ಕೊಪ್ಪಳ: ಉದ್ಯೋಗ ಖ್ಯಾತ್ರಿ ಯೋಜನೆಯಡಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಹಣ ಪಾವತಿ ಮಾಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಪ್ರಾರಂಭಿಸಿತು.
2014-15ನೇ ಸಾಲಿನಲ್ಲಿ ಮತ್ತು ಕಳೆದ ವರ್ಷದಲ್ಲಿ ಖಾತ್ರಿ ಅನುದಾನ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರದ ವಿಳಂಬ ನೀತಿಗೆ ಆಕ್ರೋಶ ವ್ಯಕ್ತಪಡಿಸಿತಲ್ಲದೇ, ಜಿಲ್ಲೆಯ ಕೂಲಿ ಕಾರ್ಮಿಕರಿಗೆ ಮೂರು ತಿಂಗಳಿಂದ ಉದ್ಯೋಗ ಖಾತ್ರಿ ಹಣ ಪಾವತಿಯಾಗದ ಕಾರಣ ಗುಳೆ ಹೋಗುತ್ತಿದ್ದಾರೆ. ಹೀಗಾಗಿ ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯ ಮಾಡಿದರು.
ಇನ್ನು ಜಿಲ್ಲೆಯಲ್ಲಿ ಮನೆ, ನಿವೇಶನ ಕೋರಿ ಸಲ್ಲಿಸಿದ ಸಾವಿರಾರು ಅರ್ಜಿಗಳು ಕಳೆದೆರಡು ವರ್ಷದಿಂದ ವಿಲೇವಾರಿಯಾಗಿಲ್ಲ. ಹೀಗಾಗಿ ಜನ ಮನೆ, ನಿವೇಶನದ ಆಸೆ ಹೊತ್ತು ನಿತ್ಯ ಇಲಾಖೆಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದು ಒತ್ತಾಯಿಸಿದರು.
ಕಾಯಕ ಬಂಧು ಭತ್ಯೆ ಕೊಡಬೇಕು, ತಾಲೂಕಿನ ಚಿಕ್ಕ ಮ್ಯಾಗೇರಿ ಗ್ರಾಪಂ ಅಧಿಕಾರಿ, ಹರ್ಲಾಪೂರ ಗ್ರಾಪಂ ಕಾರ್ಯದರ್ಶಿ ಸಾರ್ವಜನಿಕರ ಮತ್ತು ಸದಸ್ಯರ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದು ಅವರನ್ನು ಅಮಾನತು ಮಾಡಬೇಕು ಎಂದು ಜಿಪಂ ಸಿಇಒ ಅವರಿಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ಅಧ್ಯಕ್ಷ ಜಿ. ನಾಗರಾಜ, ಕಾರ್ಯದರ್ಶಿ ಗವಿಸಿದ್ದಪ್ಪ ಗಡಾದ, ಸುಂಕಪ್ಪ ಗದಗ, ಜಿ.ಬಸವರಾಜ, ಕೆ. ಅಡಿವೆಪ್ಪ, ಲಕ್ಷ್ಮೀಬಾಯಿ, ಸರೋಜಾ, ಮುದುಕಪ್ಪ, ಸುನಿತಾ ಮತ್ತಿತರರು ಇದ್ದರು.