ಇಲಾಖೆಗೆ ಜನತೆ ಸಹಕಾರ ಅಗತ್ಯ

Updated on: 

ಕುಷ್ಟಗಿ: ಅತ್ಯಾಚಾರ, ಕಳ್ಳತನ, ಮಹಿಳೆಯರ ಮೇಲಿನ ದೌರ್ಜನ್ಯಗಳಂತ ಪ್ರಕರಣಗಳನ್ನು ಪತ್ತೆ ಮಾಡಲು, ಇಂತಹ ಕೃತ್ಯಗಳಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಲು ಇಲಾಖೆಗೆ ಸಾರ್ವಜನಿಕರಿಂದ ಮಾಹಿತಿ ಹಾಗೂ ತನಿಖೆ ವೇಳೆ ಸಹಕಾರ ನೀಡುವುದು ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿ ಕಟೋಚ್ ಸಪೆಡ್ ಹೇಳಿದರು.
ಮಂಗಳವಾರ ಇಲ್ಲಿನ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕಣಗಳನ್ನು ತಡೆಗಟ್ಟಲು ಸರ್ಕಾರ ಎಲ್ಲ ಮುಂಜಾಗ್ರತೆ ಕ್ರಮ ಅನುಸರಿಸುತ್ತಿದೆ. ಜತೆಗೆ ಇಂತಹ ಪ್ರಕರಣಗಳು ಜಿಲ್ಲೆ, ತಾಲೂಕು, ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಸಹ ನಡೆಯದಂತೆ ಸ್ಥಳೀಯ ಹಾಗೂ ಜಿಲ್ಲಾ ಮಟ್ಟದ ಪೊಲೀಸ್ ಇಲಾಖೆ ಜಾಗ್ರತೆಯಿಂದ ಕರ್ತವ್ಯ ನಿರ್ವಹಿಸುತ್ತದೆ, ಹೀಗಾಗಿ ಸಾರ್ವಜನಿಕರು ಅತಂಕಪಡುವ ಅಗತ್ಯವಿಲ್ಲ ಎಂದರು.
ಇಂತಹ ಪ್ರಕರಣಗಳನ್ನು ತಡೆಗಟ್ಟಲು, ಮಹಿಳೆಯರ ರಕ್ಷಣೆಗಾಗಿ ಎಸ್ಪಿ ಕಚೇರಿಯಲ್ಲಿ ಮಹಿಳಾ ಸಹಾಯವಾಣಿ ಕೇಂದ್ರ ತೆರೆಯಲಾಗುವುದು. 1091ಕ್ಕೆ ಮಹಿಳೆಯರ ಸಮಸ್ಯೆಗಳ ಕುರಿತು ಕರೆ ಮಾಡಬೇಕು. ಅಂತವರ ಹೆಸರನ್ನು ಗೌಪ್ಯವಾಗಿ ಇರಿಸಲಾಗುವುದು. ಹಾಗಾಗಿ ಜಿಲ್ಲೆಯ ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಸಹಾಯ ಕುರಿತು ಇಲ್ಲಿಗೆ ಕರೆ ಮಾಡಬಹುದು ಎಂದರು.
ಪೊಲೀಸರು ತನಿಖೆ ಮಾಡುವಲ್ಲಿ ವಿಳಂಬ ಮಾಡಿದರೆ ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತನ್ನಿ. ಪೊಲೀಸರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿ ಕರ್ತವ್ಯ ನಿರ್ವಹಿಸಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ತಿಳಿ ಹೇಳಿದರು.
ವೃತ್ತ ನಿರೀಕ್ಷಕ ಆರ್.ಎಸ್. ಉಜ್ಜನಕೊಪ್ಪ ಪ್ರಾಸ್ತಾವಿಕ ಮಾತನಾಡಿದರು. ತಾಲೂಕಿನ ವಿವಿಧ ಶಾಲೆ, ಕಾಲೇಜುಗಳ ಶಿಕ್ಷಕರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಜನಸ್ಪಂದನೆ ಸಭೆಯಲ್ಲಿ ಭಾಗವಹಿಸಿದ್ದರು. ಬಿಇಒ ಸಿ.ಬಿ. ಮ್ಯಾಗೇರಿ, ನಿವೃತ್ತ ಪೊಲೀಸ್ ಅಧಿಕಾರಿ ಸಿದ್ದಯ್ಯಸ್ವಾಮಿ ಹಿರೇಮಠ, ಪಿಎಸ್‌ಐ ರಾಮಚಂದ್ರ ಬಳ್ಳಾರಿ ಇದ್ದರು. ಶಿಕ್ಷಕ ನಟರಾಜ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com