ಟಿಬಿ ಡ್ಯಾಂಗೆ 75 ಸಾವಿರ ಕ್ಯುಸೆಕ್ ನೀರು

Updated on: 

ಕನ್ನಡಪ್ರಭ ವಾರ್ತೆ, ಮುನಿರಾಬಾದ್, ಜು. 24
ಹೈದರಾಬಾದ್ ಕರ್ನಾಟಕದ ರೈತರ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಗುರುವಾರ ಸುಮಾರು 75 ಸಾವಿರ ಕ್ಯುಸೆಕ್ ನೀರು ಹರಿದು ಬಂದಿದೆ. ಪ್ರಸಕ್ತ ಸಾಲಿನಲ್ಲಿ ಜಲಾಶಯಕ್ಕೆ ಹರಿದು ಬಂದ ಅತ್ಯಧಿಕ ಪ್ರಮಾಣದ ನೀರಿನ ಒಳಹರಿವು ಇದಾಗಿದೆ.
ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದೆ ಪ್ರಮಾಣದಲ್ಲಿ ನೀರಿನ ಒಳಹರಿವು ಮುಂದುವರಿದರೆ ಜಲಾಶಯ ಇನ್ನು ಒಂದು ವಾರದಲ್ಲಿ ಸಂಪೂರ್ಣ ಭರ್ತಿಯಾಗಲಿದೆ ಎಂದು ತುಂಗಭದ್ರಾ ಮಂಡಳಿ ಕಾರ್ಯದರ್ಶಿ ರಂಗಾರೆಡ್ಡಿ ಅವರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಗುರುವಾರ ಜಲಾಶಯದಲ್ಲಿ ಸುಮಾರು 51 ಟಿಎಂಸಿಯಷ್ಟು ನೀರು ಶೇಖರಣೆಯಾಗಿದ್ದು, ನೀರಿನ ಮಟ್ಟ ಸುಮಾರು 1,617 ಅಡಿಗಳಷ್ಟಿದೆ. ಜಲಾಶಯದಲ್ಲಿ ಈಗ ನೀರಿನ ಪರಿಸ್ಥಿತಿ ಆಶಾದಾಯಕವಾಗಿದೆ. ಒಂದು ಹಂತದಲ್ಲಿ ಜಲಾಶಯದಲ್ಲಿ ನೀರಿನ ಶೇಖರಣೆ ತುಂಬ ಕಡಿಮೆಯಾಗಿ, ಆತಂಕ ಉಂಟಾಗಿತ್ತು. ಆದರೆ ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದ ಅಧಿಕಾರಿಗಳು, ರೈತರು ನಿಟ್ಟುಸಿರು ಬಿಡುವಂತಾಗಿದೆ ಎಂದು ರಂಗಾ ರೆಡ್ಡಿ ವಿವರಿಸಿದ್ದಾರೆ.
ಕಾಲುವೆಗಳಿಗೆ ನೀರು: ಪ್ರಸಕ್ತ ಸಾಲಿನಲ್ಲಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಆಧುನಿಕರಣ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಆಗಸ್ಟ್ ಮೊದಲ ವಾರದಲ್ಲಿ ನೀರು ಹರಿಸಲಾಗುವುದು. ಬಳ್ಳಾರಿ ನಗರಕ್ಕೆ ಕುಡಿಯುವ ನೀರು ಒದಗಿಸುವ ಹಿನ್ನೆಲೆಯಲ್ಲಿ ಬಲದಂಡೆ ಮೇಲ್ಮಟ್ಟದ ಕಾಲುವೆ (ಎಚ್‌ಎಲ್‌ಸಿ ಕಾಲುವೆ) ಮೂಲಕ ನೀರು ಹರಿಸಲಾಗಿದೆ ಹಾಗೂ ಕಾಲುವೆಗೆ ನೀರು ಹರಿಸುವಂತೆ ಕಂಪ್ಲಿ, ಸಿರುಗುಪ್ಪ ಭಾಗದ ರೈತರಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಬಲದಂಡೆ ಕೆಳಮಟ್ಟದ ಕಾಲುವೆಯಲ್ಲಿ (ಎಲ್‌ಎಲ್‌ಸಿ) ನೀರು ಹರಿಸಲಾಗಿದೆ ಎಂದು ತುಂಗಭದ್ರಾ ಮಂಡಳಿ ಕಾರ್ಯದರ್ಶಿ ರಂಗಾ ರೆಡ್ಡಿ ತಿಳಿಸಿದ್ದಾರೆ.

ಆ. 2ರಿಂದ ನೀರಾವರಿ ಸಲಹಾ ಸಮಿತಿ ಸಭೆ
ಆಗಸ್ಟ್ 2ರಂದು ಮುನಿರಾಬಾದಿನ ಕಾಡಾ ಸಭಾಂಗಣದಲ್ಲಿ ನೀರಾವರಿ ಸಲಹ ಸಮಿತಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ತುಂಗಭಧ್ರಾ ಜಲಾಶಯದ ಎಡದಂಡೆ ಮುಖ್ಯ ಕಾಲುವೆ, ಬಲದಂಡೆ ಕೆಳಮಟ್ಟದ ಹಾಗೂ ಮೇಲ್ಮಟ್ಟದ ಕಾಲುವೆ ಮತ್ತು ರಾಯ ಹಾಗೂ ಬಸವಣ್ಣ ಕಾಲುವೆಯಲ್ಲಿ 2014ರ ಸಾಲಿನ ಮುಂಗಾರು ಬೆಳೆಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ತೀರ್ಮಾನಿಸಲಾಗುವುದು ಎಂದು ನೀರಾವರಿ ಇಲಾಖೆ ಮೂಲಗಳಿಂದ ಮಾಹಿತ ಲಭ್ಯವಾಗಿದೆ.
ಸಭೆಯಲ್ಲಿ ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಸಂಸದರು ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com