ಕಿಕ್ಕೇರಿ: ಮಳೆ ಬೆಳೆ ಇಲ್ಲದೆ ರೈತ ಅತಂತ್ರನಾಗಿ ಗುಳೆ ಹೋಗುತ್ತಿದ್ದಾನೆ. ಇದನ್ನು ತಡೆಯಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘದ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಆಗ್ರಹಿಸಿದ್ದಾರೆ. ಪಟ್ಟಣದ ಬಸ್ ನಿಲ್ದಾಣದ ಬಳಿ ತಾಲೂಕು ಹಾಗೂ ಕಿಕ್ಕೇರಿ ಹೋಬಳಿ ಕಬ್ಬು ಬೆಳೆಗಾರರ ಒಕ್ಕೂಟ ಹಾಗೂ ಕರ್ನಾಟಕ ಕಾವಲು ಪಡೆ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ರೈತ ಸುಖಿಯಾದರೆ ಅದೇ ನನಗೆ ಸನ್ಮಾನ. ಜಾನುವಾರುಗಳಿಗೆ ಮೇವಿನ ಬರ ತೀವ್ರವಾಗಿ ಕಾಡುತ್ತಿದೆ.
ತಾಲೂಕಿನ ದಕ್ಷ ತಹಸೀಲ್ದಾರ್ ಡಾ.ಎಚ್.ಎಲ್.ನಾಗರಾಜುರವರ ವರ್ಗಾವಣೆಗೆ ರೈತ ಸಂಘದ ಪೂರ್ಣ ವಿರೋಧವಿದೆ. ಇವರು ಬಡ್ತಿ ಹೊಂದುವವರಿಗೆ ಇಲ್ಲೆ ಇರಲೇಬೇಕು. ರೈತರ ಹೆಸರು ಹೇಳಿ ಅಧಿಕಾರದ ಗದ್ದುಗೆ ಹಿಡಿಯುವುದು. ಸಾಲ ಮನ್ನ ಎನ್ನುವ ಡೊಂಗಿ ಮಂತ್ರ ಹೇಳಿ ಮುಗ್ಧ ರೈತನನ್ನು ವಂಚಿಸುವುದು ಭ್ರಷ್ಟ ರಾಜಕಾರಣಿಗಳ ಕುಟಿಲೋಪಾಯವಾಗಿದೆ ಎಂದು ಕಿಡಿಕಾರಿದರು.
ಯೋಗ್ಯರನ್ನು ಆಯ್ಕೆ ಮಾಡಬೇಕು: ರೈತರ ಬದುಕು ಹಸನಾಗಲು ರೈತಪರ, ಸಮಾಜಮುಖಿ ಹೋರಾಟಗಾರರನ್ನು ಹಾರಿಸಿ ಚುನಾಯಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಎಂಬುದನ್ನು ಮರೆಯದಿರಿ ಎಂದು ರೈತರಲ್ಲಿ ವಿನಂತಿಸಿದರು. ಕರ್ನಾಟಕ ಕಾವಲು ಪಡೆ ರಾಜ್ಯಾಧ್ಯಕ್ಷ ಎಂ.ಮೋಹನ್ಕುಮಾರ್ಗೌಡ ಮಾತನಾಡಿ, ಅಧಿಕಾರ ವಿಕೇಂದ್ರಿಕರಣವಾದರೂ ರೈತರ ಬದುಕು ಮಧ್ಯವರ್ತಿಗಳ ಹಾವಳಿಯಲ್ಲಿ ನಲುಗುತ್ತಿದೆ. ಭ್ರಷ್ಟರನ್ನು ಚುನಾಯಿಸದಿರಿ ಎಂದರು. ರಾಜ್ಯ ರೈತ ಸಂಘದ ಮಹಿಳಾ ಅಧ್ಯಕ್ಷೆ ನಂದಿನಿ ಜಯರಾಂ ಮಾತನಾಡಿ, ಮೌಲ್ಯ ಕುಸಿದಿಲ್ಲ. ಗೌರವಿಸುವ ಜನ ಬೇಕಿದೆ. ಕೈಗಾರಿಕೋದ್ಯಮಿಗಳಿಗೆ ಕರೆದು ಕರೆಂಟ್ ಕೊಡುವ ಸರ್ಕಾರ ರೈತರಿಗೇಕೆ ಕೊಡಲು ಹಿಂಜರಿಯುತ್ತಿದೆ ಎಂದು ಕಿಡಿಕಾರಿದರು. ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ಮಾತನಾಡಿ, ಕಾಂಗ್ರೆಸ್ ಗರಿಗರಿಯಾದ ಬಿಳಿ ಬಟ್ಟೆ ತೊಟ್ಟು ಕಾರಿನಲ್ಲಿ ಬಂದು ರೈತರ ಸಾಲಮನ್ನಾ ಎನ್ನುವ ಭರವಸೆ ನೀಡಿದರೆ. ಜೆಡಿಎಸ್ ಇದೇ ಮಂತ್ರವನ್ನು ಜಪಿಸುತ್ತ ಸರ್ಕಾರ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಎಲ್ಲ ಸಾಲ ಮನ್ನಾ ಎನ್ನುತ್ತಿದೆ ಎಂದು ಲೇವಡಿ ಮಾಡಿದರು.
