ಮಳವಳ್ಳಿ: ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಂಡಿಸಿದರೂ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ ಅನುಷ್ಠಾನಗೊಳಿಸುವೆ ಎಂದು ಕೆಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಸೋಮವಾರ ಮಳವಳ್ಳಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಕೆಜೆಪಿ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು 30 ವರ್ಷಗಳ ಸುದೀರ್ಘ ರಾಜಕೀಯ ಭವಿಷ್ಯವನ್ನೇ ಸಾರ್ವಜನಿಕರ ಸೇವೆಗೆ ಮುಡುಪಾಗಿಟ್ಟಿದ್ದು, ನನ್ನ ಬೆನ್ನಿಗೆ ನಮ್ಮವರೆ ಚೂರಿ ಹಾಕಿದರು ಎಂದರು.
ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ನ್ಯಾಯ ದೊರಕಿಸಬೇಕಾದರೆ ರಾಜ್ಯದಲ್ಲಿ ಪ್ರದೇಶಿಕ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯ. ಕರ್ನಾಟಕದ ನೆಲ-ಜಲ ಹಾಗೂ ಭಾಷೆಯನ್ನು ಸಂರಕ್ಷಿಸಬೇಕಾದ ಹೊಣೆ ನಮ್ಮೆಲ್ಲರ ಮುಂದಿದ್ದು, ಪ್ರತಿ ಬಾರಿಯು ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಲೇ ಬಂದಿದೆ. ಇದಕ್ಕೆ ಕಾರಣ ನೆರೆ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿವೆ. ರಾಜ್ಯದಲ್ಲೂ ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.
ಶ್ರೀಸಾಮಾನ್ಯನ ನೋವಿಗೆ ಯಾರು ಸ್ಪಂದಿಸುತ್ತಿಲ್ಲ. ನನ್ನ ಅಧಿಕಾರಾವಧಿಯಲ್ಲಿ ಜಾರಿಗೆ ತಂದ ಭಾಗ್ಯಲಕ್ಷ್ಮಿ ಯೋಜನೆ, ಸಂಧ್ಯಾ ಸುರಕ್ಷ, ವೃದ್ಧಾಪ್ಯ ವೇತನ, ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಕಾರ್ಯಕ್ರಮಗಳು ರಾಜ್ಯದ ಪ್ರತಿಯೊಂದು ಮನೆಯಲ್ಲಿಯೂ ಸೌಲಭ್ಯ ಪಡೆದ ಫಲಾನುಭವಿಗಳಿದ್ದಾರೆ ಎಂದು ವಿವರಿಸಿದರು. ಮುಂಬರುವ ವಿಧಾನಸಭಾ ಚುನಾವಣೆಗೆ ಮಳವಳ್ಳಿ ಮೀಸಲು ಕ್ಷೇತ್ರದಲ್ಲಿ ಕಳೆದ 4 ವರ್ಷಗಳಿಂದ ಮಳವಳ್ಳಿ ಜನರ ಪ್ರೀತಿ- ವಿಶ್ವಾಸ ಗಳಿಸಿರುವ ಸಮಾಜ ಸೇವಕ ಮುನಿರಾಜು ಮುಂದಿನ ಅಭ್ಯರ್ಥಿ ಎಂದು ಘೋಷಿಸಿದರು.
ಇದಕ್ಕೂ ಮುನ್ನ ಬೃಹತ್ ಮೆರವಣಿಗೆಯಲ್ಲಿ ವೇದಿಕೆಗೆ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರನ್ನು ಕರೆತರಲಾಯಿತು. ಕೆಜೆಪಿಯ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ ಮುಕ್ಕುಡಪ್ಪ ಮಾತನಾಡಿ, ಅಧಿಕಾರಕ್ಕಾಗಿ ಆಸೆ ಪಟ್ಟವರು ಮಾತ್ರ ಬಿಜೆಪಿಯಲ್ಲಿ ಉಳಿದಿದ್ದಾರೆ. ಸರ್ಕಾರ ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ ಖಾಲಿ ಮನೆಯಾಗಲಿದೆ ಎಂದು ತಿಳಿಸಿದರು.
ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಜಿ. ಮುನಿರಾಜು ಅವರನ್ನು ಆಶೀರ್ವದಿಸಿ ಎಂದು ಕೋರಿದ ಅವರು, ಕಳೆದ ಬಾರಿ ಪಕ್ಷೇತರವಾಗಿ ಗೆದ್ದ ಈ ಕ್ಷೇತ್ರದ ಶಾಸಕ ನರೇಂದ್ರಸ್ವಾಮಿ ಅವರು ಯಡಿಯೂರಪ್ಪ ಅವರಿಂದಲೇ ಅಧಿಕಾರಕ್ಕೆ ಬಂದಿದ್ದು, ಕೋಟಿಗಟ್ಟಲೆ ಹಣ ನೀಡಿದ ಫಲವಾಗಿ ಕ್ಷೇತ್ರ ಅಭಿವೃದ್ಧಿಯತ್ತ ದಾಪುಗಾಲು ಹಾಕಲು ಕಾರಣವಾಗಿತ್ತು ಎಂದರು. ಸಮಾರಂಭದಲ್ಲಿ ಮಾಜಿ ಸಚಿವ ಸಿ.ಎಂ. ಉದಾಸಿ, ಲಕ್ಷ್ಮಿನಾರಾಯಣ್, ಮುಮ್ತಾಜ್ ಅಲಿಖಾನ್, ಬಿ.ಜೆ. ಪುಟ್ಟಸ್ವಾಮಿ, ಸಿದ್ದಲಿಂಗಸ್ವಾಮಿ, ಖುರೇಷಿ, ಮಲ್ಲಾಡಿ ನಾಗರಾಜ್, ಮಂಜುಳಾ, ಉಮಾಪತಿ ಇದ್ದರು.