ಕೊಪ್ಪಳ: ಈಚೆಗೆ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಪ್ರಶ್ನೆ ಪತ್ರಿಕೆ ಲಕ್ಷಾಂತರ ರುಪಾಯಿಗೆ ಮಾರಾಟವಾಗಿದ್ದು, ಮಾರಾಟದ ಜಾಲಾ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಿನ್ನಡೆಯಾಗಲಿದೆ. ಕೂಡಲೇ ಟಿಇಟಿ ಮರು ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿ ಎಸ್ಎಫ್ಐ ಜಿಲ್ಲಾ ಸಮಿತಿ ಈಚೆಗೆ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿತು.
ಪ್ರಶ್ನೆಪತ್ರಿಕೆ ಮಾರಾಟ ಮಾಡಿದ ವ್ಯಕ್ತಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದು ಸ್ವಾಗತ. ಟಿಇಟಿ ಪರೀಕ್ಷೆಗೆ ತಯಾರಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಇಲ್ಲಿ ತುಂಬಾ ಅನ್ಯಾಯವಾಗಿದ್ದು, ಪ್ರಶ್ನೆ ಪತ್ರಿಕೆ ಲಕ್ಷಾಂತರ ರುಪಾಯಿಗೆ ಮಾರಾಟವಾಗಿದ್ದಕ್ಕೆ ಸಂಘಟನೆ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಕೆಲ ಇಲಾಖೆಯ ಮತ್ತು ಅಧಿಕಾರಿಗಳ ಕೈವಾಡವಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಪ್ರಶ್ನೆಪತ್ರಿಕೆ ಬಹಿರಂಗದಿಂದ ಕೆಲವು ವಿದ್ಯಾರ್ಥಿಗಳು ಆತಂಕಗೊಂಡಿದ್ದು, ಕೂಡಲೇ ಮರು ಪರೀಕ್ಷೆ ನಡೆಸಬೇಕು ಎಂದು ಎಸ್ಎಫ್ಐ ಜಿಲ್ಲಾ ಸಮಿತಿ ಒತ್ತಾಯಿಸಿ ಪ್ರತಿಕೃತಿ ದಹನ ಮಾಡಿತು. ಅಮರೇಶ ಕಡಗದ, ಬಾಳಪ್ಪ ಹುಲಿಹೈದರ್, ಸುಭಾನ್ ಸೈಯದ್, ಗ್ಯಾನೇಶ್ ಕಡಗದ,ಪರಶುರಾಮ ರಾಠೋಡ, ಅಮರೇಶ ಕುರಿ, ಮರಿನಾಗಪ್ಪ, ಉಮೇಶ್ ರಾಠೋಡ್, ಶಿವುಕುಮಾರ, ಮಾರುತಿ ಮ್ಯಾಗಳಮನಿ, ಹನಮಯ್ಯ, ಸೈಯದ್, ಹನುಮಂತ ಮುಂಕಪಿ ಇದ್ದರು.