ಜಯಲಲಿತಾ ಹೊಸ ಕ್ಯಾತೆ ರೈತ ಸಮುದಾಯ ಗರಂ

Updated on: 

 ವಿಶೇಷ ವರದಿ
ಮಂಡ್ಯ: ತಮಿಳುನಾಡಿನ ರೈತರ ಬೆಳೆ ನಷ್ಟಕ್ಕೆ ಕರ್ನಾಟಕದಿಂದ ಪರಿಹಾರ ಕೊಡಿಸುವಂತೆ ಹೊಸ ಕ್ಯಾತೆ ತೆಗೆದಿರುವ ಮುಖ್ಯಮಂತ್ರಿ ಜಯಲಲಿತಾ ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವುದನ್ನು ಬಲವಾಗಿ ಖಂಡಿಸಿರುವ ಜಿಲ್ಲಾ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಕಾಲಕ್ಕೆ ಕರ್ನಾಟಕ ಕಾವೇರಿ ನೀರು ಬಿಡದೆ ಇರುವುದರಿಂದ ತಮಿಳುನಾಡಿನ ರೈತರ ಬೆಳೆ ನಷ್ಟವಾಗಿದೆ. ಅದಕ್ಕಾಗಿ ತಮಿಳುನಾಡಿನ ರೈತರಿಗೆ ಪರಿಹಾರ ಕೊಡಿಸಿ ಎಂಬುದು ಅರ್ಜಿಯ ಒಟ್ಟು ಸಾರಾಂಶ. ಇದೊಂದು ಮೂರ್ಖತನದ ಕೋರಿಕೆಯಾಗಿದೆ ಎಂದು ಜಿಲ್ಲಾ ರೈತ ಸಮುದಾಯ ವಾದವನ್ನು ಅಲ್ಲಗಳೆದಿದೆ.
ಕಳೆದ ವರ್ಷ ಮಳೆ ಆಗದೆ ಕರ್ನಾಟಕದ ರೈತರ ಬೆಳೆ ನಷ್ಟವಾಗಿರುವುದಕ್ಕೆ ಬಿಡಿಗಾಸನ್ನು ಯಾವುದೇ ಪರಿಹಾರದ ರೂಪದಲ್ಲಿ ರಾಜ್ಯ ಸರ್ಕಾರ ನೀಡಲಿಲ್ಲ. ಇಂತಹ ಸಂದರ್ಭದಲ್ಲಿ ತಮಿಳುನಾಡಿನ ರೈತರಿಗೆ ಪರಿಹಾರ ಕೊಡುವ ಔದಾರ್ಯ ಏಕೆ ಎಂಬುದು ರೈತರ ಪ್ರಶ್ನೆ.  
ಯಾವ ನ್ಯಾಯವಿದೆ: ಪದೇ ಪದೇ ಕ್ಯಾತೆ ಮಾಡಿ ಕಾವೇರಿ ನೀರು ಬಿಡಿಸಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಜಯಲಿಲಿತಾ, ಸ್ವಾರ್ಥಕ್ಕಾಗಿ ಯಾವ ಮಟ್ಟವನ್ನಾದರೂ ತಲುಪುತ್ತಾರೆ ಎನ್ನುವುದಕ್ಕೆ ಬೆಳೆ ಪರಿಹಾರ ಕೇಳಿ ಅರ್ಜಿ ಹಾಕಿರುವುದೇ ಸಾಕ್ಷಿ. ತಮ್ಮ ರೈತರಿಗೆ ಬೆಳೆ ನಷ್ಟವಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿ ಪರಿಹಾರ ಕೇಳಿದ್ದರೆ ತಪ್ಪಿರಲಿಲ್ಲ. ಆದರೆ ಸಕಾಲಕ್ಕೆ ಕೇಳಿದಷ್ಟು ನೀರು ಕೊಡದೇ ಇರುವ ಕರ್ನಾಟಕದಿಂದ ತಮಿಳುನಾಡು ರೈತರಿಗೆ ಬೆಳೆ ಪರಿಹಾರ ಕೊಡಿಸಿ ಎಂದು ಕೇಳುವುದರಲ್ಲಿ ಯಾವ ನ್ಯಾಯವಿದೆ ಎಂದು ರೈತ ಸಮುದಾಯ ಪ್ರಶ್ನೆ ಮಾಡುತ್ತಿದೆ.
