ಕನ್ನಡಪ್ರಭ ವಾರ್ತೆ, ಕೊಪ್ಪಳ, ಜು. 17
ನಾವು ಧಾರವಾಡ ಹೈಕೋರ್ಟ್ ಪೀಠ ವ್ಯಾಪ್ತಿಯಲ್ಲಿದ್ದು, ಸುಖವಾಗಿದ್ದೇವೆ. ನಮ್ಮನ್ನು ಗುಲ್ಬರ್ಗ ಪೀಠಕ್ಕೆ ಸೇರಿಸುವ ಹುನ್ನಾರು ನಡೆಯುತ್ತಿದ್ದು, ಇದನ್ನು ಒಪ್ಪುವುದಿಲ್ಲ. ಆದ್ದರಿಂದ ಗುಲ್ಬರ್ಗ ವಕೀಲರ ಒತ್ತಾಯಕ್ಕೆ ಸರ್ಕಾರ ಮಣಿಯಬಾರದು ಎಂದು ಆಗ್ರಹಿಸಿ ಗುರುವಾರ ನಗರದ ಬಸವೇಶ್ವರ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಈ ವೇಳೆ ಕೊಪ್ಪಳದ ಅನೇಕ ಹಿರಿಯ ವಕೀಲರು ಗುಲ್ಬರ್ಗ ವಕೀಲರ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು. ಈಗಾಗಲೇ ಮುಗಿದು ಹೋಗಿರುವ ವಿಷಯವನ್ನು ಪದೇ ಪದೇ ಕೆದಕಿ ಇಲ್ಲಿನ ನೆಮ್ಮದಿ ಹಾಳು ಮಾಡುವುದು ಒಳ್ಳೆಯದಲ್ಲ. ಇದು ಮುಂದುವರೆದರೆ ನಮ್ಮ ಹೋರಾಟವನ್ನು ತೀವ್ರಗೊಳಿಸಲಾಗುವುದು. ನಾವು ಯಾವುದೇ ಕಾರಣಕ್ಕೂ ಪಕ್ಕದಲ್ಲಿಯೇ ಇರುವ ಧಾರವಾಡ ಹೈಕೋರ್ಟ್ ಪೀಠ ಬಿಟ್ಟು, ಗುರ್ಲ್ಬಕ್ಕೆ ಬರುವ ಪ್ರಶ್ನೆಯೇ ಇಲ್ಲ. ಅದು ಕಾರ್ಯಸಾಧುವಲ್ಲವಾದ್ದರಿಂದ ಸರ್ಕಾರ ಇದಕ್ಕೆ ಮಣೆ ಹಾಕಬಾರದು ಎಂದು ಎಚ್ಚರಿಸಿದರು.
ನ್ಯಾಯಾಲಯಗಳ ಸ್ಥಾಪನೆ ಮಾಡುವುದೆ ನ್ಯಾಯದಾನ ಹತ್ತಿರವಾಗಬೇಕು, ಕಕ್ಷಿದಾರರಿಗೆ ಅನುಕೂಲವಾಗಬೇಕು ಎಂದು. ಆದರೆ, ಇದನ್ನು ಅರ್ಥ ಮಾಡಿಕೊಳ್ಳದ ಗುಲ್ಬರ್ಗ ವಕೀಲರು ಮಾತ್ರ ಸ್ವಾರ್ಥಕ್ಕಾಗಿ ನಮ್ಮನ್ನು ಬೆಂಕಿಗೆ ದೂಡುವ ಹುನ್ನಾರ ನಡೆಸಿದ್ದಾರೆ. ಗುಲ್ಬರ್ಗ ವ್ಯಾಪ್ತಿ ವಿಸ್ತಾರ ಮಾಡುವುದಾದರೆ ಹತ್ತಿರದ ಜಿಲ್ಲೆಗಳನ್ನು ಸೇರಿಸಿಕೊಳ್ಳಬೇಕು. ಅದು ಬಿಟ್ಟು ಈ ರೀತಿ ಮೊಂಡು ವಾದ ಮಾಡಬಾರದು ಎಂದು ಹೇಳಿದರು.
ಸುಮಾರು ಹೊತ್ತು ಹೆದ್ದಾರಿ ಬಂದ್ ಮಾಡಿದ್ದರಿಂದ ಸಂಚಾರಕ್ಕೆ ತೀವ್ರ ಸಮಸ್ಯೆಯಾಯಿತು. ಸಾಲುಗಟ್ಟಿ ವಾಹನಗಳು ನಿಂತಿದ್ದರಿಂದ ಪರಿಸ್ಥಿತಿ ಕೈ ಮೀರುವ ಹಂತ ತಲುಪುತ್ತದೆ ಎಂದು ಅರಿತ ಪೊಲೀಸರು ಪ್ರತಿಭಟನಾಕಾರರಲ್ಲಿ ಮನವಿ ಮಾಡಿಕೊಂಡರು. ಪೊಲೀಸರ ಮನವಿಗೆ ಓಗೊಟ್ಟು ಪ್ರತಿಭಟನೆ ಅಂತ್ಯಗೊಳಿಸಿದರು.
ಹಿರಿಯ ನ್ಯಾಯವಾದಿ ಆರ್.ಬಿ. ಪಾನಘಂಟಿ, ವಿ.ಎಂ. ಭೂಸನೂರುಮಠ, ಆಸಿಫ್ ಅಲಿ, ಪೀರಾಹುಸೇನ ಹೊಸಳ್ಳಿ, ಐ.ವಿ. ಪತ್ತಾರ, ವಕೀಲರ ಸಂಘದ ಉಪಾಧ್ಯಕ್ಷ ಎಚ್.ಎನ್. ಮುತ್ತಿಗಿ ಹಾಗೂ ಕಾರ್ಯದರ್ಶಿ ಆರ್.ವಿ. ಮಠದ ನೇತೃತ್ವ ವಹಿಸಿದ್ದರು. ಪ್ರತಿಭಟನೆಯಲ್ಲಿ ವಕೀಲರ ಸಂಘದ ನೂರಾರು ಸದಸ್ಯರು ಪಾಲ್ಗೊಂಡಿದ್ದರು.