ಯಲಬುರ್ಗಾ: ಕೃಷಿಗೆ ರಾಸಾಯನಿಕ ಅವಲಂಬನೆ ಸರಿಯಾದ ಕ್ರಮ ಅಲ್ಲ, ಸಾವಯವ ಕೃಷಿಯ ಮೂಲಕ ಉತ್ತಮ ಇಳುವರಿ ನಿರೀಕ್ಷಿಸಬಹುದಾಗಿದೆ. ಸರ್ಕಾರ ಸಾವಯವ ಕೃಷಿಗೆ ಉತ್ತೇಜನ ನೀಡುತ್ತಿದ್ದು, ರೈತರು ಇದರ ಪ್ರಯೋಜನೆ ಪಡೆದುಕೊಳ್ಳಬೇಕು ಎಂದು ಯಲಬುರ್ಗಾ ರೈತ ಸಂಪರ್ಕ ಕೇಂದ್ರದ ಅಧಿಕಾರಿ ರಾಘವೇಂದ್ರ ಜಾಧವ ಹೇಳಿದರು.
ತಾಲೂಕಿನ ವಜ್ರಬಂಡಿ ಗ್ರಾಮದಲ್ಲಿ ಭೂ ಚೇತನ ಯೋಜನೆಯಡಿಯಲ್ಲಿ ಶನಿವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಮಿಶ್ರ ಬೇಸಾಯದತ್ತ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳುವುದರ ಜೊತೆಗೆ ವ್ಯವಸಾಯ ಪದ್ಧತಿಯಲ್ಲಿ ಹೊಸ ತಂತ್ರಜ್ಞಾನ ಬಳಕೆಯಿಂದ ಹೆಚ್ಚು ಇಳುವರಿ ಪಡೆಯಲು ಸಾಧ್ಯವಿದೆ ಎಂದರು. ಗ್ರಾಪಂ ಅಧ್ಯಕ್ಷ ಶರಣಪ್ಪ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ತಾಂತ್ರಿಕ ಅಧಿಕಾರಿ ಶಿವಪ್ಪ ನಾಯಕ, ಗುಂಡನಗೌಡ ಪಾಟೀಲ, ಮೈಲಾರಪ್ಪ ಕೊಳ್ಳಿ, ಕಲ್ಲಪ್ಪ ಕರಿಗೌಡ, ಈರಪ್ಪ ಕಮ್ಮಾರ, ಶರಣಪ್ಪ ಖಾನಾವಳಿ, ಯಲ್ಲುಸಾ ರಾಚೋಳಿ, ಮಾರುತಿ ಅಪ್ಪಣ್ಣ ಇದ್ದರು.