ಕನ್ನಡಪ್ರಭ ವಾರ್ತೆ, ಕೊಪ್ಪಳ, ಜು. 17
ಮೂರು ವರ್ಷಗಳಿಂದ ಮೈಸೂರಿನ ಮನೆಯೊಂದರಲ್ಲಿ ಜೀತಕ್ಕಿದ್ದು ಚಿತ್ರಹಿಂಸೆ ಅನುಭವಿಸುತ್ತಿದ್ದ ಬಾಲಕಿ ತಪ್ಪಿಸಿಕೊಂಡು ಬಂದು ಕೊಪ್ಪಳದ ಬಾಲಕಿಯರ ಬಾಲಮಂದಿರದಲ್ಲಿ ರಕ್ಷಣೆ ಪಡೆದಿದ್ದಾಳೆ.
ಆಕೆ ಪಾರಾಗಿ ಬಂದಿದ್ದು ಪವಾಡವೇ ಸರಿ. 2001ರ ಪ್ರಾರಂಭದಲ್ಲಿ ದುರ್ಗಾ (11) ಎಂಬಾಕೆಯನ್ನು ಬಡತನದ ಬೇಗೆಯಲ್ಲಿ ಬೆಂದಿದ್ದ ಆಕೆಯ ತಾಯಿಯೇ ಮಹಾರಾಷ್ಟ್ರದ ಓಘಟ್ಟ ಗ್ರಾಮದಿಂದ ಕರೆತಂದು ಮೈಸೂರಿನ ಮನೆಯೊಂದರಲ್ಲಿ ಜೀತಕ್ಕೆ ಇಟ್ಟಿದ್ದರು. ನನ್ನ ಜತೆಗಿದ್ದರೆ ಮಗಳಿಗೆ ತುತ್ತು ಅನ್ನವೂ ಸಿಗದು ಎಂಬ ಕಾರಣವೂ ಇದರ ಹಿಂದಿತ್ತು. ಆಮೇಲೆ ತಾಯಿ ತಿರುಗಿಯೂ ನೋಡಲಿಲ್ಲ. ಜೀತಕ್ಕಿದ್ದ ಮನೆಯವರು ಕೊಡುತ್ತಿದ್ದ ಚಿತ್ರಹಿಂಸೆ ಸಹಿಸುವ ಶಕ್ತಿಯೂ ಇರಲಿಲ್ಲ. ತಾಯಿಯನ್ನು ಸಂಪರ್ಕಿಸಲು ಸಾಧ್ಯವಾಗದೆ ದುರ್ಗಾ ನರಕ ಯಾತನೆ ಅನುಭವಿಸಿದಳು. ಇನ್ನು ತಡೆಯಲಾರೆ ಎಂದು ತಿಳಿದ ದುರ್ಗಾ (ಈಗ 14 ವರ್ಷ) ಜೀತದಿಂದ ಪಾರಾಗಿ, ಮನೆಬಿಟ್ಟು ಬಂದಿದ್ದಾಳೆ. ಅಲ್ಲಿ ಇಲ್ಲಿ ಸುತ್ತಾಡುತ್ತ ಬುಧವಾರ ಹಂಪಿ ಎಕ್ಸ್ಪ್ರೆಸ್ ರೈಲನ್ನೇರಿದಳು. ಮೌನವಾಗಿ ಕುಳಿತಿದ್ದ ಆಕೆಯನ್ನು ಯಾರೋ ಮಾತನಾಡಿಸಿದ್ದಾರೆ. ಆಗ ಆಕೆ ತನ್ನ ಕರುಣ ಕಥೆಯನ್ನು ಹೇಳಿದ್ದಾಳೆ. ಅವರು ಕೊಪ್ಪಳ ರೈಲು ನಿಲ್ದಾಣದಲ್ಲಿ ಚಂದಪ್ಪ ತಳವಾರ ಅವರ ಮೂಲಕ ಬಾಲಕಿಯನ್ನು ಪೊಲೀಸರ ಸಮ್ಮುಖದಲ್ಲಿ ಬಾಲಕಿಯರ ಬಾಲಮಂದಿರದಲ್ಲಿ ರಕ್ಷಣಾ ಘಟಕಕ್ಕೆ ಒಪ್ಪಿಸಿದ್ದಾರೆ. ಯಾರ ಮನೆಯಲ್ಲಿ ಈ ಬಾಲಕಿ ಜೀತಕ್ಕಿದ್ದಳು ಎನ್ನುವುದು ತಿಳಿದಿದೆ. ಮಾಹಿತಿ ಕಲೆ ಹಾಕಿರುವ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಆದರೆ, ವಿಚಾರಣೆ ವೇಳೆ ಭಾಷೆ ತೊಡಕು ಎದುರಾಗಿದೆ. ಬಾಲಕಿಗೆ ಮರಾಠಿ ಮಾತ್ರ ಬರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.