ರಾಜ್ಯ ಸರ್ಕಾರ ಇಂತಹ ಬೇಡಿಕೆ ಮತ್ತು ಬೆದರಿಕೆಗೆ ಸೊಪ್ಪು ಹಾಕದೇ ಖಡಾ ಖಂಡಿತವಾಗಿ ತಳ್ಳಿ ಹಾಕಬೇಕು ಮತ್ತು ರಾಜ್ಯದ ರೈತ ಬೆಳೆ ನಷ್ಟದ ಅಂದಾಜು ಮಾಡಿಸಿ ಕೂಡಲೇ ಪರಿಹಾರ ಕೊಡಬೇಕು ಎನ್ನುವುದು ಜಿಲ್ಲೆಯ ರೈತರ ಒತ್ತಾಯವಾಗಿದೆ.  
ನಿರ್ಲಕ್ಷ್ಯ ತೋರಿರುವ ಸರ್ಕಾರ: ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರಿದೆ. ಜ.31 ರೊಳಗೆ ಕಾವೇರಿ ನ್ಯಾಯ ಮಂಡಳಿ ನೀಡಿರುವ ಐತೀರ್ಪಿನ ಅಧಿಸೂಚನೆ ಹೊರಡಿಸುವಂತೆ ನ್ಯಾಯಲಯ ನಿರ್ದೇಶನ ನೀಡಿದೆ. ಇದನ್ನು ಪ್ರಶ್ನೆ ಮಾಡಿ ಅರ್ಜಿ ಸಲ್ಲಿಸುವುದಾಗಲಿ ಅಥವಾ ಪ್ರಧಾನಿಗಳನ್ನು ನಿಯೋಗದೊಂದಿಗೆ ಭೇಟಿ ಮಾಡಿ ಅಧಿಸೂಚನೆ ಕೈ ಬಿಡುವಂತೆ ಮನವಿ ಮಾಡುವ ಯಾವುದೇ ಪ್ರಯತ್ನವನ್ನು ಮುಖ್ಯಮಂತ್ರಿ ಜಗದೀಶಶೆಟ್ಟರ್ ಮಾಡಿಲ್ಲ. ವಿರೋಧ ಪಕ್ಷಗಳು ಕೂಡ ಈ ವಿಷಯದಲ್ಲಿ ದಿವ್ಯ ಮೌನ ತಳಿದಿವೆ.
ಮುಖ್ಯಮಂತ್ರಿಗಳು, ನೀರಾವರಿ ಸಚಿವರು ಸೇರಿದಂತೆ ಇಡೀ ಸರ್ಕಾರ ಬಜೆಟ್ ಸಿದ್ದತೆ ಮಾಡುವ ಗಡಿಬಿಡಿಯಲ್ಲಿದೆ. ಫೆಬ್ರವರಿ ಮೊದಲ ವಾರದಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವ ಸಿದ್ದತೆ ಮಾಡುತ್ತಿದೆ. ಇದು ರಾಜ್ಯ ರೈತರ ಪಾಲಿಗೆ ಅದು ಉರುಳಾಗುತ್ತದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು. ರಾಜ್ಯ ಸರ್ಕಾರ ರೈತರ ಹಿತ ಕಾಯುವ ಬಗ್ಗೆ ಪದೇ ಪದೇ ನೀಡುವ ಯಾವುದೇ ಆಶ್ವಾಸನೆಯಲ್ಲಿ ಯಾವುದೇ ಹರುಳಿಲ್ಲ. ಕಾವೇರಿ ನದಿ ನೀರಿನ ವಿಚಾರ ರೈತರ ಬದುಕಿನ ಪ್ರಶ್ನೆಯಾಗಿದೆ. ಕೂಡಲೇ ಉಗ್ರ ವಿರೋಧವನ್ನು ವ್ಯಕ್ತಪಡಿಸಿಯಾದರೂ ಅಧಿಸೂಚನೆ ಹೊರಡಿಸದಂತೆ ಒತ್ತಡ ಹೇರುವ ಹೊಣೆ ರಾಜ್ಯ ಸರ್ಕಾರದ್ದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com