ಕಿಕ್ಕೇರಿ: ಆಧುನಿಕ ಯುಗದಲ್ಲಿ ಅಶ್ಲೀಲ, ದ್ವಂದ್ವಾರ್ಥವಿಲ್ಲದ ಪ್ರೇಮವನ್ನು ಕವಿತೆ ಮೂಲಕ ನಾಡಿಗೆ ಸಾರಿದ ಶ್ರೇಷ್ಠ ಕವಿ ಕೆ.ಎಸ್. ನರಸಿಂಹಸ್ವಾಮಿಯವರು ಎಂದು ತಾಲೂಕು ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ವಿನೋದ್‌ಸಿಂಗ್ ಬಣ್ಣಿಸಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ ಹಾಗೂ ಲಯನ್ಸ್ ಕ್ಲಬ್‌ನವರು ಕಸಾಪ ನಡಿಗೆ ಕಾಲೇಜು ಬಳಿಗೆ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದ್ದ ಕಿಕ್ಕೇರಿಯ ಪ್ರೇಮ ಕವಿ ಮೈಸೂರು ಮಲ್ಲಿಗೆಯ ಕೆ.ಎಸ್. ನರಸಿಂಹಸ್ವಾಮಿ ಒಂದು ನೆನಪು ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು. ಕಿಕ್ಕೇರಿ ಹಲವು ಕೊಡುಗೆ ನೀಡಿದ್ದು, ಅದರಲ್ಲಿ ಅನರ್ಘ್ಯ ರತ್ನ ಪ್ರೇಮ ಕವಿ ಕೆ.ಎಸ್.ನರಸಿಂಹಸ್ವಾಮಿಯವರು ಎಂದು ಹೇಳಿದರು.
ನವ್ಯ ಕಾಲದ ಯುವ ಪೀಳಿಗೆ ತಪ್ಪದೆ ಕೆಎಸ್‌ಎನ ಅವರ ಕವಿತೆ ಓದಿದರೆ ಬಹುತೇಕ ಡಾಂಬೀಕರಣದ ಪ್ರೇಮ ದೂರವಾಗಲಿದೆ. ಯುವ ಪೀಳಿಗೆ ದಾಂಪತ್ಯದ ನಿಜವಾದ ಅರ್ಥ ತಿಳಿಯುತ್ತದೆ. ತಪ್ಪುದಾರಿಯ ಕ್ಷಣಿಕ, ಕುರುಡು ಪ್ರೇಮ ಮರೆಯಾಗಲಿದೆ. ಪ್ರೇಮಕವಿ ನೆನೆಯವುದು ಕಾಯಕಕ್ಕೆ ಜನರು ಮುಂದಾಗಬೇಕು. ಹುಟ್ಟಿದ ಮನೆಯನ್ನು ಸ್ಮಾರಕವಾಗಿಸಲು ಮುಂದಾಗಬೇಕು. ಸಾಹಿತ್ಯಾಸಕ್ತರಿಗೆ ಕವಿವರ್ಯರ ಸ್ಮಾರಕ ವೀಕ್ಷಿಸಲು ಅನುವು ಮಾಡಿಕೊಟ್ಟರೆ ಊರಿನ ಕೀರ್ತಿ ರಾಷ್ಟ್ರಾದ್ಯಂತ ಹಬ್ಬಲಿದೆ ಎಂದರು.
ಪ್ರಾಂಶುಪಾಲ ಬಿ.ಮಂಚೇಗೌಡ ಮಾತನಾಡಿ, ಅಂಕು- ಡೊಂಕು ಇಲ್ಲದ ಕನ್ನಡದ ಷೇಕ್ಸ್‌ಪಿಯರ್‌ರಂತಿರುವ ಪ್ರೇಮಕವಿ ನೆನೆಯುವುದು ಪುಣ್ಯ ಕೆಲಸವಾಗಿದೆ. ನಾಡಿಗೆ ಕೀರ್ತಿ ತಂದ ಶ್ರೇಷ್ಠರನ್ನು ನೆನೆಯುವಂತೆ ವಿದ್ಯಾರ್ಥಿಗಳು ತಮ್ಮ ಬದುಕನ್ನು ರೂಢಿಸಿಕೊಂಡು ಸಂಸ್ಕೃತಿ, ಸಂಸ್ಕಾರ ಎತ್ತಿ ಹಿಡಿಯಬೇಕು ಎಂದು ಆಶಿಸಿದರು.
ತಾಲೂಕು ಉಪನ್ಯಾಸಕ ಸಂಘದ ಅಧ್ಯಕ್ಷ ಮೋಹನ್ ಇದ್ದರು.
Advertisement