ಸಾಲ ಮರುಪಾವತಿ: ಒತ್ತಡ ಬೇಡ

Updated on: 

ಕುಷ್ಟಗಿ: ರಾಜ್ಯದ ದಾಳಿಂಬೆ ಬೆಳೆಗಾರರ ಸಾಲಮನ್ನಾ ವಿಷಯ ಕುರಿತು ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ದಾಳಿಂಬೆ ಬೆಳೆಗಾಗಿ ವಿವಿಧ ಬ್ಯಾಂಕ್‌ಗಳಿಂದ ಸಾಲ ಪಡೆದ ರೈತರಿಗೆ ಸಾಲ ಮರುಪಾವತಿಗಾಗಿ ಒತ್ತಡ ಹಾಕಬಾರದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಜಿ.ವಿ. ಕೃಷ್ಣರಾವ್ ಜುಲೈ 14ರಂದು ರಾಜ್ಯ ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎಂದು ರಾಜ್ಯ ದಾಳಿಂಬೆ ಬೆಳೆಗಾರರ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಅಬ್ದುಲ್ ನಯೀಮ್ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 13,187 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ದಾಳಿಂಬೆ ಬೆಳೆಗೆ ದುಂಡಾಣು ರೋಗ ತಗುಲಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹದರಲ್ಲಿ ನಿತ್ಯ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್ ಅಧಿಕಾರಿಗಳು ಸಾಲ ಮರುಪಾವತಿಗೆ ಕೋರ್ಟ್‌ನಲ್ಲಿ ದಾವೆ ಹೂಡಿ, ಭೂಮಿ ಹರಾಜಿಗೆ ನೋಟಿಸ್ ಜಾರಿ ಮಾಡಿ ರೈತರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳ ಈ ಒತ್ತಡದಿಂದ ರೈತರು ಸಂಕಷ್ಟಕ್ಕೆ ಸಿಲುಕಿದರೂ ಅಧಿವೇಶದಲ್ಲಿ ಈ ಬಗ್ಗೆ ಚುನಾಯಿತ ಹಾಗೂ ವಿಪಕ್ಷದವರು ಚಕಾರ ಎತ್ತುತ್ತಿಲ್ಲ. ಈ ಭಾಗದ ರೈತರ ದುರದೃಷ್ಟವೇ ಸರಿ ಎಂದು ಜನಪ್ರತಿನಿಧಿಗಳ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.
ಇನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಏಳು ವರ್ಷಗಳಿಂದ ಸತತ ದಾಳಿಂಬೆ ಬೆಳೆಗಾರರ ಸಾಲ ಮತ್ತು ಬಡ್ಡಿ ಮನ್ನಾ ಕುರಿತು ಮನವಿ ಮಾಡುತ್ತಿದ್ದರೂ ಭರವಸೆ ಮಾತ್ರ ಸಿಗುತ್ತಿದೆ. ಆದರೆ ಸಾಲಮನ್ನಾ ಮಾತ್ರ ಆಗುತ್ತಿಲ್ಲ. ಜತೆಗೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ದಾಳಿಂಬೆ ಬೆಳೆಗಾರರ ಸಾಲಮನ್ನಾ ಹೋರಾಟ ಕಾಗದದಲ್ಲಿ ಮಾತ್ರ ಎನ್ನುವಂತಾಗಿದೆ ಎಂದು ರೈತ ಯಲ್ಲಪ್ಪ ಹೊಸೂರ, ತಿಪ್ಪಣ್ಣ ಬುಡಕುಟ್ಟಿ, ಶಿವನಗೌಡ ಪಾಟೀಲ, ಮಾನಪ್ಪ ತಳವಾರ, ದೇವಪ್ಪ ಗಂಗನಾಳ, ಶರಣಪ್ಪ ಕಂದಕೂರ, ಹನುಮಂತಪ್ಪ ಗುರಿಕಾರ ಸರ್ಕಾರದ ವಿಳಂಬ ನೀತಿ ವಿರುದ್ಧ ಅಸಮದಾನ ವ್ಯಕ್ತಪಡಿಸಿದರು.
ಸಾಲಗಾರರಿಗೆ ನೋಟಿಸ್: ಹೊಸೂರು ಗ್ರಾಮದ ರೈತ ಯಲ್ಲಪ್ಪ ಮೇತಗಲ್, ನಿಂಗಪ್ಪ ಮೇತಗಲ್ 2006-07ರಲ್ಲಿ ಕೊಪ್ಪಳದ ಬ್ಯಾಂಕ್ ಆಫ್ ಇಂಡಿಯಾದಲ್ಲಿ ದಾಳಿಂಬೆ ಬೆಳೆಗಾಗಿ ರು. 4 ಲಕ್ಷ ಸಾಲ ಪಡೆದಿದ್ದರು. ಸದ್ಯ ಈ ಸಾಲದ ಮರು ಪಾವತಿ ಮೊತ್ತ ರು. 9,20,375 ಆಗಿದೆ. ಅಲ್ಲದೆ ಜುಲೈ 19ರಂದು ಈ ಕುರಿತು ಕೊಪ್ಪಳದ ಕೋರ್ಟ್‌ಗೆ ಹಾಜರಾಗಬೇಕು ಎಂದು ಬ್ಯಾಂಕ್ ನೋಟಿಸ್ ಜಾರಿಯಾಗಿದೆ ಎಂದು ಸಾಲ ಪಡೆದ ರೈತರು ತಮ್ಮ ಅಳಲು ತೋಡಿಕೊಂಡರು.
ದಾಳಿಂಬೆ ಬೆಳೆಗಾಗಿ ಸಾಲ ಪಡೆದಿದ ರೈತರಿಗೆ ಬ್ಯಾಂಕ್‌ಗಳಿಂದ ಜಾರಿಯಾಗುತ್ತಿರುವ ನೋಟಿಸ್‌ಗಳನ್ನು ಸರ್ಕಾರದ ತೀರ್ಮಾವಾಗುವವರೆಗೆ ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ಅನಾಹುತಕ್ಕೆ ನೋಟಿಸ್ ನೀಡಿದ ಬ್ಯಾಂಕ್‌ಗಳೇ ಜವಾಬ್ದಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com