಿನಾಥ ದಿನ್ನಿ ಕಾವ್ಯ ವಾಚಿಸಿದರು. ಶಿಕ್ಷಕ ಸೋಮು ಕುದರಿಹಾಳ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕಿ ಟಿ.ಆರ್. ಶಾರದಾ ವಂದಿಸಿದರು.
ಕಾಮಗಾರಿ ನಿಧಾನಗತಿ: ಕರವೇ ಪ್ರತಿಭಟನೆ
ಕೊಪ್ಪಳ: ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ನಡೆದಿರುವ ಒಳಚರಂಡಿ ಕಾಮಗಾರಿ ಅತ್ಯಂತ ನಿಧಾನವಾಗಿ ನಡೆದಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಅದರಲ್ಲೂ ಎಲ್ಲೆಂದರಲ್ಲಿ ಗುಂಡಿ ತೋಡಿ ಹಾಗೆ ಬಿಟ್ಟಿರುವುದರಿಂದ ಮಕ್ಕಳನ್ನು ಆಚೆ ಕಳುಹಿಸದಂತೆ ಆಗಿದೆ. ಇಂಥ ನಿಧಾನಗತಿ ಕಾಮಗಾರಿಗೆ ಕಾರಣವಾದವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿಬಣ) ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿತು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಕಾಮಗಾರಿಯನ್ನು ತ್ವರಿತ ಮಾಡುವಂತೆ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ. ಹಾಗೊಂದು ವೇಳೆ ಮನವಿ ನೀಡಿದ ಬಳಿಕವೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳದೆ ಇದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ವಿಜಯಕುಮಾರ್, ಗಿರಿಶಾನಂದ, ಮೋಹಿದ್ದೀನ್, ದಯಾನಂದಸ್ವಾಮಿ, ವೀರಭದ್ರಗೌಡ ಪಾಟೀಲ್, ನವಾಬ್, ಗಿರೀಶ, ಲಕ್ಷ್ಮಣ ಯಾದವ್, ಭೀಮಪ್ಪ, ಮಾರುತಿ ಹಡಪದ ನೇತೃತ್ವ ವಹಿಸಿದ್ದರು.
ನಾಳೆ ಅದಾಲತ್
ಕೊಪ್ಪಳ: ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಇನ್ನು ಮುಂದೆ ಪ್ರತಿ ಸೋಮವಾರ ಗ್ರಾಮ ಮಟ್ಟದಲ್ಲಿ ಕಂದಾಯ ಅದಾಲತ್ ನಡೆಯಲಿದ್ದು, ಜು. 17ರಂದು ಮೊದಲ ಕಂದಾಯ ಅದಾಲತ್ ಯಲಬುರ್ಗಾ ತಾಲೂಕು ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ನಡೆಯಲಿದೆ. ಕಂದಾಯ ಇಲಾಖೆಗೆ ಸಂಬಂಧಪಟ್ಟ ವಿಷಯಗಳ ಕುರಿತು ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳುವ ಸಲುವಾಗಿ ಇನ್ನುಮುಂದೆ ಗ್ರಾಮ ಮಟ್ಟದಲ್ಲಿ ಪ್ರತಿ ಸೋಮವಾರ ಕಂದಾಯ ಅದಾಲತ್ ನಡೆಯಲಿದೆ. ಜು. 14ರಂದು ತಾಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಿಮಿತ್ತ ಕಂದಾಯ ಅದಾಲತ್ ನಡೆದಿರುವುದಿಲ್ಲ. ಇದೀಗ ಈ ವಾರದ ಕಂದಾಯ ಅದಾಲತ್ ಜು. 17ರಂದು ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಕಂದಾಯ ಅದಾಲತ್ನಲ್ಲಿ ಪಾಲ್ಗೊಳ್ಳುವರು. ಪಹಣಿ ತಿದ್ದುಪಡಿ, ಪೋತಿ ವಿರಾಸತ್ ಹಕ್ಕು ಬದಲಾವಣೆ, ಸರ್ವೇ ತಕಾರರು, ಹಕ್ಕು ಬದಲಾವಣೆ ಬಗ್ಗೆ ತಕರಾರು, ಪಿಂಚಣಿ ಸಂಬಂಧಿತ ತಕರಾರು ಮತ್ತು ಕಂದಾಯ ಇಲಾಖೆಯ ಯಾವುದೇ ಸಮಸ್ಯೆಗಳ ಬಗ್ಗೆ ಸ್ಥಳದಲ್ಲಿಯೇ ಇತ್ಯರ್ಥ ಪಡಿಸಲಾಗುವುದು.