ಪ್ರಧಾನ ಕಾರ್ಯದರ್ಶಿ ಬಡಗಲಪುರದ ನಾಗೇಂದ್ರ ಮಾತನಾಡಿ, ಸಂಪನ್ಮೂಲ ಲೂಟಿ ಮಾಡುವ ರಾಜಕಾರಣಿಗಳನ್ನು ನಂಬದೆ ರೈತಪರ, ಜನಪರ ಹೋರಾಟಗಾರರನ್ನು ಚುನಾಯಿಸಿ ಎಂದು ನಿವೇದಿಸಿಕೊಂಡರು.
ಇಂದಿರಾ ಸತೀಶ್ ನಿರೂಪಿಸಿದರು. ಹೇಮಚಂದ್ರ ತಂಡದವರು ನಾಡಗೀತೆ, ಕ್ರಾಂತಿ ಗೀತೆ ಹಾಡಿದರು. ಶ್ರವಣನಹಳ್ಳಿ ಕರೀಗೌಡ ಸ್ವರಚಿತ ಲಾವಣಿ ಹಾಡಿ ರಂಜಿಸಿದರು. ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಮುದುಗೆರೆ ರಾಜೇಗೌಡ ಸ್ವಾಗತಿಸಿದರು. ಕಾರಿಗಾನಹಳ್ಳಿ ಕುಮಾರ್ ವಂದಿಸಿದರು.
ಆಯೋಜಕರು ಕೆಎಸ್ಪಿ ಅವರಿಗೆ ಬೆಳ್ಳಿ ಕತ್ತಿ ನೀಡಿ, ಮೈಸೂರು ಪೇಟ, ಶಾಲು ಹೊದಿಸಿ ಸನ್ಮಾನಿಸಿದರೆ, ಹೋಬಳಿಯ ವಿವಿಧ ರೈತ ಮುಖಂಡರು, ಕೆ.ಎಸ್.ಪ್ರಭಾಕರ್ ಅಭಿಮಾನಿ ಬಳಗದವರು ಪುಷ್ಪಮಾಲೆ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಮುಖಂಡರಾದ ಕೆ.ಆರ್.ಜಯರಾಂ, ಜಿಲ್ಲಾಧ್ಯಕ್ಷ ನರಸರಾಜು, ಎಂ.ವಿ.ರಾಜೇಗೌಡ, ಕೆ.ಜಿ.ಅಣ್ಣಯ್ಯ, ಕಾಯಿ ಮಂಜೇಗೌಡ, ಕಾರಿಗಾನಹಳ್ಳಿ ಕುಮಾರ್,ನಾರಾಯಣಸ್ವಾಮಿ, ಬೋರಾಪುರ ಮಂಜುನಾಥ್, ಕೆ.ಎನ್.ಪುಟ್ಟೇಗೌಡ, ಕಾಯಿ ಮಂಜೇಗೌಡ, ಮೈಸೂರು ವಿಭಾಗದ ರೈತ ಸಂಘದ ಅಧ್ಯಕ್ಷ ರಾಮಸ್ವಾಮಿ, ಹಾಸನ ಶ್ರೀಕಂಠ್, ತಾಲೂಕು ರೈತ ಸಂಘದ ಅಧ್ಯಕ್ಷ ಪಿ.ಬಿ.ಮಂಚನಹಳ್ಳಿ ನಾಗಣ್ಣಗೌಡ, ಯುವ ಘಟಕದ ಅಧ್ಯಕ್ಷ ಮರುವನಹಳ್ಳಿ ಶಂಕರ್ ಮೊದಲಾದವರು ಉಪಸ್ಥಿತರಿದ್ದರು.