ಬಾಡಿಗೆಗೆ ಕೃಷಿ ಯಂತ್ರ!

Updated on: 

ಕೊಪ್ಪಳ: ರಂಟೆ ಇಲ್ಲ, ಕುಂಟಿ ಇಲ್ಲ, ಬಿತ್ತುವ ಕೂರಿಗೆ ಇಲ್ಲ, ರೂಟರ್, ಟ್ರ್ಯಾಕ್ಟರ್ ಇಲ್ಲ ಎಂದು ಇನ್ನು ರೈತರು ಪರಿತಪಿಸುವಂತೆಯೇ ಇಲ್ಲ. ನಮ್ಮದು ಚಿಕ್ಕ ಹಿಡುವಳಿಯಾಗಿದ್ದರಿಂದ ಅವುಗಳನ್ನು ಕೊಳ್ಳುವ ಸಾಮರ್ಥ್ಯವೂ ಇಲ್ಲ ಎಂದು ಗೋಳಾಡುವಂತೆಯೂ ಇಲ್ಲ. ಅವುಗಳೆಲ್ಲ ಇನ್ನು ಮುಂದೆ ರಿಯಾಯತಿ ದರದಲ್ಲಿ ಬಾಡಿಗೆ ಸಿಗುತ್ತವೆ. ಅದಕ್ಕಾಗಿ ಹೋಬಳಿ ಪ್ರದೇಶದಲ್ಲಿ ಸರ್ಕಾರವೇ ಖಾಸಗಿ ಸಂಸ್ಥೆಯ ಸಹಯೋಗದಲ್ಲಿ ಕೃಷಿ ಯಂತ್ರೋಪಕರಣಗಳ ಬಾಡಿಗೆ ಸೇವಾ ಕೇಂದ್ರಗಳನ್ನು ಪ್ರಸಕ್ತ ವರ್ಷದಿಂದಲೇ ತೆರೆಯಲಿದೆ.
ಇದಕ್ಕಾಗಿ ತಗುಲುವ ವೆಚ್ಚದ ಶೇ. 75ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ನೀಡಿದರೆ ಬಾಡಿಗೆ ಸೇವಾ ಕೇಂದ್ರ ತೆರೆಯುವ ಸಂಸ್ಥೆ ಶೇ. 25ರಷ್ಟು ಹೂಡಿಕೆ ಮಾಡಬೇಕು. ಬರುವ ಬಾಡಿಗೆಯನ್ನು ಸೇವಾ ಕೇಂದ್ರದ ಪ್ರಗತಿಗೆ ಬಳಕೆ ಮಾಡಿಕೊಳ್ಳಬೇಕು. ಈ ಕುರಿತು ಶ್ರೀ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಸ್ಥೆಯೊಂದಿಗೆ ಒಡಂಬಡಿಕೆಯೂ ಆಗಿದೆ.
ರಾಜ್ಯದಲ್ಲಿ ಮೊದಲ ಹಂತವಾಗಿ 25 ಜಿಲ್ಲೆಗಳ 161 ಹೋಬಳಿ ಕೇಂದ್ರಗಳಲ್ಲಿ ಈ ಬಾಡಿಗೆ ಸೇವಾ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ.  ಪ್ರಾರಂಭದಲ್ಲಿ ಪ್ರತಿ ತಾಲೂಕಿನ ಒಂದು ಹೋಬಳಿಯಲ್ಲಿ ಪ್ರಾರಂಭವಾಗುವ ಈ ಕೇಂದ್ರಗಳು ಹಂತ ಹಂತವಾಗಿ ಎಲ್ಲ ಹೋಬಳಿ ಕೇಂದ್ರಗಳಲ್ಲಿ ತಲೆ ಎತ್ತುತ್ತವೆ.
ಸ್ಥಳೀಯವಾಗಿ ಸಮಿತಿ: ಇದಕ್ಕಾಗಿ ಸಂಸ್ಥೆಯ ಪ್ರತಿನಿಧಿಯನ್ನೊಳಗೊಂಡು ಆ ಪ್ರದೇಶವಾರು ಸಮಿತಿಗಳನ್ನು ರಚನೆ ಮಾಡಲಾಗುತ್ತದೆ. ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಅಧ್ಯಕ್ಷರಾಗಿರುತ್ತಾರೆ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಕಾರ್ಯದರ್ಶಿಗಳಾಗಿರುತ್ತಾರೆ.
ಇನ್ನು ತಾಲೂಕು ಕೃಷಿ ಅಧಿಕಾರಿಗಳು ಹಾಗೂ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳು ಸಮಿತಿಯಲ್ಲಿ ಇರುತ್ತಾರೆ. ಅವರು ಆಯಾ ಪ್ರಾದೇಶಿಕ ಅವಶ್ಯಕತೆಯನ್ನು ಅವಲಂಬಿಸಿ ಹಾಗೂ ಅಗತ್ಯ,    ಬೇಡಿಕೆಗೆ ಅನುಗುಣವಾಗಿ ಯಂತ್ರೋಪಕರಣಗಳನ್ನು ಖರೀದಿಸಬೇಕು. ಬಾಡಿಗೆಯನ್ನು ಮೊದಲ ಬಂದವರಿಗೆ ಮೊದಲ ಆದ್ಯತೆಯ ಮೇಲೆ ನೀಡಬೇಕು.
ಸಿಬ್ಬಂದಿ ನೇಮಕ: ಸೇವಾ ಕೇಂದ್ರದಲ್ಲಿ ಯಂತ್ರೋಪಕರಣ ಆಪರೇಟರ್ ಮಾಡಲು ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು. ಅದರ ಖರ್ಚು-ವೆಚ್ಚವನ್ನು ಬಾಡಿಗೆಯಲ್ಲಿಯೇ ಭರಿಸಿಕೊಳ್ಳಬೇಕು. ಇನ್ನು ಸೇವಾ ಕೇಂದ್ರದಲ್ಲಿ ಅಗತ್ಯ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಹೊಣೆಯೂ ಸಮಿತಿಗೆ ಇರುತ್ತದೆ.
ದರಪಟ್ಟಿಯನ್ನು ಮೊದಲೇ ನಿಗದಿ ಮಾಡಬೇಕು ಮತ್ತು ಇದು ಸಾಮಾನ್ಯ ಹಿಡುವಳಿದಾರರಿಗೆ ಅನ್ವಯವಾಗುತ್ತದೆ. ಆದರೆ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಇದಕ್ಕಿಂತ ಕಡಿಮೆ ಬಾಡಿಗೆ ದರ ನಿಗದಿ ಮಾಡಬೇಕು ಮತ್ತು ಬಾಡಿಗೆ ನೀಡುವ ವೇಳೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆದ್ಯತೆ ನೀಡಬೇಕಾದರೂ ಮೊದಲ ಬಂದವರಿಗೆ ಮೊದಲ ಆದ್ಯತೆಯನ್ನು ಇದರಲ್ಲಿ ಅನುಸರಿಸಬೇಕು.
-ಸೋಮರಡ್ಡಿ ಅಳವಂಡಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com