ಸ್ವಾಮಿ ವಿವೇಕಾನಂದ ಜಯಂತಿ

Updated on: 

ಹಲಗೂರು: ಸಮೀಪದ ಮಾರಗೌಡನಹಲ್ಳಿಯ ಸರ್ಕಾರಿ ಪ್ರೌಢಶಾಲಾ ಅವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಲಗೂರು ಹೋಬಳಿ ಘಟಕ ಹಾಗೂ ಎಂ.ಜಿ. ಹಳ್ಳಿ ಸರ್ಕಾರಿ ಪ್ರೌಢಶಾಲೆ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ನೇತಾಜಿ ಸುಭಾಷ್‌ಚಂದ್ರ ಬೋಸ್ ಜಯಂತಿ ಆಚರಿಸಲಾಯಿತು. ನಿವೃತ್ತ ಶಿಕ್ಷಕ ನಾಗೇಗೌಡರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರವರು ಧೀರ ಸನ್ಯಾಸಿಯಾಗಿದ್ದರು ಎಂದು ಶ್ಲಾಘಿಸಿದರು. ಮಳವಳ್ಳ ಶಾಂತಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎನ್.ಜೆ. ಅನಿಲ್‌ಕುಮಾರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಹಲಗೂರಿನ ಜೆ.ಜೆ. ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಕೆ.ಎಸ್. ಯಶವಂತ್ ವಿವೇಕಾನಂದರ ವೇಷ ಧರಿಸಿ ಗಮನ ಸೆಳೆದ. ಅದೇ ಶಾಲೆಯ ಕೆ. ಹೇಮಂತ್‌ಗೌಡ, ಸುಭಾಷ್‌ಚಂದ್ರ ಬೋಸ್ ವೇಷ ಧರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ. ಹಲಗೂರಿನ ಎಸ್. ಜಿ. ಕಾನ್ವೆಂಟ್‌ನ ವಿದ್ಯಾರ್ಥಿನಿ ಚೇತನ್ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಲಿಂಗಪಟ್ಟಣ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಮಾ ದ್ವಿತೀಯ ಸ್ಥಾನ ಪಡೆದರು. ಪ್ರಬಂಧ ಸ್ಪರ್ಧೆಯಲ್ಲಿ ಲಿಂಗಪಟ್ಟಣ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಿಂಧೂ ಶ್ರೀ ಪ್ರಥಮ ಸ್ಥಾನ ಪಡೆದರು. ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸುಜಾತ ದ್ವಿತೀಯ ಸ್ಥಾನ ಪಡೆದರು. ಇವರಿಗೆ ತೊರೆಕಾಡಹನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುನೀತ ಪ್ರಕಾಶ್ ಪ್ರಶಸ್ತಿ ಪತ್ರ ಹಾಗೂ ಬಹುಮಾನ ನೀಡಿ ಅಭಿನಂದಿಸಲಾಯಿತು. ಮಾರಗೌಡನಹಲ್ಳಿ ಮುಖ್ಯ ಶಿಕ್ಷಕ ಎ.ಎಸ್. ದೇವರಾಜು, ಶಿಕ್ಷಣ ಸಂಯೋಜಕ ಕಾಳರಾಜೇಗೌಡ, ಎಚ್. ಶಿವರಾಂ, ಶ್ರೀನಿವಾಸ್ ತ್ರಿವೇಣಿ, ಎಸ್‌ಡಿಎಂಸಿ ಅಧ್ಯಕ್ಷ ಮರಿಸ್ವಾಮಿಗೌಡ, ರಾಜು, ಕೃಷ್ಣೇಗೌಡ, ಲಿಂಗೇಗೌಡ, ವಿಷಕಂಠೇಗೌಡ ಇತರರು ಇದ್ದರು.
ಸಂಗಮದಲ್ಲಿ ಮುಳುಗಿ
ವಿದ್ಯಾರ್ಥಿ ಸಾವು
ಕನಕಪುರ: ಪ್ರವಾಸಕ್ಕೆಂದು ಗೆಳೆಯರೊಂದಿಗೆ ಆಗಮಿಸಿದ್ದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟ ದಾರುಣ ಘಟನೆ ತಾಲೂಕಿನ ಪ್ರೇಕ್ಷಣೀಯ ಸ್ಥಳ ಸಂಗಮದಲ್ಲಿ ನಡೆದಿದೆ. ನತದೃಷ್ಟ ವ್ಯಕ್ತಿಯನ್ನು ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿನಯ್‌ಕುಮಾರ್(24) ಎಂದು ಗುರುತಿಸಲಾಗಿದೆ. ಮೂಲತಃ ಬೆಂಗಳೂರಿನ ಗಿರಿನಗರದ ನಿವಾಸಿಗಳಾದ ವಿಶ್ವನಾಥ್‌ರವರ ಪುತ್ರ ವಿನಯ್‌ಕುಮಾರ್ ತನ್ನ 14 ಮಂದಿ ಗೆಳೆಯರೊಂದಿಗೆ ಸಂಗಮಕ್ಕೆ ಆಗಮಿಸಿ ನೀರಾಟದಲ್ಲಿ ತೊಡಗಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಗುರುವಾರ ಸಂಜೆ ಮೃತಪಟ್ಟಿದ್ದಾನೆ. ಪೊಲೀಸರು ನುರಿತ ಈಜುಗಾರರ ಸಹಾಯ ಪಡೆದು ಶವವನ್ನು ಶೋಧಿಸಿ ಶವಪರೀಕ್ಷೆ ನಂತರ ಮೃತರ ಕುಟುಂಬದವರಿಗೆ ಒಪ್ಪಿಸಿದ್ದಾರೆ. ಸಾತನೂರು ಆರಕ್ಷಕ ಉಪನಿರೀಕ್ಷಕ ಸತೀಶ್ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com