ಕಾರಟಗಿ: ಸರ್ಕಾರದ ಜಮೀನನ್ನು ಅತಿಕ್ರಮಿಸಿದ್ದ ಗುಡಿಸಲು ನಿವಾಸಿಗಳನ್ನು ತೆರವುಗೊಳಿಸಲು ಮುಂದಾಗಿದ್ದ ಪಂಚಾಯಿತಿ ಅಧಿಕಾರಿಗಳಿಗೆ ಅಡ್ಡಿಪಡಿಸಿದ ಬಿಜೆಪಿ ಮುಖಂಡರ ತೀವ್ರ ವಿರೋಧದ ನಡುವೆಯೂ ಪೊಲೀಸರ ಸಹಾಯದಿಂದ ಮಂಗಳವಾರ ಸಂಜೆ ಅತಿಕ್ರಮಣ ತೆರವುಗೊಳಿಸಿದ ಘಟನೆ ಮರ್ಲಾನಹಳ್ಳಿ ಗ್ರಾಪಂ ವ್ಯಾಪ್ತಿಯ ಎಚ್.ಡಿ. ದೇವೇಗೌಡ ನಗರದಲ್ಲಿ ನಡೆದಿದೆ.
ಅತಿಕ್ರಮಣ ನಿವಾಸಿಗಳ ಪ್ರತಿಭಟನೆ, ಟೈರ್ಗೆ ಬೆಂಕಿ ಹಚ್ಚಿ ವಿರೋಧ, ದಿಗ್ಭಂದನ ಆಕ್ರೋಶದ ನಡುವೆಯೂ ಮಂಗಳವಾರ ರಾತ್ರಿಯಾಗುತ್ತಿದ್ದಂತೆ ತೆರವು ಕಾರ್ಯಾಚರಣೆ ಮಾಡಿತು. ಮರ್ಲಾನಹಳ್ಳಿ ಗ್ರಾಪಂ ವ್ಯಾಪ್ತಿಯ ದೇವೇಗೌಡ ನಗರದಲ್ಲಿನ ಸರ್ಕಾರಿ ಜಮೀನಿನಲ್ಲಿ 20 ದಿನಗಳಿಂದ ಏಕಾಏಕಿ 18ಕ್ಕೂ ಹೆಚ್ಚು ಗುಡಿಸಲುಗಳು ತಲೆ ಎತ್ತಿದ್ದವು. ಇವುಗಳನ್ನು ತೆರವುಗೊಳಿಸಲು ಮರ್ಲಾನಹಳ್ಳಿ ಪಂಚಾಯಿತಿ ನಿರ್ಣಯಿಸಿತ್ತು. ಕಳೆದ ವಾರ ತೆರವುಗೊಳಿಸುವಂತೆ ಬಡಾವಣೆ ನಿವಾಸಿಗಳು ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿ ಬೀಗ ಹಾಕಿದ್ದರು.
ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪಂಚಾಯಿತಿ ನಿವಾಸಿಗಳಿಗೆ ಜಾಗ ಖಾಲಿ ಮಾಡುವಂತೆ ಸೂಚಿಸಿತ್ತು. ಜೊತೆಗೆ ಎರಡು ಸುತ್ತಿನ ನೋಟಿಸ್ ಜಾರಿ ಮಾಡಿತ್ತು. ಆದರೂ ನಿವಾಸಿಗಳು ಮಾತ್ರ ಕದಲಲಿಲ್ಲ. ಕೊನೆಗೆ ಪಂಚಾಯಿತಿ ನಿರ್ಣಯ ಕೈಗೊಂಡು ಪೊಲೀಸ್, ತಾಪಂ ಅಧಿಕಾರಿಗಳ ಸಹಾಯದಿಂದ ಮಂಗಳವಾರ ತೆರವಿಗೆ ತೆರಳಿದ ವೇಳೆ ಬಿಜೆಪಿ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದರು. ಗುಡಿಸಲು ತೆರವಿಗೆ ಬಿಡುವುದಿಲ್ಲ ಎಂದು ಬಸವರಾಜ ದಡೇಸೂಗೂರು ಪಟ್ಟು ಹಿಡಿದರು. ಅಧಿಕಾರಿಗಳು, ಪಂಚಾಯಿತಿ ಸದಸ್ಯ ಮತ್ತು ಬಿಜೆಪಿ ಮುಖಂಡರ ನಡುವೆ ನೂಕುನುಗ್ಗಲಾಟ ನಡೆಯಿತು. ಒಂದು ಹಂತದಲ್ಲಿ ಪೊಲೀಸರು ಇನ್ನೇನು ಲಾಠಿಚಾರ್ಚ್ ಮಾಡುವ ಹಂತಕ್ಕೆ ಪರಿಸ್ಥಿತಿ ತಿರುಗಿತ್ತು.
