ಕನ್ನಡಪ್ರಭ ವಾರ್ತೆ, ಕೊಪ್ಪಳ, ಜು. 24
ಗ್ರಾಮದಲ್ಲಿ ಮೇಲ್ವರ್ಗದವರ ದೌರ್ಜನ್ಯದಿಂದ ನಾವು ಬೇಸತ್ತು ಹೋಗಿದ್ದೇವೆ. ಇಂದಿಗೂ ದಲಿತರಿಗೆ ಕ್ಷೌರದಂಗಡಿಯಲ್ಲಿ ಪ್ರವೇಶ ಇಲ್ಲ. ನಮ್ಮನ್ನು ಒಂದು ರೀತಿ ಪಶುಗಳಂತೆ ಕಾಣುತ್ತಿರುವುದರಿಂದ ನಮ್ಮನ್ನು ಪಾರು ಮಾಡಿ. ನಮಗೂ ಎಲ್ಲರಂತೆ ಬದುಕುವ ಅವಕಾಶ ನೀಡಿ. ನಮ್ಮದಲ್ಲದ ತಪ್ಪಿಗೆ ನಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಕಡಿವಾಣ ಹಾಕಿ.
ಇದು ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮಸ್ಥರ ಆಗ್ರಹ. ಗ್ರಾಮದಿಂದ ಪಾದಯಾತ್ರೆ ಮೂಲಕ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ದಲಿತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಪ್ರಾರಂಭಿಸಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದ್ದಾರೆ.
ಮಧ್ಯಪ್ರವೇಶ ಮಾಡಿದ ಜಿಲ್ಲಾಡಳಿತ ಶಾಂತಿ ಸಭೆ ನಡೆಸುವ ಭರವಸೆ ನೀಡಿದರೂ ಅದಕ್ಕೆ ಪ್ರತಿಭಟನಕಾರರು ಜಗ್ಗಲಿಲ್ಲ. ಈಗಾಗಲೇ ಅಂಥ ಸಭೆಗಳನ್ನು ಮಾಡಲಾಗಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸಂಧಾನ, ಶಾಂತಿ ಸಭೆ ಬೇಡ, ಶಾಂತಿ ಸಭೆ ಮಾಡಲೇಬೇಕು ಎಂದಾದರೆ ಕೊಪ್ಪಳದಲ್ಲಿಯೇ ಮಾಡಿ, ಅವರನ್ನು ಕರೆಸಿ ಎಂದೆಲ್ಲ ಆಗ್ರಹಿಸಿದರು. ನಮ್ಮ ಬೇಡಿಕೆಗಳು ನ್ಯಾಯಯುತವಾಗಿರುವುದರಿಂದ ಜಿಲ್ಲಾಡಳಿತ ಈಡೇರಿಸಬೇಕು ಎಂದು ಒತ್ತಾಯಿಸಿದರು.
ದಲಿತರ ಮೇಲೆ ದೌರ್ಜನ್ಯ ಮಾಡಿದ ಮೇಲ್ವರ್ಗದವರನ್ನು ಬಂಧಿಸಬೇಕು. ಗ್ರಾಮದಲ್ಲಿ ಮುಚ್ಚಿರುವ ಕ್ಷೌರದಂಗಡಿ ತೆರೆಯಬೇಕು ಮತ್ತು ಅಲ್ಲಿ ದಲಿತರಿಗೂ ಪ್ರವೇಶ ನೀಡಬೇಕು. ನಮಗೆ ಬೆಂಬಲ ನೀಡಿದರು ಎನ್ನುವ ಕಾರಣಕ್ಕೆ ಗಂಗಾಧರಸ್ವಾಮಿ ಅವರ ಅಂಗಡಿಯನ್ನೇ ತೆರವು ಮಾಡುವ ಕ್ರಮಕ್ಕೆ ತಡೆ ಹಾಕಬೇಕು. ದಲಿತರ ಮೇಲೆ ಹೇರಲಾಗಿರುವ ಅಘೋಷಿತ ಬಹಿಷ್ಕಾರ ತೆರವು ಮಾಡಿಸಬೇಕು ಹಾಗೂ ನಮ್ಮ ಇತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಸಿಪಿಐಎಂ ಸಹಯೋಗದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ತಾಲೂಕು ಕಾರ್ಯದರ್ಶಿ ಹುಲಗಪ್ಪ, ಜಿಲ್ಲಾ ಕಾರ್ಯದರ್ಶಿ ಜಿ. ನಾಗರಾಜ, ಎಂ. ಬಸವರಾಜ, ಗ್ರಾಪಂ ಅಧ್ಯಕ್ಷೆ ಈರಮ್ಮ ನೇತೃತ್ವ ವಹಿಸಿದ್ದರು.