ಏತ ನೀರಾವರಿ ಶೀಘ್ರ ಪೂರ್ಣ

Updated on: 

ಕನ್ನಡಪ್ರಭ ವಾರ್ತೆ, ಕೊಪ್ಪಳ, ಜೂ. 16
ತಾಲೂಕಿನ ಸುಮಾರು 30 ಗ್ರಾಮಗಳ 41,000 ಎಕರೆ ಜಮೀನಿಗೆ ನೀರಾವರಿ ಒದಗಿಸುವ ಸಿಂಗಟಾಲೂರು ಏತ ನೀರಾವರಿ ಯೋಜನೆ ಕಾಮಗಾರಿ 2015ರ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕಿನ ಕವಲೂರು ಗ್ರಾಮದ ಬಳಿ ಸೋಮವಾರ ಸಿಂಗಟಾಲೂರು ಏತ ನೀರಾವರಿ ಯೋಜನೆ ಎಡದಂಡೆ ಕಾಲುವೆ ಕಾಮಗಾರಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರಿಗಳೊಂದಿಗೆ ಖುದ್ದಾಗಿ ಮುಂಡರಗಿ ತಾಲೂಕು ಹಮ್ಮಿಗಿ ಗ್ರಾಮದ ಬಳಿಯ ಅಣೆಕಟ್ಟಿನ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಲಾಗಿದೆ. ಕೊಪ್ಪಳ ತಾಲೂಕಿನತ್ತ ಬರುವ ಎಡದಂಡೆ ಕಾಲುವೆ ಕಾಮಗಾರಿ ಇದೀಗ ವೇಗ ಪಡೆದುಕೊಂಡಿದ್ದು, ಭರದಿಂದ ಸಾಗುತ್ತಿದೆ. ಅಣೆಕಟ್ಟಿನಿಂದ 33 ಕಿ.ಮೀ. ಕಾಲುವೆ ವರೆಗಿನ ರು. 64 ಕೋಟಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೆ 277 ಎಕರೆ ಭೂ ಸ್ವಾಧೀನ ಪೂರ್ಣಗೊಂಡಿದೆ. ಇದೇ ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
33ರಿಂದ 42 ಕಿ.ಮೀ. ವರೆಗಿನ ಕಾಮಗಾರಿಗೆ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಗೊಂಡಿದೆ. ಅದೇ ರೀತಿ 42ರಿಂದ 50 ಕಿ.ಮೀ. ವರೆಗಿನ ರು. 14.97 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್ ಆಗಿದೆ. 50ರಿಂದ 51 ಕಿ.ಮೀ. ವರೆಗಿನ ರು. 5.65 ಕೋಟಿ ಕಾಮಗಾರಿ ಹಾಗೂ 52ರಿಂದ 72 ಕಿ.ಮೀ. ವರೆಗಿನ ರು. 39 ಕೋಟಿ ವೆಚ್ಚದ ಕಾಮಗಾರಿಗೆ ಜೂ. 18ಕ್ಕೆ ಟೆಂಡರ್ ನಡೆದು ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ. ಕಾಮಗಾರಿ ತ್ವರಿತ ಕೈಗೊಳ್ಳಲು ಇರುವ ಎಲ್ಲ ಅಡ್ಡಿ ಆತಂಕ ನಿವಾರಿಸಿದ್ದು, ಅನುದಾನಕ್ಕೆ ಯಾವುದೇ ಕೊರತೆ ಬಾರದಂತೆ ಕ್ರಮ ಕೈಗೊಳ್ಳಲಾಗಿದೆ. ಒಟ್ಟಾರೆ 2015ರ ಮಾರ್ಚ್ ವೇಳೆಗೆ ಯೋಜನೆಯ ಎಲ್ಲ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.
ಏತನೀರಾವರಿ ಯೋಜನೆಯಲ್ಲಿ ಹೊಸದಾಗಿ ಕೆರೆಗಳನ್ನು ಸಹ ತುಂಬುವ ಯೋಜನೆ ಹಾಕಿಕೊಳ್ಳಲಾಗಿದ್ದು, ಈ ಭಾಗದ ಸುಮಾರು 4ರಿಂದ 5 ಕೆರೆಗಳನ್ನು ತುಂಬಬಹುದು. ಈ ಪ್ರದೇಶದಲ್ಲಿ ಒಣ ಬೇಸಾಯ ಇರುವುದರಿಂದ ರೈತರಿಗೆ ಅನುಕೂಲವಾಗಲಿದ್ದು, ಅಂತರ್ಜಲವೂ ಹೆಚ್ಚಳವಾಗಲು ಸಹಾಯಕಾರಿ ಆಗಲಿದೆ ಎಂದು ಹೇಳಿದರು.
ಜನಸಂಪರ್ಕ ಕಾರ್ಯಕ್ರಮ: ಸಾರ್ವಜನಿಕರ ಕುಂದುಕೊರತೆ, ಅಹವಾಲು ಸ್ವೀಕರಿಸುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರದಲ್ಲಿ ಜನಸಂಪರ್ಕ ಕಾರ್ಯಕ್ರಮ ಆಯೋಜಿಸಬೇಕೆನ್ನುವುದು ಬಹುದಿನಗಳ ಬೇಡಿಕೆಯಾಗಿದೆ. ವಿಧಾನಪರಿಷತ್ ಚುನಾವಣೆ ನೀತಿಸಂಹಿತೆ ಕಾರಣದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯವಾಗಿಲ್ಲ. ನೀತಿಸಂಹಿತೆ ತೆರವಾದ ಕೂಡಲೆ ಜನಸಂಪರ್ಕ ಕಾರ್ಯಕ್ರಮ ಹಮ್ಮಿಕೊಳ್ಳಲು ಎಲ್ಲ ಕ್ರಮ ಕೈಗೊಳ್ಳಲಾಗುವುದು. ಅನ್ನಭಾಗ್ಯ ಯೋಜನೆ ಅನುಷ್ಠಾನದಲ್ಲಿ ಉಂಟಾಗುತ್ತಿರುವ ಸಣ್ಣಪುಟ್ಟ ಲೋಪದೋಷಗಳನ್ನು ನಿವಾರಿಸಿ, ಅಕ್ರಮಗಳಿಗೆ ಕಡಿವಾಣ ಹಾಕಲು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಂಗಡಗಿ ಹೇಳಿದರು.
ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಸಿಂಗಟಾಲೂರು ಏತನೀರಾವರಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ರೈತರಿಗೆ ನೀರು ಒದಗಿಸಬೇಕೆನ್ನುವುದು ಸರ್ಕಾರದ ಆಶಯ. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಯೋಜನೆಯ ಅನುಷ್ಠಾನದಲ್ಲಿ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ಸಿಂಗಟಾಲೂರು ಏತನೀರಾವರಿ ಯೋಜನೆಯ ಎಇ ಗಂಗಪ್ಪ, ಉಪ ವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ವಿವಿಧ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com