ವಾದ ಪ್ರತಿವಾದ: ಒಂದು ಹಂತದಲ್ಲಿ ಪಂಚಾಯಿತಿ ಮತ್ತು ಬಿಜೆಪಿ ಮುಖಂಡರ ನಡುವೆ ವಾದ ಪ್ರತಿವಾದ ನಡೆಯಿತು. ಈ ಬಡವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ಪಂಚಾಯಿತಿ ಸದಸ್ಯರು ಮತ್ತು ತಾಪಂ ಅಧಿಕಾರಿ ಪಂಚಾಯಿತಿಗೆ ಒಟ್ಟು 400 ಕುಟುಂಬಗಳು ನಿವೇಶನಕ್ಕೆ ಅರ್ಜಿ ಸಲ್ಲಿಸಿವೆ. ಇವರಿಗೆ ನಿವೇಶನ ಇಲ್ಲ. ಈ 400 ಕುಟುಂಬಗಳು ಸರ್ಕಾರಿ ಜಾಗ ಅತಿಕ್ರಮಣ ಮಾಡಿದರೆ ಹೇಗೆ? ಯಾರು ಜವಾಬ್ದಾರರು ಎಂದು ಪ್ರಶ್ನಿಸಿದರು. ಈಗ ಅತಿಕ್ರಮಣ ನಿವಾಸಿಗಳು ಹಾಕಿದ ಗುಡಿಸಲುಗಳನ್ನು ಯಾರೂ ವಾಸಿಸುತ್ತಿಲ್ಲ. ನೀವೇ ನೋಡಿ ಎಲ್ಲ ಖಾಲಿ ಇವೆ. ಇದೊಂದು ಅತಿಕ್ರಮಣದ ಸಂಚು ಎಂದು ಸದಸ್ಯರು ಹೇಳಿದರು. ಆಗ ಮುಖಂಡ ಬಸವರಾಜ್ ದಡೇಸೂಗೂರು, ಈ ಪ್ರದೇಶದಲ್ಲಿನ ಉಳಿದ ಅತಿಕ್ರಮಣದ ಗುಡಿಸಲು ತೆರುವುಗೊಳಿಸಿ ಎಂದು ತಾಪಂ ಇಓ ಎಸ್.ಎನ್. ಮಠ ಅವರನ್ನು ಒತ್ತಾಯಿಸಿ ಕೈ ಹಿಡಿದು ಎಳೆದರು. ಆಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.
ಕತ್ತಲಾಗುತ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಕೆಲ ಗುಡಿಸಲು ನಿವಾಸಿಗಳು ಪಂಚಾಯಿತಿ ಮುಂದೆ ಠಿಕಾಣೆ ಹೂಡಲು ಸಜ್ಜಾದರು. ಬಿಜೆಪಿ ಮುಖಂಡ ಬಸವರಾಜ್ ಡಡೇಸೂಗೂರು ಅವರೊಂದಿಗೆ ಬಿಲ್ಗಾರ್ ನಾಗರಾಜ್, ಲಂಕೇಶ ಗುಳದಾಳ, ಕೆ. ಶೇಷಗಿರಿರಾವ್ ಸಾಥ್ ನೀಡಿದ್ದರು.
ಪಂಚಾಯಿತಿ ಪರ ತಾಪಂ ಇಓ ಎಸ್.ಎನ್. ಮಠ, ಸದಸ್ಯರಾದ ವಿರೂಪಣ್ಣ ದೊಡ್ಡಮನಿ, ಶರಣಪ್ಪ, ಟಿ. ಸತ್ಯನಾರಾಯಣ ಇದ್ದರು. ಡಿವೈಎಸ್ಪಿ ವಿನ್ಸಂಟ್ ಶಾಂತಕುಮಾರ, ಸಿಪಿಐ ಧರ್ಮಟ್ಟಿ, ಕಾರಟಗಿ ಪಿಎಸ್ಐ ಉದಯರವಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.