ಕಾರ್ಮಿಕರಿಗೆ ಕೂಲಿ ಹಣ ಪಾವತಿಸಿ
ಕೊಪ್ಪಳ: ಗಣಿ ಮಾಲೀಕರು 25 ಸಾವಿರ ಕಾರ್ಮಿಕರಿಗೆ ನೀಡಬೇಕಾದ ಬಾಕಿ ಕೂಲಿ ಹಣವನ್ನು ನೀಡದೆ ಸತಾಯಿಸುತ್ತಿದ್ದಾರೆ. ಕಾರಣ ಕೂಡಲೇ ಸರ್ಕಾರ ಮಧ್ಯಸ್ಥಿಕೆ ವಹಿಸಿ ಕಾರ್ಮಿಕರಿಗೆ ಕೂಲಿ ಕೊಡಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗೆ ಬರೆದಿರುವ ಮನವಿ ಪತ್ರವನ್ನು ಮಂಗಳವಾರ ಜಿಲ್ಲಾಧಿಕಾರಿಗಳ ಮೂಲಕ ಟಿಯುಸಿ ಸಂಘಟನೆ ಆಗ್ರಹಿಸಿದೆ. ಬಳ್ಳಾರಿಯ 25000 ಕಾರ್ಮಿಕರ ಬಾಕಿ ವೇತನ ಕೊಡದ ಅಲ್ಲಿನ ಗಣಿ ಮಾಲೀಕರು ವಂಚನೆ ಮಾಡಿದ್ದಾರೆ. ಈ ಕುರಿತು ಫೆ. 18ರಂದು ಬಳ್ಳಾರಿಯಲ್ಲಿ ಬೃಹತ್ ರ್ಯಾಲಿಯ ಮೂಲಕ ತಮಗೆ (ಮುಖ್ಯಮಂತ್ರಿ) ಮನವಿ ಪತ್ರ ಕಳಿಸಲಾಗಿತ್ತು. ಜು. 23ರಂದು ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. 23 ದಿನಗಳು ಕಳೆದರೂ ಸರ್ಕಾರ ಈ ಹೋರಾಟ ನಿರತ ಕಾರ್ಮಿಕರ ಬೇಡಿಕೆ ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷಿಸಿರುವುದು ಖಂಡನೀಯ. ಈ ಬೆಳವಣಿಗೆ ಮೇಲ್ನೋಟಕ್ಕೆ ಸರ್ಕಾರ ಗಣಿ ಮಾಲೀಕರಿಗೆ ಶರಣಾಗಿದೆ ಎಂದು ಕಂಡು ಬರುತ್ತದೆ. ಕಾರ್ಮಿಕರ ಬೇಡಿಕೆ ಮತ್ತು ಹೋರಾಟವನ್ನು ಇದೇ ರೀತಿ ನಿರ್ಲಕ್ಷ್ಯ ಭಾವನೆಯಿಂದ ನೋಡಿದ್ದಾದರೆ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ಹೋರಾಟವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಜಿಲ್ಲಾಧ್ಯಕ್ಷ ಬಸವರಾಜ ನರೇಗಲ್, ರಾಜ್ಯಾಧ್ಯಕ್ಷ ಡಿ.ಎಚ್. ಪೂಜಾರ ಇದ್ದರು.